ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮಕ್ಕೆ ಚಾಲನೆ

ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಿಬಿಎಂಪಿ ನೆರವು
Last Updated 17 ಏಪ್ರಿಲ್ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ಸಿಗ್ನಲ್‌ಗಳ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಬಿಎಂಪಿ ಆರಂಭಿಸಿರುವ ‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಸಂಚಾರ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆಯಲ್ಲಿ ಹಾಗೂ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳ ಶಿಕ್ಷಣಕ್ಕೆ ಸಂಚಾರ ಶಾಲೆ ಆರಂಭಿಸುವಂತೆ ಹೈಕೋರ್ಟ್‌ ರಿಟ್‌ ಅರ್ಜಿಯೊಂದರ ವಿಚಾರಣೆ ವೇಳೆ 2020ರ ಡಿ 10ರಂದು ಆದೇಶ ಮಾಡಿತ್ತು. ಬಿಬಿಎಂಪಿಯ ಆಗಿನ ಆಯುಕ್ತ ಎನ್‌.ಮಂಜುನಾಥ ಪ‍್ರಸಾದ್ ಅವರು ಇಂತಹ ಮಕ್ಕಳ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು. ಸಂಚಾರ ಶಾಲೆ ಆರಂಭಿಸಲು 10 ಬಸ್‌ಗಳನ್ನು ಒದಗಿಸುವಂತೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕೋರಿದ್ದರು. ಬಿಎಂಟಿಸಿಯು 10 ಬಸ್‌ಗಳನ್ನು ಸಂಚಾರ ಶಾಲೆಗಳನ್ನಾಗಿ ಪರಿವರ್ತಿಸಿ ಬಿಬಿಎಂಪಿಗೆ 2021ರ ಮಾರ್ಚ್‌ 22ರಂದು ಹಸ್ತಾಂತರಿಸಿತ್ತು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಅವರ ಕೋರಿಕೆ ಮೇರೆಗೆ ಬಿಬಿಎಂಪಿಯು ದಕ್ಷಿಣ ವಲಯದ ಹೊಸಕೆರೆಹಳ್ಳಿಯ ಕೊಳೆಗೇರಿ, ರಾಜರಾಜೇಶ್ವರಿನಗರ ವಲಯದ ದೊಡ್ಡಗೊಲ್ಲರಹಟ್ಟಿಯಲ್ಲಿ ಸಂಚಾರ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಂಡಿದೆ.

ಮನೆ ಬಾಗಿಲಿಗೆ ಶಾಲೆ ಕಾರ್ಯಕ್ರಮದಡಿ ಪ್ರತಿ ಬಸ್‌ಗೆ ತಲಾ ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬರು ಆಯಾ ಅವರನ್ನು ನಿಯೋಜಿಸಲಾಗುತ್ತಿದೆ. ಸಂಚಾರ ಶಾಲೆಯನ್ನಾಗಿ ಪರಿವರ್ತಿಸಿರುವ ಬಸ್‌ಗಳಲ್ಲಿ ಮಕ್ಕಳ ಸ್ನೇಹಿ ಚಿತ್ರಗಳನ್ನು ಕಲಿಕಾ ದೃಷ್ಟಿಯಿಂದ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಅವಶ್ಯಕತೆ ಇರುವ ಇತರ ಸ್ಥಳಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌, ಹೈಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT