ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ಸಂಚಾರ, ಕ್ರಿಕೆಟ್: ದಟ್ಟಣೆ ಬಿಸಿ

ಪ್ರಮುಖ ರಸ್ತೆ, ಒಳರಸ್ತೆಗಳಲ್ಲಿ ಸಾರ್ವಜನಿಕರ ವಾಹನ ತಡೆದು ನಿಲ್ಲಿಸಿದ್ದ ಪೊಲೀಸರು
Last Updated 26 ಮಾರ್ಚ್ 2023, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚಾರ ಹಾಗೂ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟಿ–20 ಅಭ್ಯಾಸ ಪಂದ್ಯದಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ದಟ್ಟಣೆ ಉಂಟಾಯಿತು.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಗುಜರಾತಿ ಸಮಾಜದ ಕಾರ್ಯಕ್ರಮ ಹಾಗೂ ವಿಧಾನಸೌಧ ಪೂರ್ವದ್ವಾರದಲ್ಲಿ ಆಯೋಜಿಸಿದ್ದ ಬೆಂಗಳೂರು ಹಬ್ಬದಲ್ಲಿ ಅಮಿತ್‌ ಶಾ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಸ್ಥಳಕ್ಕೆ ಶಾ ಅವರು ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಪ್ರಮುಖ ರಸ್ತೆ, ಒಳರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಸಚಿವರ ವಾಹನ ದಾಟಿ ಹೋಗುವವರೆಗೂ ವಾಹನಗಳು ಸಾಲುಗಟ್ಟಿ ನಿಂತು ವಿಪರೀತ ದಟ್ಟಣೆ ಉಂಟಾಯಿತು. ಬಳ್ಳಾರಿ ರಸ್ತೆ, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಪುರಭವನ ಎದುರು, ಹಳೇ ಏರ್‌ಪೋರ್ಟ್ ರಸ್ತೆ, ಎಎಸ್‌ಸಿ ಕೇಂದ್ರ ಹಾಗೂ ಇಸ್ರೊ ಜಂಕ್ಷನ್‌ ರಸ್ತೆಯಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದರು. ಪರ್ಯಾಯ ಮಾರ್ಗ ಬಳಸುವಂತೆ ಕೋರಿದ್ದರು.

ಬೆಂಗಳೂರು ಹಬ್ಬ ವೀಕ್ಷಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಇದರಿಂದಾಗಿ ವಿಧಾನಸೌಧ ಎದುರಿನ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ದಟ್ಟಣೆ ಕಂಡುಬಂತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಿ–20 ಕ್ರಿಕೆಟ್ ಅಭ್ಯಾಸ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಕಬ್ಬನ್ ರಸ್ತೆ, ಎಂ.ಜಿ.ರಸ್ತೆ, ಕಸ್ತೂರ್ ಬಾ ರಸ್ತೆ, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ , ಶಿವಾನಂದ ವೃತ್ತದಲ್ಲಿ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ದಟ್ಟಣೆ ಉಂಟಾಯಿತು. ಈ ವೃತ್ತದಲ್ಲಿ ಇತ್ತೀಚೆಗೆ ಮೇಲ್ಸೇತುವೆ ನಿರ್ಮಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಇದೇ ಸ್ಥಳದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ದಟ್ಟಣೆ ಕಂಡುಬರುತ್ತಿದೆ.

‘ಅವಸರದಲ್ಲಿ ಮೇಲ್ಸೇತುವೆ ನಿರ್ಮಿಸಿ ಉದ್ಘಾಟಿಸಲಾಗಿದೆ. ರೇಸ್‌ಕೋರ್ಸ್ ರಸ್ತೆಯಿಂದ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ಮಾರ್ಗವೇ ಅವೈಜ್ಞಾನಿಕವಾಗಿತ್ತು. ಅದನ್ನು ಈಗ ಸರಿಪಡಿಸಲಾಗುತ್ತಿದೆ. ಜೊತೆಗೆ, ಮೇಲ್ಸೇತುವೆ ಕೆಳಭಾಗದಲ್ಲೂ ರಸ್ತೆ ಅಗೆಯಲಾಗಿದೆ. ಇದುವೇ ದಟ್ಟಣೆಗೆ ಕಾರಣವಾಗುತ್ತಿದೆ’ ಎಂದು ಸ್ಥಳೀಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT