ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನೋಪಾಯಕ್ಕಾಗಿ ಎಲ್‌ಐಸಿ ಏಜೆಂಟ್‌ ಕೆಲಸ: ಕೈಯಲ್ಲಿ ಆರ್‌ಟಿಐ ಬ್ರಹ್ಮಾಸ್ತ್ರ..!

ಕಾಯ್ದೆ ದುರ್ಬಳಕೆ: 6 ತಿಂಗಳ ಸಜೆ
Last Updated 16 ನವೆಂಬರ್ 2019, 4:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಎಲ್ಲ ಕಾನೂನುಗಳಿಗೂ ಒಂದು–ಮತ್ತೊಂದು ಮುಖ ಇದ್ದೇ ಇರುತ್ತದೆ. ಅವುಗಳಲ್ಲಿ ನಾವು ಸದುಪಯೋಗದ ಮುಖವನ್ನು ಪರಿಗಣಿಸಬೇಕೆ ಹೊರತು ದುರುಪಯೋಗದ ಮುಖವನ್ನಲ್ಲ...

ಮಾಹಿತಿ ಹಕ್ಕು ಕಾಯ್ದೆ–2005ರ (ಆರ್‌ಟಿಐ) ದುರ್ಬಳಕೆ ಅಡಿಯಲ್ಲಿ ಆರ್‌ಟಿಐ ಕಾರ್ಯಕರ್ತರೂ ಆದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಎನ್‌.ಹನುಮೇಗೌಡ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿರುವ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ತನ್ನ ಆದೇಶದಲ್ಲಿ ಈ ಅಂಶವನ್ನು ದಾಖಲಿಸಿದೆ.

‘ಸಾರ್ವಜನಿಕ ಆಡಳಿತದ ಹೊಣೆಗಾರಿಕೆ ಮತ್ತು ಪಾರದರ್ಶಕತೆ ದೃಷ್ಟಿಯಿಂದ ಸರ್ಕಾರದ ಯಾವುದೇ ದಸ್ತಾವೇಜುಗಳು, ಒಪ್ಪಂದಗಳು, ದಾಖಲೆಗಳು, ಸುತ್ತೋಲೆಗಳು, ಇ–ಮೇಲ್‌ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಪ್ರಕಟಣೆ, ಆದೇಶಗಳು, ಮಾದರಿಗಳು, ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾದ ಅಂಕಿ ಅಂಶಗಳೆಲ್ಲವೂ ನಮಗಿಂದು ಸುಲಭವಾಗಿ ಆರ್‌ಟಿಐ ಕಾಯ್ದೆಯಡಿ ದೊರೆಯುವಂತಾಗಿದೆ. ಆದರೆ, ಈ ಪ್ರಕರಣದಲ್ಲಿ ಆರೋಪಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

‘ಬಹಳಷ್ಟು ಪ್ರಕರಣಗಳಲ್ಲಿ ಆರ್‌ಟಿಐ ಕಾಯ್ದೆ ದುರುಪಯೋಗವಾಗುತ್ತಿದೆ. ಈ ಪ್ರಕರಣದಲ್ಲಿಯೂ ಆಗಿದೆ. ಹನುಮೇಗೌಡ ಗಾಣಿಗ ಸಮುದಾಯಕ್ಕೆ ಸೇರಿದವರೂ ಅಲ್ಲ ಅಥವಾ ಇನ್ನಾವುದೇ ಪ್ರಮುಖ ಸಂಸ್ಥೆಯ ಸದಸ್ಯರೂ ಅಲ್ಲ. ಇವರಿಗೇಕೆ ವಿಶ್ವ ಗಾಣಿಗ ಸಮುದಾಯ ಚಾರಿಟಬಲ್‌ ಟ್ರಸ್ಟ್‌ನ ಉಸಾಬರಿ’ ಎಂದು ಆದೇಶದಲ್ಲಿ ಪ್ರಶ್ನಿಸಲಾಗಿದೆ.

‘ಹನುಮೇಗೌಡ ಉದರಂಭರಣಕ್ಕೆ ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಾರೆ. ಆದರೆ, ಆರ್‌ಟಿಐ ಎಂಬ ಬ್ರಹ್ಮಾಸ್ತ್ರವನ್ನು ಇರಿಸಿಕೊಂಡು ಸಮಾಜದಲ್ಲಿ ಗಣ್ಯರನ್ನು ಆಧಾರರಹಿತವಾಗಿ ಹೆದರಿಸುವ ಮಾನನಷ್ಟ ಮಾಡುವ ಚಾಳಿ ಹೊಂದಿದ್ದಾರೆ. ಹೀಗಾಗಿ ಇಂಹತವರಿಗೆ ಸಜೆ ವಿಧಿಸಬೇಕಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಪತ್ರಕರ್ತರಿಗೂ ಎಚ್ಚರಿಕೆ: ಪತ್ರಕರ್ತರೂ ಹಗರಣಗಳ ಬಗ್ಗೆ ವರದಿ ಪ್ರಕಟಿಸುವಾಗ ಜಾಗೂರಕತೆಯಿಂದ ಇರಬೇಕು’ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.

‘ಸತ್ಯಾಂಶಗಳ ಕೊಂಡಿಯೇ ಇಲ್ಲ’

‘ಬಿ.ಜೆ.ಪುಟ್ಟಸ್ವಾಮಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಇವರೊಬ್ಬ ಅಸಮರ್ಥ, ಅಯೋಗ್ಯ, ಸರ್ಕಾರಿ ಆಸ್ತಿಯನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ನೋಂದಣಿಯಿಲ್ಲದ ಶಾಲೆ ನಡೆಸುತ್ತಿದ್ದಾರೆ’ ಎಂಬ ಹನುಮೇಗೌಡರ ಆರೋಪಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

‘ಆರೋಪಿ ಹನುಮೇಗೌಡ, ಪುಟ್ಟಸ್ವಾಮಿ ವಿರುದ್ಧ ಬಹಳಷ್ಟು ಸಕ್ಷಮ ಪ್ರಾಧಿಕಾರಗಳ ಮುಂದೆ ಅರ್ಜಿ ಹಾಕಿದ್ದಾರೆ. ಅವರನ್ನು ಬಾಯಿಗೆ ಬಂದಂತೆ ಟೀಕಿಸಿ ಅವರ ವಿರುದ್ಧ ಆರೋಪಗಳ ಮೂಟೆ ಹೊರಿಸಿದ್ದಾರೆ. ಆದರೆ, ಆರೋಪಗಳಿಗೆ ಇರಬೇಕಾದ ಸತ್ಯಾಂಶದ ಕೊಂಡಿಗಳೇ ಇಲ್ಲ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಯಾವುದೀ ಮಾನನಷ್ಟ ಮೊಕದ್ದಮೆ?

‘ಗಾಣಿಗ ಜನಾಂಗದ ಗುರುಪೀಠಕ್ಕೆ 2011ರ ಫೆಬ್ರುವರಿಯಲ್ಲಿ ಬಜೆಟ್‌ನಲ್ಲಿ ₹ 5 ಕೋಟಿ ಮೀಸಲು ಇರಿಸಲಾಗಿತ್ತು. ಅಂತೆಯೇ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ಸರ್ವೇ ನಂಬರ್ 112ರಲ್ಲಿ ಗೋಮಾಳದ ಎಂಟು ಎಕರೆ ಜಮೀನನ್ನು ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ.

ಈ ಟ್ರಸ್ಟ್‌ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಬಿ.ಜೆ ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇವರು ತಮ್ಮ ಅಧಿಕಾರ ಬಳಸಿ ಈ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ಹನುಮೇಗೌಡ ಆರೋಪಿಸಿದ್ದರು. ಈ ಆರೋಪದ ವಿರುದ್ಧ ಪುಟ್ಟಸ್ವಾಮಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಆರೋಪ ಸಾಬೀತಾದ ಕಾರಣ ಹನುಮೇಗೌಡ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 25 ಸಾವಿರ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ ಎರಡು ತಿಂಗಳ ಜೈಲು ಶಿಕ್ಷೆ ಮತ್ತು ₹ 10 ಸಾವಿರ ಭದ್ರತೆ ನೀಡಬೇಕು ಎಂದು ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT