ಶನಿವಾರ, ನವೆಂಬರ್ 28, 2020
25 °C
‘ಶಿಕ್ಷಕ ಮಿತ್ರ’ ಆ್ಯಪ್‌ನಲ್ಲಿ ಸಿಗದ ಆಯ್ಕೆ: ಶಿಕ್ಷಕರ ಅಸಮಾಧಾನ

ಪರಸ್ಪರ ವರ್ಗಾವಣೆ ಅರ್ಜಿ ಸಲ್ಲಿಕೆಗೆ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದ್ದು, ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ‘ಶಿಕ್ಷಕ ಮಿತ್ರ’ ಆ್ಯಪ್‌ನಲ್ಲಿ ಆಯ್ಕೆಯೇ ನೀಡಿಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಾಗವಾಗಿ ಆಗುತ್ತಿದೆ. ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ. ಈ ವಿಷಯದಡಿ ಆಯ್ಕೆ ಇನ್ನೂ ಕೊಟ್ಟಿಲ್ಲ’ ಎಂದು ಶಿಕ್ಷಕರೊಬ್ಬರು ಹೇಳಿದರು.

‘ಪರಸ್ಪರ ವರ್ಗಾವಣೆ ಬಯಸುವವರಿಗೆ ಅನೇಕ ನಿರ್ಬಂಧಗಳನ್ನು ಹಾಕಲಾಗಿದೆ. ಘಟಕದೊಳಗೆ (ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲೆ, ಪ್ರೌಢಶಾಲಾ ಶಿಕ್ಷಕರಿಗೆ ವಿಭಾಗ) ಮತ್ತು ಘಟಕದ ಹೊರಗೆ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು ಕಡ್ಡಾಯವಾಗಿ 7 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿರಬೇಕು ಎಂದು ಹೇಳುತ್ತಾರೆ.  ಒಂದೇ ಕಡೆ 7 ವರ್ಷ ಕೆಲಸ ಮಾಡಿರುವ, ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಬಯಸುವ ಶಿಕ್ಷಕರು ಸಿಗುವುದು ತೀರಾ ವಿರಳ. ನೆಪ ಮಾತ್ರಕ್ಕೆ ಪರಸ್ಪರ ವರ್ಗಾವಣೆ ಸೌಲಭ್ಯ ನೀಡಿದಂತಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಘಟಕದ ಹೊರಗೆ ‍‍ಪರಸ್ಪರ ವರ್ಗಾವಣೆ ಬಯಸಿದರೆ ಮಾತ್ರ 7 ವರ್ಷ ಸೇವೆಯನ್ನು ಪೂರೈಸಿರಬೇಕು, ಘಟಕದ ಒಳಗೆ ವರ್ಗಾವಣೆಗೆ ಈ ಷರತ್ತು ಅನ್ವಯಿಸುವುದಿಲ್ಲ ಎಂದು ಶಿಕ್ಷಕರ ವರ್ಗಾವಣೆ ಕಾಯ್ದೆ–2020ರಲ್ಲಿ ಇದೆ. ಆದರೆ, ಸರ್ಕಾರ ಹೊರಡಿಸಿರುವ ವರ್ಗಾವಣೆ ಮಾರ್ಗಸೂಚಿಯಲ್ಲಿ ಮಾತ್ರ, ಯಾವುದೇ ವಲಯಕ್ಕೆ ಪರಸ್ಪರ ವರ್ಗಾವಣೆ ಕೋರಿದರೂ 7 ವರ್ಷ ಸೇವಾವಧಿ ಪೂರೈಸಿರಬೇಕು ಎಂಬ ಷರತ್ತು ಹಾಕಲಾಗಿದೆ. ಕಾಯ್ದೆಗೆ ಬೆಲೆಯೇ ಇಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಸರಿ ಪಡಿಸಲಾಗುವುದು: ‘ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಕೆಗೂ ಶಿಕ್ಷಕ ಮಿತ್ರ ಆ್ಯಪ್‌ನಲ್ಲಿ ಅವಕಾಶವಿದೆ. ಆದರೆ, ತಾಂತ್ರಿಕ ಅಡಚಣೆಯಿಂದ ಈ ಆಯ್ಕೆ ಕಾಣಿಸುತ್ತಿಲ್ಲ. ಆದಷ್ಟು ಶೀಘ್ರ ಸರಿಪಡಿಸಲಾಗುವುದು. ಗುರುವಾರದಿಂದ ಈ ಆಯ್ಕೆ ಲಭ್ಯವಾಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.