ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುದತ್ತ ಲೇಔಟ್‌: ಫುಟ್‌ಪಾತ್ ಮೇಲೆ ಮಳಿಗೆ

Last Updated 28 ಅಕ್ಟೋಬರ್ 2020, 3:19 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿ ವಾರ್ಡ್‌ನ ಗುರುದತ್ತ ಲೇಔಟ್‌ನಲ್ಲಿನ ದತ್ತಾತ್ರೇಯ ದೇವಸ್ಥಾನದ ಬಳಿ ಪಾದಚಾರಿ ಮಾರ್ಗವನ್ನೂ ದಾಟಿ ರಸ್ತೆಯ ಮೇಲೆ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ದತ್ತಾತ್ರೇಯ ದೇವಸ್ಥಾನದ ಗೋಪುರಕ್ಕೆ ಹೊಂದಿಕೊಂಡಂತೆ ಮೂರು ಮಳಿಗೆ ನಿರ್ಮಿಸಲಾಗಿದೆ. ಇನ್ನೊಂದು ಬದಿಯಲ್ಲಿ ನೀರು ಶುದ್ಧೀಕರಣ ಘಟಕವನ್ನು ತೆರೆಯಲಾಗಿದೆ. ಅ ಮಳಿಗೆಯೊಂದರಲ್ಲಿ ದ್ವಿಚಕ್ರವಾಹನ ರಿಪೇರಿ ಮಾಡುವ ಗ್ಯಾರೇಜ್ ತೆರೆಯಲಾಗಿದೆ. ಗ್ಯಾರೇಜ್ ತೆರೆದ ಸಂದರ್ಭದಲ್ಲಿ ಒಳಗಿದ್ದ ದ್ವಿಚಕ್ರ ವಾಹನಗಳನ್ನು ಹೊರಕ್ಕೆ ಅಂದರೆ ರಸ್ತೆಗೇ ನಿಲ್ಲಿಸಲಾಗುತ್ತದೆ. ಅಲ್ಲೇ ರಿಪೇರಿ ಕೆಲಸವೂ ನಡೆಯುತ್ತದೆ ಎಂದು ಸ್ಥಳೀಯರು ಆರೋಪಿಸಿದರು.

‘ನಿರ್ಮಾಣವಾಗಿರುವ ಮಳಿಗೆಗಳ ಹಿಂಭಾಗದಲ್ಲಿ ತಂತಿಬೇಲಿ ಇದೆ. ಬೇಲಿ ಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಬಾಕ್ಸ್ ಚರಂಡಿ ನಿರ್ಮಿಸಲಾಗಿದೆ. ಮಳಿಗೆ ತನಕ ಮಾತ್ರ ಚರಂಡಿ ಇದ್ದು, ನಂತರ ಇಲ್ಲ. ದೇವಸ್ಥಾನ ಆಡಳಿತ ಮಂಡಳಿಯವರೇ ಈ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ. ತೆರವುಗೊಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಮೊದಲೇ ಕಿರಿದಾದ ರಸ್ತೆಯಲ್ಲಿ ಎದುರಿನಿಂದ ವಾಹನ ಬಂದರೆ ಮುಂದೆ ಸಾಗುವುದು ಕಷ್ಟವಾಗುತ್ತಿದೆ’ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ್‌, ‘ದೇವಸ್ಥಾನದವರೇ ಮಳಿಗೆ ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಅವರಾಗಿಯೇ ತೆರವುಗೊಳಿಸಿದರೆ ಗೌರವ ಉಳಿಯುತ್ತದೆ. ಇಲ್ಲದಿದ್ದರೆ ಜೆಸಿಬಿ ಕರೆದೊಯ್ದು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.

‘ಮಳಿಗೆ ನಿರ್ಮಾಣ ಆಗಿರುವುದು ದೇವಸ್ಥಾನದ ಜಾಗದಲ್ಲೇ ಹೊರತು, ರಸ್ತೆ ಅಥವಾ ಪುಟ್‌ಪಾತ್ ಜಾಗದಲ್ಲಿ ಅಲ್ಲ. ಚರಂಡಿ ಮತ್ತು ರಸ್ತೆಗೆ ದೇವಸ್ಥಾನದ ಜಾಗವನ್ನೇ ಬಿಟ್ಟುಕೊಟ್ಟಿದ್ದೇವೆ. ಮಳಿಗೆ ತೆರವುಗೊಳಿಸಲು ಈವರೆಗೆ ಯಾರೂ ನೋಟಿಸ್ ನೀಡಿಲ್ಲ’ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT