ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 7 ಕೋಟಿ ಜಿಎಸ್‌ಟಿ ವಂಚನೆ: ನಾಲ್ವರ ಬಂಧನ

2018ರಲ್ಲಿ ದಾಖಲಾಗಿದ್ದ ಪ್ರಕರಣ: ಐದು ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿಗಳು
Published 13 ಜೂನ್ 2023, 20:15 IST
Last Updated 13 ಜೂನ್ 2023, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಿಲು ಮುಚ್ಚಿದ್ದ ಕಂಪನಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಿಎಸ್‌ಟಿ ಸಂಖ್ಯೆ ಪಡೆದು ಕೇಂದ್ರ ಸರ್ಕಾರಕ್ಕೆ ಸುಮಾರು ₹ 7 ಕೋಟಿ ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ನಗರದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಬಾಬು ಅಲಿಯಾಸ್ ದೆಹಲಿ, ಬೆಂಗಳೂರಿನ ಜಾನಕಿರಾಮ್ ರೆಡ್ಡಿ, ಹೀರಾಲಾಲ್ ಹಾಗೂ ತೇಜ್‌ರಾಜ್ ಗಿರಿಯಾ ಬಂಧಿತರು. ನಗರದ ಉದ್ಯಮಿ ಹಮೀದ್‌ ರಿಜ್ವಾನ್ ಅವರು 2018ರಲ್ಲಿ ನೀಡಿದ್ದ ದೂರಿನ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹಮೀದ್ ಅವರು 2011ರಲ್ಲಿ ಎಆರ್‌ಎಸ್ ಎಂಟರ್‌ಪ್ರೈಸಸ್ ಕಂಪನಿ ಆರಂಭಿಸಿದ್ದರು. ಈ ಕಂಪನಿ, ವ್ಯಾಟ್ ತೆರಿಗೆ ವ್ಯಾಪ್ತಿಯಲ್ಲಿತ್ತು. ಕಂಪನಿಯಿಂದ ಮರದ ಪ್ಯಾಕಿಂಗ್ ಸಾಮಗ್ರಿ ತಯಾರಿಕೆ ಹಾಗೂ ಮಾರಾಟ ಮಾಡಲಾಗುತ್ತಿತ್ತು. ವೈಯಕ್ತಿಕ ಕಾರಣಗಳಿಂದ ಮಾಲೀಕರು 2013ರಲ್ಲಿ ಕಂಪನಿ ಬಂದ್ ಮಾಡಿದ್ದರು. ನಂತರ, ಕಂಪನಿಯ ಎಲ್ಲ ಬಗೆಯ ಹಣಕಾಸಿನ ವಹಿವಾಟು ಸಹ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದರು.

‘2017ರಲ್ಲಿ ಕಂಪನಿ ವಹಿವಾಟು ಪುನಃ ಆರಂಭಿಸಲು ಮುಂದಾಗಿದ್ದ ಮಾಲೀಕ ಹಮೀದ್, ಜಿಎಸ್‌ಟಿ ಸಂಖ್ಯೆ ಪಡೆದುಕೊಂಡಿದ್ದರು. ಇದಕ್ಕಾಗಿ ತಮ್ಮ ಪಾನ್ ಕಾರ್ಡ್ ನೀಡಿದ್ದರು. ಇವರ ಹಣಕಾಸಿನ ವಹಿವಾಟು ಪರಿಶೀಲಿಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ, ಕಂಪನಿ ಸ್ಥಳಕ್ಕೆ ಭೇಟಿ ನೀಡಿದ್ದರು. ‘2017–18ರ ಅವಧಿಯಲ್ಲಿ ನಿಮ್ಮ ಪಾನ್ ಕಾರ್ಡ್‌ ಮೂಲಕ ಕಂಪನಿಯ ಹೆಸರಿನಲ್ಲಿ ಹಣಕಾಸು ವ್ಯವಹಾರ ನಡೆದಿದೆ. ₹ 7 ಕೋಟಿ ಜಿಎಸ್‌ಟಿ ಬಾಕಿ ಇದೆ. ಇದನ್ನು ಪಾವತಿಸಿ. ಇಲ್ಲದಿದ್ದರೆ, ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನೋಟಿಸ್ ನೀಡಿದ್ದರು.’

‘ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಮೀದ್, ವಹಿವಾಟು ನಡೆಸಿಲ್ಲವೆಂದು ವಾದಿಸಿದ್ದರು. ಹೆಚ್ಚಿನ ಪರಿಶೀಲನೆ ನಡೆಸಿದಾಗ, ಅಪರಿಚಿತರು ಕಂಪನಿ ಹೆಸರಿನಲ್ಲಿ ವಹಿವಾಟು ಮಾಡಿರುವುದು ಗೊತ್ತಾಗಿತ್ತು. ಬಳಿಕವೇ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿ ಐದು ವರ್ಷಗಳ ನಂತರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ’ ಎಂದು ಹೇಳಿದರು.

ಲೆಕ್ಕಾಧಿಕಾರಿ ಕಚೇರಿಯಲ್ಲಿದ್ದ ಆರೋಪಿ: ‘ಆರೋಪಿ ಜಾನಕಿರಾಮ್ ರೆಡ್ಡಿ, ನಗರದ ಲೆಕ್ಕಾಧಿಕಾರಿಯೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನೇ ಹಮೀದ್ ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಜಿಎಸ್‌ಟಿ ನಂಬರ್ ಪಡೆದಿದ್ದ. ಅದೇ ನಂಬರ್‌ನಲ್ಲಿ ಇತರೆ ಆರೋಪಿಗಳು ಹಣಕಾಸಿನ ವಹಿವಾಟು ನಡೆಸಿ, ₹ 7 ಕೋಟಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬಂಧಿತ ಆರೋಪಿಗಳು, ಹಲವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೇಂದ್ರ ಸರ್ಕಾರಕ್ಕೆ ವಂಚನೆ ಮಾಡಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT