ಸೋಮವಾರ, ಅಕ್ಟೋಬರ್ 26, 2020
21 °C
ಶೆಟ್ಟಿಗೆರೆಯ 17 ಎಕರೆ 35 ಗುಂಟೆಗೆ ನಕಲಿ ದಾಖಲೆಗಳ ಸೃಷ್ಟಿ--– ವಿಶೇಷ ಜಿಲ್ಲಾಧಿಕಾರಿ ಬಹಿರಂಗ

ಅಕ್ರಮಗಳ ಹೂರಣ ಬಗೆದಷ್ಟೂ ಬಯಲಿಗೆ

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೆಟ್ಟಿಗೆರೆಯ 17 ಎಕರೆ 35 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ಯಲಹಂಕ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಮಾಡಿರುವ ಕಸರತ್ತುಗಳನ್ನು ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್,‌ ಎಳೆ ಎಳೆಯಾಗಿ ಆದೇಶದಲ್ಲಿ ಬಿಡಿಸಿಟ್ಟಿದ್ದಾರೆ.

ಈ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಯಲಹಂಕ ತಹಶೀಲ್ದಾರ್ ಅವರು ವಿಶೇಷ ಜಿಲ್ಲಾಧಿಕಾರಿ ಅವರಿಗೆ 2020ರ ಜನವರಿ 22ರಂದು ಪತ್ರ ಬರೆದಿದ್ದರು. ‘ಅನಧಿಕೃತ ಸಾಗುವಳಿ ಮಾಡುತ್ತಿದ್ದ ಈ ಐವರ ಹೆಸರಿಗೆ 1978–79ರಲ್ಲಿ ಭೂ ಮಂಜೂರಾತಿ ಮಾಡಲಾಗಿದೆ. 1999–2000ರ ವರೆಗೆ ಕೈಬರಹದ ಪಹಣಿ ಪತ್ರದಲ್ಲಿ (ಆರ್‌ಟಿಸಿ) ಅವರ ಹೆಸರು ಉಲ್ಲೇಖವಾಗಿದೆ. ಕಂಪ್ಯೂಟರೀಕೃತ ಆರ್‌ಟಿಸಿಯಲ್ಲಿ ಅವರ ಹೆಸರು ಇಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ದಾಖಲಾಗಿದ್ದು, ಇದನ್ನು ಪರಿಶೀಲಿಸುವಂತೆ ಹೈಕೋರ್ಟ್‌ ಸೂಚಿಸಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದರು.

‘ಈ ಜಾಗ ಮೂಲತಃ ದೇವನಹಳ್ಳಿ ವ್ಯಾ‍ಪ್ತಿಯಲ್ಲಿತ್ತು. ಈ ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಅಲ್ಲಿನ ತಹಶೀಲ್ದಾರ್‌ಗೆ ಕೋರಿಕೊಂಡಿದ್ದೆ. 17 ಎಕರೆ 35 ಗುಂಟೆ ಈ ಐವರಿಗೆ ಮಂಜೂರಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ದೇವನಹಳ್ಳಿ ತಹಶೀಲ್ದಾರ್‌ ಫೆಬ್ರುವರಿ 2ರಂದು ಒದಗಿಸಿದ್ದಾರೆ. ದಾಖಲೆ ಕೊಠಡಿಯಲ್ಲಿ ಪರಿಶೀಲಿಸಿದಾಗ ಸಾಗುವಳಿ ಚೀಟಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಆದೇಶಗಳು, ಸರ್ವೆ ನಕ್ಷೆಗಳು, ಮೂಲ ಮಂಜೂರಾತಿ ದಾಖಲೆಗಳು ದೇವನಹಳ್ಳಿ ತಹಶೀಲ್ದಾರ್‌ ಕಳುಹಿಸಿದ ದಾಖಲೆಯೊಂದಿಗೆ ಹೋಲಿಕೆಯಾಗುತ್ತಿವೆ’ ಎಂದು ತಹಶೀಲ್ದಾರ್‌ ವರದಿಯಲ್ಲಿ ತಿಳಿಸಿದ್ದರು.

ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಅವರಿಗೆ ವಿಶೇಷ ಜಿಲ್ಲಾಧಿಕಾರಿ ಸೂಚಿಸಿದ್ದರು.

‘ತಾಲ್ಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಮಂಜೂರಾತಿ ಕಡತಗಳು ಲಭ್ಯ ಇವೆ. ಕೆಲವು ದಾಖಲೆಗಳನ್ನು ಸೃಷ್ಟಿಸಿ ಈ ಕಡತಗಳ ಮಧ್ಯೆ ಸೇರಿಸಿರುವುದು ಕಂಡುಬಂದಿದೆ. ಪ್ರಶ್ನಿತ ದಾಖಲೆಗಳನ್ನು ಬಾಲ್‌ ‍ಪೆನ್‌ನಲ್ಲಿ ಇತ್ತೀಚೆಗೆ ಬರೆದಂತೆ ಕಂಡುಬರುತ್ತಿದೆ. ಈ ಕಡತದಲ್ಲಿರುವ ಇತರ ದಾಖಲೆಗಳನ್ನು ಇಂಕ್‌ ‍ಪೆನ್‌ನಲ್ಲಿ ಬರೆಯಲಾಗಿದೆ’ ಎಂದು ಅವರು ಸೆ. 3ರಂದು ವರದಿ ಸಲ್ಲಿಸಿದ್ದರು.

‘ರೆಕಾರ್ಡ್‌ ರೂಂನಲ್ಲಿರುವ ಎಲ್ಲ ಕಡತಗಳನ್ನು ವರ್ಗೀಕರಣ ಮಾಡಿ ಸೂಚ್ಯಂಕ (ಇಂಡೆಕ್ಸ್) ಅಳವಡಿಸಲಾಗಿದೆ. ಈ ದಾಖಲೆಗಳ ನಡುವೆ ನಕಲಿ ದಾಖಲೆಗಳನ್ನು ಇಡಲಾಗಿದೆ. ಕಡತ ಎಲ್‌ಎನ್‌ಡಿ/ಎಸ್‌ಆರ್‌–1112/75–76ರ 94 ಪುಟ ದಾಖಲೆಗಳು ಕಂಪ್ಯೂಟರ್‌ನಲ್ಲಿವೆ. ಆದರೆ, ರೆಕಾರ್ಡ್‌ ರೂಂ ಕಡತದಲ್ಲಿ 101 ಪುಟಗಳಿವೆ. ವರ್ಗೀಕರಣದ ಬಳಿಕ ಈ ದಾಖಲೆಗಳನ್ನು ಸೃಷ್ಟಿಸಿ ಸೇರಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.‌

ದರ್ಖಾಸ್ತು ಮಂಜೂರಾತಿ ನಡಾವಳಿಗಳು (ಡಬ್ಲ್ಯುಡಿ.051 931–ಜಿಬಿಪಿ 20 ಸಾವಿರ ಬುಕ್‌ಲೆಟ್ಸ್‌ ಆಫ್‌ 8 ಪಿಪಿ) ಪ್ರಿಂಟ್‌ ಆಗಿರುವ ಬಗ್ಗೆ ಪರಿಶೀಲಿಸಲು ಸರ್ಕಾರಿ ಕೇಂದ್ರ ಪ್ರಿಂಟಿಂಗ್‌ ಪ್ರೆಸ್‌ನ ನಿರ್ದೇಶಕರಿಗೆ ವಿಶೇಷ ಜಿಲ್ಲಾಧಿಕಾರಿ ಪತ್ರ ಬರೆದರು. ಈ ದಾಖಲೆಗಳನ್ನು ರಾಜಭವನದ ಬಳಕೆಗಾಗಿ ಪ್ರಿಂಟ್‌ ಮಾಡಿ ಕೊಡಲಾಗಿದೆ’ ಎಂದು ನಿರ್ದೇಶಕರು ಸೆಪ್ಟೆಂಬರ್‌ 8ರಂದು ಪ್ರತಿಕ್ರಿಯಿಸಿದರು.

ಜನವರಿಯಲ್ಲಿ ಕಳುಹಿಸಿದ ಪತ್ರ ತಲುಪಿದ್ದು ಆಗಸ್ಟ್‌ನಲ್ಲಿ!
ಯಲಹಂಕ ತಹಶೀಲ್ದಾರ್‌ ಜನವರಿ 22ರಂದು ಬರೆದ ಪತ್ರ ವಿಶೇಷ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದು ಆಗಸ್ಟ್‌ನಲ್ಲಿ. ಈ ಪತ್ರ ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆಯೂ ತಹಶೀಲ್ದಾರ್‌ ಸಮಜಾಯಿಷಿ ನೀಡಿಲ್ಲ. ದೇವನಹಳ್ಳಿ ತಹಶೀಲ್ದಾರ್‌ ಕಳುಹಿಸಿದ ದಾಖಲೆಗಳು ಫೆಬ್ರುವರಿ 3ರಂದು ತಲುಪಿವೆ ಎಂದೂ ರಘುಮೂರ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ!

ಇದರ ನೈಜತೆ ಪರಿಶೀಲಿಸಲು ಜಗದೀಶ್‌ ಅವರು ಆಗಸ್ಟ್‌ 31ರಂದು ದೇವನಹಳ್ಳಿ ತಹಶೀಲ್ದಾರ್‌ಗೆ ಪತ್ರ ಬರೆದರು. ಅದಕ್ಕೆ ಸೆ.22ರಂದು ಉತ್ತರಿಸಿದ ಅವರು, ‘ಈ ಜಾಗದ ಮೂಲ ದಾಖಲೆಗಳು ನಮ್ಮಲ್ಲಿ ಲಭ್ಯ ಇಲ್ಲ. ಸರ್ವೆ ಸಂಖ್ಯೆ 79ಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಗೆ 1986, 2000 ಹಾಗೂ 2010ರಲ್ಲಿ ಕಳುಹಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು