ಶನಿವಾರ, ಜನವರಿ 23, 2021
22 °C
ಆರತಿ ಬೆಳಗಿ, ಚಾಕಲೇಟ್‌ ನೀಡಿ ಮಕ್ಕಳನ್ನು ಸ್ವಾಗತಿಸಿದ ಚಿಣ್ಣರು

ಆತಂಕ ಮೀರಿ ಶಾಲೆಗಳತ್ತ ಚಿಣ್ಣರ ಹೆಜ್ಜೆ; ಹೊಸ ವರ್ಷದಲ್ಲಿ ನವ ಹುರುಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಳಿರು–ತೋರಣಗಳಿಂದ ಶೃಂಗರಿಸಿದ್ದ ಪ್ರವೇಶ ದ್ವಾರಗಳು, ಆವರಣದಲ್ಲಿ ಬಣ್ಣದ ರಂಗೋಲಿಯ ಚಿತ್ತಾರ, ಸರದಿಯಲ್ಲಿ ಬಂದ ವಿದ್ಯಾರ್ಥಿಗಳು, ಹೂವು ನೀಡಿ, ಆರತಿ ಮಾಡಿ ಸ್ವಾಗತಿಸಿದ ಶಿಕ್ಷಕರು...

ನಗರದ ಶಾಲಾ–ಕಾಲೇಜುಗಳಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ಹೊಸ ವರ್ಷದ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆನೇಕಲ್ ತಾಲ್ಲೂಕಿನ ಹೆನ್ನಾಗರ, ಹೆಬ್ಬಗೋಡಿ, ಚಂದಾಪುರ ಚತ್ರಖಾನೆ, ಅತ್ತಿಬೆಲೆ, ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ, ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಗಳಿಗೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು. ಅವರೊಂದಿಗೆ ಸಂವಾದ ನಡೆಸಿ, ಧೈರ್ಯದಿಂದ ಶಾಲೆಗೆ ಬರುವಂತೆ ಹುರಿದುಂಬಿಸಿದರು.

‘ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಬಂದರೆ ಶಾಲೆಗೆ ಬರಬೇಡಿ, ಗುಣಮುಖರಾದ ನಂತರವೇ ಬನ್ನಿ’ ಎಂದೂ ಸಲಹೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳನ್ನು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಿದರು. ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಜೆ.ಮಂಜುನಾಥ್ ಶ್ರೀರಾಂಪುರದ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.

ಜಾಗೃತಿ: ಶಾಲಾ-ಕಾಲೇಜಿಗೆ ಬರುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಿಂದಾಗ್ಗೆ ಕೈಗಳನ್ನು ತೊಳೆಯಬೇಕು ಹಾಗೂ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಚಾಮರಾಜಪೇಟೆಯ ಸರ್ ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಶಿಕ್ಷಕರೊಬ್ಬರು ಕೊರೊನಾ ಸೋಂಕಿನ ವೇಷ ಧರಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.

ಎಲ್ಲ ಶಾಲಾ-ಕಾಲೇಜುಗಳ ಆವರಣ ಮತ್ತು ಕೊಠಡಿಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿತ್ತು. ಶಾಲಾ ಕೊಠಡಿಯಲ್ಲಿ ಅಂತರ ಕಾಯ್ದುಕೊಂಡು 15 ರಿಂದ 20 ಮಕ್ಕಳಿಗಷ್ಟೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನಿರ್ದಿಷ್ಟ ಸಾಲಿನಲ್ಲಿಯೇ ಕೊಠಡಿಗಳಿಗೆ ಹೋಗಲು ‘ಮಾರ್ಕಿಂಗ್’ ಮಾಡಲಾಗಿತ್ತು. ಪ್ರವೇಶ ದ್ವಾರದಲ್ಲಿಯೇ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಿ, ಒಳಗೆ ಬಿಡಲಾಗುತ್ತಿತ್ತು.

ಬಿಬಿಎಂಪಿ ಅಧೀನದ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯ ಶೇ 40ರಷ್ಟು ವಿದ್ಯಾರ್ಥಿಗಳು, ಬಿಬಿಎಂಪಿ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯ ಶೇ 31 ವಿದ್ಯಾರ್ಥಿಗಳು ಶುಕ್ರವಾರ ತರಗತಿಗೆ ಹಾಜರಾದರು. 

ಖಾಸಗಿ ಶಾಲೆಗಳಲ್ಲಿಯೂ ಸಂಭ್ರಮ: ನಗರದ ಖಾಸಗಿ ಶಾಲಾ–ಕಾಲೇಜುಗಳೂ ಶುಕ್ರವಾರ ಕಳೆಗಟ್ಟಿದ್ದವು. ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ತರಗತಿಗಳು ನಡೆದವು. ಹಲವು ಕಡೆಗಳಲ್ಲಿ ಕೆಲವು ಮಕ್ಕಳು ತಮ್ಮದೇ ಆದ ಸ್ಯಾನಿಟೈಸರ್‌ ಬಾಟಲಿಗಳನ್ನು ಜೊತೆಗಿಟ್ಟುಕೊಂಡಿದ್ದು ಕಂಡು ಬಂತು. ಮಾಸ್ಕ್ ಮರೆತು ಬಂದ ಮಕ್ಕಳಿಗೆ ಶಾಲೆಯ ಶಿಕ್ಷಕರು ಮಾಸ್ಕ್ ಗಳನ್ನು ನೀಡಿದರು.

ಶಾಲೆಗಳಿಗೆ ತಮ್ಮ ಮಕ್ಕಳೊಂದಿಗೆ ಬಂದ ಪೋಷಕರು ಶಾಲೆಯಲ್ಲಿ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳು, ಸ್ವಚ್ಛತೆ ಕುರಿತು ಕೈಗೊಂಡ ಕ್ರಮಗಳನ್ನು ಗಮನಿಸಿ ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಂಡು ಹೋಗುತ್ತಿದ್ದುದು ವಿಶೇಷವಾಗಿತ್ತು. ಕೆಲವು ಕಡೆಗಳಲ್ಲಿ ಶಿಕ್ಷಕರು ಆರತಿ ಬೆಳಗಿದರು. ಸಿಹಿ ತಿನ್ನಿಸಿದರು. ಚಾಕಲೇಟ್‌ ನೀಡಿ ಸ್ವಾಗತಿಸಿದರು.

ತಾತ್ಕಾಲಿಕ ವೇಳಾಪಟ್ಟಿ ಜ.6ಕ್ಕೆ ಬಿಡುಗಡೆ
‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬುಧವಾರದ (ಜ.6) ವೇಳೆಗೆ ಬಿಡುಗಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

‘ಉಳಿದ ದಿನಗಳಲ್ಲಿ ಮಕ್ಕಳು ಸರಾಗವಾಗಿ ಓದುವಷ್ಟು ಮತ್ತು ಮುಂದಿನ ತರಗತಿಗೆ ಹೋಗಲು ಓದಲೇಬೇಕಾಗಿರುವ ಪಠ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮವನ್ನು ಕಡಿತಗೊಳಿಸಲಾಗುತ್ತದೆ. ಪಠ್ಯಕ್ರಮದ ವಿವರವನ್ನೂ ಬುಧವಾರ ಘೋಷಿಸಲಾಗುವುದು’ ಎಂದು ಅವರು ತಿಳಿಸಿದರು. 

ಪಾಸ್ ಇದ್ದರೂ ಟಿಕೆಟ್‌ ತೆಗೆದುಕೊಳ್ಳಲು ಒತ್ತಡ
‘ಹಿಂದಿನ ವರ್ಷದ ಪಾಸ್ ಇದ್ದರೆ ಅದನ್ನೇ ತೋರಿಸಿ ಪ್ರಯಾಣಿಸಬಹುದು ಎಂದು ಶಿಕ್ಷಣ ಸಚಿವರು ಬುಧವಾರ ಹೇಳಿದ್ದರು. ಆದರೆ, ಹಲವು ನಿರ್ವಾಹಕರು ಈ ಪಾಸ್‌ ತೋರಿಸಿದರೆ ನಡೆಯುವುದಿಲ್ಲ. ಟಿಕೆಟ್‌ ತೆಗೆದುಕೊಳ್ಳಿ ಎಂದರು’ ಎಂಬುದಾಗಿ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಹೇಳಿದರು.

‘ಸಚಿವರೇ ಹೇಳಿದ್ದಾರೆ ಎಂದರೂ ನಿರ್ವಾಹಕರು ಕೇಳಲಿಲ್ಲ. ಇಲಾಖೆಯಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ನಿರ್ವಾಹಕರು ಹೇಳಿದರು. ಪಾಸ್‌ ಇದ್ದಿದ್ದರಿಂದ ಟಿಕೆಟ್‌ಗೆ ಹಣ ತಂದಿರಲಿಲ್ಲ. ಕೊನೆಗೆ, ಸ್ನೇಹಿತರ ಬಳಿ ಸಾಲ ಪಡೆದು ಟಿಕೆಟ್‌ ತೆಗೆದುಕೊಳ್ಳಬೇಕಾಯಿತು’ ಎಂದು ವಿದ್ಯಾರ್ಥಿ ಬಸವರಾಜ್‌ ಹೇಳಿದರು. 

‘ಹಿಂದಿನ ವರ್ಷದ ಪಾಸ್‌ಗೂ ಮಾನ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆಯಿಂದ ನಿರ್ವಾಹಕರಿಗೆ ಅಧಿಕೃತ ಸೂಚನೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.


ಆಹಾರ ಸಚಿವ ಕೆ. ಗೋಪಾಲಯ್ಯ ಅವರು ನಂದಿನಿ ಬಡಾವಣೆಯ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನಲ್ಲಿ ಮಕ್ಕಳಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್ ವಿತರಿಸಿದರು. -ಪ್ರಜಾವಾಣಿ ಚಿತ್ರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು