ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಒತ್ತಡ

ಸರ್ಕಾರದ ನಿರ್ಧಾರಕ್ಕೆ ಸ್ವಾಗತ * ಮಕ್ಕಳ ಸುರಕ್ಷತೆ, ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲು ಒತ್ತಾಯ
Last Updated 6 ಆಗಸ್ಟ್ 2021, 21:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಆ.23ರಿಂದ 9,10 ಮತ್ತು ಪಿಯು ತರಗತಿಗಳನ್ನು ಪುನರಾರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶಿಕ್ಷಣ ತಜ್ಞರು, ಪೋಷಕರು ಹಾಗೂ ಖಾಸಗಿ ಶಾಲಾ–ಕಾಲೇಜು ಆಡಳಿತ ಮಂಡಳಿಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಮೊದಲು ಉನ್ನತ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿರುವ ಕುರಿತು ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

‘ದೇಶದ ಹಲವು ರಾಜ್ಯಗಳಲ್ಲಿ ಹಾಗೂ ವಿಶ್ವದ ಬೇರೆ ಬೇರೆ ದೇಶಗಳಲ್ಲಿ, ಮೊದಲು ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂದು ತಜ್ಞ ವೈದ್ಯರು, ಆ ಕ್ಷೇತ್ರದ ಪರಿಣಿತರು ನೀಡಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಉನ್ನತ ತರಗತಿಗಳನ್ನು ಮೊದಲು ಆರಂಭಿಸುವ ನಿರ್ಧಾರದ ಹಿಂದಿರುವ ತರ್ಕ ಅರ್ಥವಾಗುತ್ತಿಲ್ಲ’ ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹೇಳಿದೆ.

‘ಶಾಲೆಗಳು ತೆರೆಯದೇ ಇರುವುದಕ್ಕೆ ಅತಿ ಹೆಚ್ಚು ಕಲಿಕೆಯ ನಷ್ಟವಾಗಿರುವುದು ಒಂದರಿಂದ ಎಂಟನೆಯ ತರಗತಿಯ ಮಕ್ಕಳಿಗೆ, ಅದರಲ್ಲಿಯೂ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು. ಈ ಶಾಲೆಗಳನ್ನು ಮೊದಲು ತೆರೆಯುವುದು ವೈಜ್ಞಾನಿಕವಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮವಾಗುತ್ತದೆ’ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

‘50ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಇದೇ ಸೋಮವಾರದಿಂದಲೇ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದೇ ವೇಳೆ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಬೇಕು’ ವೇದಿಕೆಯ ಮಹಾಪೋಷಕ ಮತ್ತು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಮಾರ್ಗಸೂಚಿ ಪಾಲಿಸಬೇಕು:

‘9,10 ಮತ್ತು ಪಿಯು ತರಗತಿಗಳನ್ನು ಆರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಈ ನಿಯಮಗಳು ಪಾಲನೆಯಾಗುತ್ತಿವೆಯೇ ಎಂದು ಪರಿಶೀಲಿಸುವ ಕೆಲಸವೂ ಆಗಬೇಕು’ ಎಂದು ಉಳ್ಳಾಲದ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಸುಪ್ರೀತ್ ಹೇಳಿದರು.

‘ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಅವರಿಂದ ಇಲ್ಲಿನ ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಬೇರೆ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದ ನಂತರವೇ ತರಗತಿಗೆ ಬರಮಾಡಿಕೊಳ್ಳುವ ಕೆಲಸವಾಗಬೇಕು’ ಎಂದರು.

‘ಪ್ರೌಢಶಾಲೆಯ ಮಕ್ಕಳು ಪ್ರಾಥಮಿಕ ಶಾಲೆಯ ಮಕ್ಕಳಿಗಿಂತ ಮಾನಸಿಕವಾಗಿ ಹೆಚ್ಚು ಪ್ರಬುದ್ಧವಾಗಿರುವುದರಿಂದ ಮೊದಲು ಉನ್ನತ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇದು ಉತ್ತಮ ನಿರ್ಧಾರವೇ. ಏಕೆಂದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ನೋಡುವ ಪ್ರೌಢಮಕ್ಕಳು, ಶಾಲಾ–ಕಾಲೇಜುಗಳಲ್ಲಿ ಅಂತರ ಕಾಪಾಡಿಕೊಳ್ಳುವ, ಮಾಸ್ಕ್‌ ಧರಿಸುವ ಮೂಲಕ ಮಾರ್ಗಸೂಚಿ ಪಾಲನೆ ಮಾಡುತ್ತಾರೆ. ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಈ ನಿಯಮಗಳ ಪಾಲನೆ ಕಷ್ಟವಾಗಬಹುದು’ ಎಂದೂ ಅವರು ಹೇಳಿದರು.

‘ವಿಜ್ಞಾನ ಮತ್ತು ಗಣಿತದಂತಹ ತಾಂತ್ರಿಕ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಕೂಡಲೇ ಆರಂಭಿಸಬೇಕಾದ ಅಗತ್ಯವಿದೆ. ಏಕೆಂದರೆ, ಈ ಮಕ್ಕಳು ತಕ್ಷಣದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ತಾಂತ್ರಿಕ ಶಿಕ್ಷಣದ ಅಡಿಪಾಯ ಸರಿಯಾಗಿ ಬೀಳದಿದ್ದರೆ, ಅವರ ಭವಿಷ್ಯಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ಸುರಕ್ಷತೆಗೆ ಒತ್ತು ನೀಡಬೇಕು:

‘8,9ನೇ ತರಗತಿ ಆರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೂ, ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಶಾಲೆಗಳನ್ನು ಪುನರಾರಂಭಿಸಬೇಕು. 18 ವರ್ಷದೊಳಗಿನವರಿಗೆ ಲಸಿಕೆ ಹಾಕಿಸಲು ಅವಕಾಶವಿಲ್ಲ. ಲಸಿಕೆ ಹಾಕಿರದ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕವೂ ಇದೆ’ ಎಂದು ಪೋಷಕಿ ಜಾನಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT