ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಹಡಿ ಕಟ್ಟಡ: ರಸ್ತೆ ಬಂದ್‌ಗೆ ಸಚಿವಾಲಯ ನೌಕರರ ಆಗ್ರಹ

Last Updated 1 ಸೆಪ್ಟೆಂಬರ್ 2021, 17:42 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಪಕ್ಕದಲ್ಲಿರುವ ಬಹುಮಡಿ ಕಟ್ಟಡದ (ಎಂ.ಎಸ್‌. ಬಿಲ್ಡಿಂಗ್‌) ನಡುವೆ ಹಾದು ಹೋಗಿರುವ ಡಿ.ದೇವರಾಜ ಅರಸು ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ, ಈ ವರ್ಷದಲ್ಲೇ ಮೂವರು ನೌಕರರು ಮೃತಪಟ್ಟಿರುವ ಕಾರಣದಿಂದ ಅಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ಸಚಿವಾಲಯ ನೌಕರರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಡಿ. ದೇವರಾಜ ಅರಸು ರಸ್ತೆಯು ಚಾಲುಕ್ಯ ವೃತ್ತ (ಬಸವೇಶ್ವರ ವೃತ್ತ) ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆಯನ್ನು ಸಂಪರ್ಕಿಸುವ ಮಾರ್ಗವಾಗಿದೆ. ಶಿವಾನಂದ ವೃತ್ತ ಮತ್ತು ಸ್ಯಾಂಕಿ ರಸ್ತೆಯ ಮೂಲಕ ವಿಧಾನಸೌಧ, ಹೈಕೋರ್ಟ್‌ ಮತ್ತು ಕೆ.ಆರ್‌. ವೃತ್ತಕ್ಕೆ ಇದೇ ಮಾರ್ಗವಾಗಿ ಸಾಗಬೇಕಿದೆ.

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳು, ‘ಇತ್ತೀಚಿನ ವರ್ಷಗಳಲ್ಲಿ ದೇವರಾಜ ಅರಸು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಅಪಘಾತಗಳ ಸಂಖ್ಯೆಯೂ ಏರಿಕೆಯಾಗಿದೆ. ಈ ವರ್ಷದಲ್ಲೇ ಸಚಿವಾಲಯದ ಮೂವರು ನೌಕರರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಿದೆ’ ಎಂದರು.

‘ವಿಧಾನಸೌಧ ಮತ್ತು ವಿಕಾಸೌಧದ ಹೊರತಾಗಿ ಎಂ.ಎಸ್‌. ಬಿಲ್ಡಿಂಗ್‌ನಲ್ಲೂ ಸಚಿವಾಲಯ ಇದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. 2001ರಲ್ಲಿ ವಿಧಾನಸೌಧ ಮತ್ತು ವಿಕಾಸೌಧಗಳ ನಡುವೆ ಹಾದುಹೋಗಿದ್ದ ರಸ್ತೆಯನ್ನು ಮುಚ್ಚಿದ ಬಳಿಕ ತಾತ್ಕಾಲಿಕವಾಗಿ ದೇವರಾಜ ಅರಸು ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಬಳಿಕ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸುವುದನ್ನು ಮರೆತಿರುವ ಸರ್ಕಾರ, ಸಚಿವಾಲಯ ನೌಕರರ ಮೇಲೆ ಒತ್ತಡ ಸೃಷ್ಟಿಸಿದೆ’ ಎಂದು ಸಂಘದ ಜಂಟಿ ಕಾರ್ಯದರ್ಶಿ ಶಾಂತಾರಾಂ ದೂರಿದರು.

ಹುದ್ದೆಗಳ ರದ್ಧತಿಗೆ ವಿರೋಧ: ದೇವರಾಜ ಅರಸು ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧ, ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರ ಹುದ್ದೆ ರದ್ದತಿ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT