ಶನಿವಾರ, ಮಾರ್ಚ್ 6, 2021
19 °C
ನಂದಿನಿ ಲೇಔಟ್ ಪೊಲೀಸರಿಂದ ಆರೋಪಿ ಬಂಧನ * ವಿವಾದಿತ ಜಾಗದಲ್ಲಿ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ

ಪ್ರತಿಮೆ ವಿಡಿಯೊ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿವಾದಿತ ಜಾಗದಲ್ಲಿ ಅನಾವರಣಗೊಳಿಸಲಾದ ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಆ ಸಂಬಂಧ ಮಹೇಶ್‌ ಎಂಬಾತನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿ ಮಹೇಶ್, ಸ್ಥಳೀಯ ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್‌ನಲ್ಲಿ ಗುರುತಿಸಿಕೊಂಡಿದ್ದಾನೆ. ಸಂಘಟನೆಯೊಂದರ ಅಧ್ಯಕ್ಷರೂ ಆಗಿದ್ದಾನೆ’ ಎಂದರು.

ಆಗಿದ್ದೇನು? ‘ಕಂಠೀರವ ನಗರದಲ್ಲಿ ವಿವಾದಿತ ಜಾಗವಿದ್ದು, ಅದನ್ನು ಕಬಳಿಸಲು ಕೆಲವರು ಹುನ್ನಾರ ನಡೆಸುತ್ತಿರುವ ಆರೋಪವಿದೆ. ಅದೇ ಕಾರಣಕ್ಕೆ ಸ್ಥಳೀಯ ನಿವಾಸಿಗಳು ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಎರಡು ಗುಂಪುಗಳು ಹುಟ್ಟಿಕೊಂಡಿದ್ದು, ಅವುಗಳ ಮಧ್ಯೆ ವೈಷಮ್ಯ ಬೆಳೆದಿದೆ. ಆಗಾಗ ಗಲಾಟೆಯೂ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ವಿವಾದಿತ ಜಾಗದ ಪಕ್ಕದಲ್ಲೇ ಉದ್ಯಾನವಿದ್ದು, ಈ ಹಿಂದೆಯೇ ಅಲ್ಲೊಂದು ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅಷ್ಟಾದರೂ ಭಾನುವಾರ ಬೆಳಿಗ್ಗೆ ವಿವಾದಿತ ಜಾಗದ ರಸ್ತೆಯ ಮಧ್ಯದಲ್ಲೇ ಮತ್ತೊಂದು ಪ್ರತಿಮೆ ನಿಲ್ಲಿಸಲಾಗಿದೆ. ಅದನ್ನು ಪ್ರಶ್ನಿಸಿದ ಸ್ಥಳೀಯ ಯುವತಿ, ಮೊಬೈಲ್‌ನಲ್ಲಿ ಪ್ರತಿಮೆಯ ವಿಡಿಯೊ ಮಾಡುತ್ತಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಹಾಗೂ ಸಹಚರರು, ಯುವತಿಯನ್ನು ರಸ್ತೆಯಲ್ಲೇ ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೊಬೈಲ್‌ ಕಸಿದುಕೊಂಡು ಹಲ್ಲೆಗೂ ಯತ್ನಿಸಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’.

‘ಯುವತಿ ದೂರು ನೀಡುತ್ತಿದ್ದಂತೆ ಆರೋಪಿಯನ್ನು ಬಂಧಿಸಿ, ಮೊಬೈಲ್ ವಾಪಸ್ ಕೊಡಿಸಲಾಗಿದೆ. ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು