ಭಾನುವಾರ, ಜನವರಿ 26, 2020
28 °C
ಮಣ್ಣು–ನೀರು ಪ್ರತ್ಯೇಕಿಸುವ ವಿಧಾನ ಕಂಡುಹಿಡಿದ 9ನೇ ತರಗತಿ ವಿದ್ಯಾರ್ಥಿನಿ

ಕೃತಕ ಪ್ರವಾಹ ತಡೆವ ‘ಫುಟ್‌ಪಾತ್‌’!

ಗುರು ಪಿ.ಎಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಜನ ಹೆಚ್ಚು ತೊಂದರೆ ಮತ್ತು ಅಪಾಯಕ್ಕೆ ಒಳಗಾಗುವುದು ಕೃತಕ ಪ್ರವಾಹದಿಂದ. ಮರಗಳ ನಾಶದಿಂದ ಮಣ್ಣಿನ ಸವಕಳಿಯೂ ಹೆಚ್ಚಾಗಿದ್ದು, ಭಾರಿ ಮಳೆ ಬಂದ ಸಂದರ್ಭದಲ್ಲಿ ಮಣ್ಣು  ಚರಂಡಿಯನ್ನು ಸೇರುತ್ತದೆ.

ಸರಾಗವಾಗಿ ಹರಿದು ಹೋಗದ ನೀರು ಇಂತಹ ಪ್ರವಾಹಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ ಅಸ್ಸಾಂನ ಗುವಾಹಟಿಯ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಎಸ್. ಸ್ವಸ್ತಿಕಾ ಮೂರ್ತಿ. 

‘ನನ್ನ ಊರಿನಲ್ಲಿ ಮಳೆಗಾಲಕ್ಕೂ ಮುನ್ನ ಹೆಚ್ಚು ಮರಗಳನ್ನು ಕಡಿಯಲಾಗುತ್ತದೆ. ಹೀಗೆ, ಮರಗಳು ಇಲ್ಲದ ಕಾರಣ ಮಣ್ಣಿನ ಸವಕಳಿಯೂ ಹೆಚ್ಚಾಗಿರುತ್ತದೆ. ಜೋರು ಮಳೆ ಬಿದ್ದಾಗ ಕೆಸರು ಚರಂಡಿಯನ್ನು ಸೇರಿದಾಗ ನೀರು ಹರಿಯದೇ ಪ್ರವಾಹ ಉಂಟಾಗುತ್ತಿತ್ತು. ಈ ಸಮಸ್ಯೆಗೆ ಜಲಚಾಲಿತ ತಂತ್ರದ (ಹೈಡ್ರಾಲಿಕ್ ಟೆಕ್ನಾಲಜಿ) ಮೂಲಕ ಪರಿಹಾರ ಕಂಡುಹಿಡಿದಿದ್ದೇನೆ’ ಎಂದು ಸ್ವಸ್ತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು. 

ಕಾರ್ಯನಿರ್ವಹಣೆ ಹೇಗೆ ?: ಒಂದು ರಸ್ತೆಯಲ್ಲಿ ಪ್ರತಿ 50 ಮೀಟರ್‌ ಅಂತರದಲ್ಲಿ ಅಳವಡಿಸಬಹುದಾದ ವ್ಯವಸ್ಥೆ ಇದು. ಒಳಚರಂಡಿಯಲ್ಲಿಯೇ ನೀರು ಮತ್ತು ಮಣ್ಣನ್ನು ಪ್ರತ್ಯೇಕಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು. ರಸ್ತೆಯ ಬದಿಯಲ್ಲಿ 10 ರಿಂದ 15 ಅಡಿಯಷ್ಟು ಆಳದಲ್ಲಿ, ಇಳಿಜಾರು ಸಮತಲ (ಇನ್‌ಕ್ಲೈನ್ಡ್‌ ಪ್ಲೇನ್‌) ಸೃಷ್ಟಿಸಲಾಗುತ್ತದೆ. ಇದಕ್ಕಾಗಿ ಪರಿಸರ ಸ್ನೇಹಿ ಮತ್ತು ಸ್ಥಳಾಂತರಿಸಬಹುದಾದ ಪಾದಚಾರಿ ಮಾರ್ಗದ ವಿನ್ಯಾಸ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಮತ್ತು ಬಲಿಷ್ಠ ಪಿವಿಸಿ ಪೈಪ್‌ ಬಳಸಿ ಪಾದಚಾರಿ ಮಾರ್ಗ ನಿರ್ಮಾಣ ಮಾಡುವುದರಿಂದ ಇದನ್ನು ಸುಲಭವಾಗಿ ಸ್ಥಳಾಂತರಿಸಬಹುದು. 

ಅನುಕೂಲಗಳೇನು?: ಪಾದಚಾರಿ ಮಾರ್ಗದ ಕೆಳಗಡೆಯೇ ಹೀಗೆ ಪ್ರತ್ಯೇಕವಾಗುವ ಮಣ್ಣನ್ನು ನಿಗದಿತ ಸಮಯದೊಳಗೆ ತೆಗೆಯಬಹುದು. ಅಲ್ಲದೆ, ಸಂಗ್ರಹವಾಗುವ ನೀರಿಗೆ ಇಂಗು ಗುಂಡಿಗಳನ್ನು ನಿರ್ಮಿಸುವುದರಿಂದ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಮಣ್ಣಿನ ಸವಕಳಿಯೂ ನಿಲ್ಲುತ್ತದೆ. 

ಮಳೆಯ ಸಂದರ್ಭದಲ್ಲಿ ಕೃತಕ ಪ್ರವಾಹ ಉಂಟಾಗುತ್ತದೆಯಲ್ಲದೆ, ರಸ್ತೆಗಳು ಹಾನಿಗೊಳಗಾಗುತ್ತವೆ. ಆದರೆ, ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ರಸ್ತೆಗಳಿಗೂ ಹಾನಿಯಾಗುವುದಿಲ್ಲ. ಸ್ವಚ್ಛತೆಗೆ ಸ್ವಯಂಚಾಲಿತ ತಂತ್ರಜ್ಞಾನ ಅಳವಡಿಸಿರುವುದರಿಂದ ಕಡಿಮೆ ಸಮಯದಲ್ಲಿ, ಸುಲಭವಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಬಹುದಾಗಿದೆ. ಪ್ರವಾಹ ಹೆಚ್ಚು ಕಾಣಿಸಿಕೊಳ್ಳುವ ನಗರದ ತಗ್ಗು ಪ್ರದೇಶಗಳಿಗೆ ಇದು ಸೂಕ್ತವಾದೆ. ಈ ಮಾದರಿಯ 200 ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಖರ್ಚಾಗುತ್ತದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು