ವಿದ್ಯಾರ್ಥಿಗಳಿಗೆ ಶೂ–ಸ್ವೆಟರ್ ವಿತರಣೆ: ತನಿಖೆಗೆ ಒತ್ತಾಯ
ಬೆಂಗಳೂರು: ‘ಬಿಬಿಎಂಪಿಯ ಶಾಲಾ–ಕಾಲೇಜುಗಳಲ್ಲಿ 2020–21ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಶೂ,ಸಾಕ್ಸ್, ಬೆಲ್ಟ್ ಹಾಗೂ ಸ್ವೆಟರ್‌ಗಳನ್ನು ವಿತರಿಸಿದ ಬೋಗಸ್ ಬಿಲ್ ಸೃಷ್ಟಿಸಿ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ’ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ದೂರು ನೀಡಿದೆ.
‘ಲಾಕ್‌ಡೌನ್ ಸಂದರ್ಭದಲ್ಲಿ ಶಾಲೆಗಳೇ ತೆರೆದಿಲ್ಲ. ಈ ವೇಳೆ ವಿದ್ಯಾರ್ಥಿಗಳಿಗೆ ಶೂ, ಸ್ವೆಟರ್‌ಗಳನ್ನು ವಿತರಿಸಲಾಗಿದೆ ಎಂದು ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ₹1.72 ಕೋಟಿ ಪಾವತಿ ಮಾಡಿಕೊಂಡಿದ್ದು, ಬಿಬಿಎಂಪಿಗೆ ಆರ್ಥಿಕವಾಗಿ ನಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ಎಸ್. ರಘು ಒತ್ತಾಯಿಸಿದ್ದಾರೆ.
‘ಈ ಅಕ್ರಮದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೋಲಾಗಿರುವ ಸಾರ್ವಜನಿಕರ ತೆರಿಗೆ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.
‘2020-21ನೇ ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಅವಶ್ಯವಿರುವ ಮೂಲಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು ಕೆಎಚ್‌ಡಿಸಿ ಹಾಗೂ ಎಂಎಸ್‌ಐಎಲ್ ವತಿಯಿಂದ ಅಗತ್ಯ ಸಲಕರಣೆಗಳನ್ನು ಖರೀದಿಸಿರುವುದಾಗಿ ಹೇಳಲಾಗಿದೆ. ಈ ಪೈಕಿ, ₹400 ಬೆಲೆಯ ಸ್ವೆಟರ್ ಅನ್ನು ₹1,400 ರೂಪಾಯಿ ಎಂದು ನಮೂದಿಸಿ ಬಿಲ್ ಮಾಡಲಾಗಿದೆ’ ಎಂದು ಅವರು ದೂರಿದರು.
‘ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು, ಮೊದಲು ಈ ಪರಿಕರಗಳ ಖರೀದಿಗೆ ಅನುಮೋದನೆ ನೀಡಿಲ್ಲ. ಆದರೆ, ಕೆಲವು ತಿಂಗಳು ಕಳೆದ ನಂತರ, ಅಂದರೆ 2021ರ ಮಾರ್ಚ್ 6ರಂದು ಕಾರ್ಯಾದೇಶ ನೀಡಿದ್ದಾರೆ. ಆಗ, ಶಾಲಾ–ಕಾಲೇಜುಗಳು ಪ್ರಾರಂಭವೇ ಆಗಿರಲಿಲ್ಲ. ಅಲ್ಲದೆ, ಕಾರ್ಯಾದೇಶದಲ್ಲಿ ಒಂದು ಕಡೆ ಸ್ವೆಟರ್ ಮತ್ತಿತರ ವಸ್ತುಗಳು ಎಂದು ಉಲ್ಲೇಖಿಸಿದ್ದರೆ ಮತ್ತೊಂದೆಡೆ ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ನಮೂದಾಗಿದೆ’ ಎಂದರು.
‘ವಿದ್ಯಾರ್ಥಿಗಳಿಗೆ ಶೂ–ಸ್ವೆಟರ್ ನೀಡಿರುವ ಬಗ್ಗೆ ಒಂದೇ ಒಂದು ಛಾಯಾಚಿತ್ರವನ್ನೂ ವರದಿಯ ಜೊತೆಗೆ ಲಗತ್ತಿಸಿಲ್ಲ. ಕೇವಲ ಶಾಲೆಗಳಿಗೆ ನೀಡಿದ್ದೇವೆ ಎಂದು ಮುಚ್ಚಳಿಕೆ ಆಧಾರದಲ್ಲೇ ಹಣ ಪಾವತಿ ಮಾಡಲಾಗಿದೆ. ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಕೂಡ ಶಾಲಾ ಮುಖ್ಯಶಿಕ್ಷಕರುಗಳಿಂದ ಸುಮ್ಮನೆ ಸಹಿ ಹಾಕಿಸಿಕೊಂಡು ಅಕ್ರಮ ಎಸಗಿದ್ದಾರೆ. ಯಾವುದೇ ಕಾಮಗಾರಿ ಪೂರ್ಣಗೊಂಡು ನಾಲ್ಕಾರು ವರ್ಷ ಕಳೆದರೂ ಬಿಬಿಎಂಪಿಯಿಂದ ಬಿಲ್ ಪಾವತಿಯಾಗಿರುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಕಾರ್ಯಾದೇಶವಾಗಿ 15 ದಿನಗಳಲ್ಲಿ ₹1.72 ಕೋಟಿ ಪಾವತಿಯಾಗಿದೆ’ ಎಂದೂ ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.