ಗುರುವಾರ , ಏಪ್ರಿಲ್ 15, 2021
19 °C

ಸಾರಕ್ಕಿ ಕೆರೆ ಪರಿಸರದಲ್ಲಿ ತೆರವಾಯಿತು 2 ಟನ್‌ ಕಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಜನ ಭಾನುವಾರ ರಜೆಯನ್ನು ಸವಿಯುತ್ತಿದ್ದರೆ, ಜರಗನಹಳ್ಳಿ ಪರಿಸರದ ಜನ ಸಾರಕ್ಕಿ ಕೆರೆ ಬಳಿ ಪ್ಲಾಸ್ಟಿಕ್‌ ಕಸ ಹೆಕ್ಕುವುದರಲ್ಲಿ ನಿರತರಾಗಿದ್ದರು. ಕೆಲವೇ ತಾಸುಗಳಲ್ಲಿ ಇಲ್ಲಿ 2 ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಕಸವನ್ನು ಸ್ಥಳೀಯರು ಸಂಗ್ರಹಿಸಿದರು.

ಇದಕ್ಕೆ ಅವಕಾಶ ಕಲ್ಪಿಸಿದ್ದು ಸಾರಕ್ಕಿ ಕೆರೆ ಮತ್ತು ಅಭಿವೃದ್ಧಿ ಟ್ರಸ್ಟ್ ಮತ್ತು ಜರಗನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ (ಜಾರ್ವ) ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಗ್‌ ರನ್‌ ಕಾರ್ಯಕ್ರಮ. ಓಡುತ್ತಲೇ ಕಸ ಹೆಕ್ಕುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ 100ಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗಿಯಾದರು.

‘ಪ್ಲಾಗ್‌ ಮ್ಯಾನ್‌’ಎಂದೇ ಹೆಸರುವಾಸಿಯಾಗಿರುವ ನಾಗರಾಜ್‌ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದರು. ಪರಿಸರವನ್ನು ಪ್ಲಾಸ್ಟಿಕ್‌ ಮುಕ್ತ ಗೊಳಿಸುವ ಹಾಗೂ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳುವ ಮಹತ್ವದ ಬಗ್ಗೆ ತಿಳಿಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಕೆ.ಎಸ್‌. ಭಟ್, ‘ಕೆರೆಗೆ ಯಾರೂ ಕಸ ಹಾಕದಂತೆ ನೋಡಿಕೊಳ್ಳಬೇಕು. ಕೆರೆಯ ಬದಿಯಲ್ಲಿ ಕಂಡುಬರುವ ಕಸವನ್ನು ತಕ್ಷಣವೇ ಹೆಕ್ಕಿ ತೆಗೆದರೆ ಅದು ನೀರಿನೊಳಗೆ ಸೇರಿಕೊಳ್ಳುವುದನ್ನು ತಡೆಗಟ್ಟಬಹುದು. ಕೆರೆಯ ಒಡಲಿಗೆ ಕಸ ಸೇರಿಕೊಂಡರೆ ಇದರ ಇಡೀ ಪರಿಸರ ವ್ಯವಸ್ಥೆ ಹದಗೆಡುತ್ತದೆ’ ಎಂದರು.

ಜಾರ್ವ ಅಧ್ಯಕ್ಷ ಪುರುಷೋತ್ತಮ್, ‘ಜರಗ ಎಂದರೆ ಚಿನ್ನದ ದೂಳು. ಅಕ್ಕಸಾಲಿಗರು ಚಿನ್ನದ ಕೆಲಸ ಮಾಡುತ್ತಿದ್ದ ಈ ಜಾಗಕ್ಕೆ ಜರಗನಹಳ್ಳಿ ಎಂಬ ಹೆಸರು ಬಂದಿದೆ. ಚಿನ್ನದ ದೂಳು ತುಂಬಿದ್ದ ಜಾಗದಲ್ಲಿ, ಜನ ಈಗ ಕಸವನ್ನು ಹುಡುಕುವ ಹಾಗಾಗಿದೆ. ನಾವೆಲ್ಲರೂ ಜಾಗ್ರತೆಯಿಂದ ಕಸ ನಿರ್ವಹಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು

ಬಿಬಿಎಂಪಿ ಹಾಗೂ ಲಯನ್ಸ್ ನಾಡಪ್ರಭು ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು