ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಿಸಬಹುದಾದ ಇಂಧನಕ್ಕೆ ಒತ್ತು: ಉಪೇಂದ್ರ ತ್ರಿಪಾಠಿ

Last Updated 16 ಡಿಸೆಂಬರ್ 2020, 21:24 IST
ಅಕ್ಷರ ಗಾತ್ರ

ಬೆಂಗಳೂರು: ‘ನವೀಕರಿಸಬಹುದಾದಇಂಧನದ ಮೂಲಕ ಬಡತನ ನಿವಾರಣೆ ಸಾಧ್ಯವಾಗಲಿದ್ದು, ಇದನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಮಹಾನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನದ ಆವಿಷ್ಕಾರಕ್ಕೆ ವೇದಿಕೆ ಒದಗಿಸುವ ಉದ್ದೇಶದಿಂದ ಸೆಲ್ಕೊ ಫೌಂಡೇಷನ್ ಪ್ರಾರಂಭಿಸಿರುವ ‘ಗ್ಲೋಬಲ್ ಎಸ್‌ಡಿಜಿ7 ಹಬ್ಸ್‌’ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಕೆಲವೇ ವರ್ಷಗಳಲ್ಲಿ ಇಂಧನದ ಮೂಲಗಳು ಬರಿದಾಗಲಿವೆ. ಹಾಗಾಗಿ ನವೀಕರಿಸಬಹುದಾದ ಇಂಧನಗಳ ಬಳಕೆ ಹೆಚ್ಚಿಸಿ, ಸುಸ್ಥಿರ ಅಭಿವೃದ್ಧಿ ಮಾಡಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಬಡ ಜನರನ್ನು ಮೇಲಕ್ಕೆತ್ತುವಂತಹ ಯೋಜನೆಗಳಿಗೆ ಬೆಂಬಲ ನೀಡಬೇಕಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನವು ವಿವಿಧ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಇಂಧನವನ್ನು ಕೇವಲ ತಂತ್ರಜ್ಞಾನದ ನೆರವಿನಿಂದ ಜನರಿಗೆ ತಲುಪಿಸಲು ಸಾಧ್ಯವಿಲ್ಲ. ಬದಲಾಗಿ ಬಳಕೆಯ ಬಗ್ಗೆ ತರಬೇತಿ ಸೇರಿದಂತೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ನವೀಕರಿಸಬಹುದಾದ ಇಂಧನಗಳ ಬಳಕೆಯ ಬಗ್ಗೆ ಹೆಚ್ಚಿನ ಆವಿಷ್ಕಾರಗಳು ನಡೆಯಬೇಕಿದೆ. ಈಗಲೂ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ
ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ ಸೌರಶಕ್ತಿಯ ನೆರವಿನಿಂದ ವಿವಿಧ ಸೌಲಭ್ಯಗಳನ್ನು ಒದಗಿಸಿ, ಅಲ್ಲಿನ ನಿವಾಸಿಗಳನ್ನು ಮುನ್ನೆಲೆಗೆ ತರುವ ಕೆಲಸವಾಗಬೇಕು’ ಎಂದು ಹೇಳಿದರು.

ಹಿರಿಯ ಐಎಫ್‌ಎಸ್ ಅಧಿಕಾರಿ ಅಖಿಲೇಶ್ ಮಿಶ್ರಾ ಮಾತನಾಡಿ, ‘ನಮ್ಮಲ್ಲಿರುವ ಅಪಾರ ಜ್ಞಾನವನ್ನು ಮತ್ತೊಬ್ಬರ ಜತೆಗೆ ಹಂಚಿಕೊಂಡಾಗ ಮಾತ್ರ ಅದು ಫಲಿತಾಂಶ ನೀಡುತ್ತದೆ. ಅದನ್ನು ಅರ್ಥ ಮಾಡಿಕೊಂಡು ಸಾಗಬೇಕಾಗಿದೆ. ಬಡತನ ಮತ್ತು ಪರಿಸರ ಅಸಮತೋಲನವು ಮಾನವ ಜಗತ್ತು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಶಕ್ತಿ ಸಂಪನ್ಮೂಲಗಳ ಸರಿಯಾದ ಹಂಚಿಕೆಯು ಪರಿಹಾರವಾಗಲಿದೆ. ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಎಲ್ಲ ಶಕ್ತಿ ಸಂಪನ್ಮೂಲಗಳ ಮೇಲೆ ಎಲ್ಲ ಜೀವಿಗಳಿಗೂ ಸಮಾನ ಹಕ್ಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT