ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಮ್ಮ ಕ್ಲಿನಿಕ್’ಗಳಲ್ಲಿ ವೈದ್ಯರ ಕೊರತೆ

ಆರೋಗ್ಯ ಇಲಾಖೆ ಪ್ರಕಾರ 39 ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ
Published 22 ಆಗಸ್ಟ್ 2024, 23:47 IST
Last Updated 22 ಆಗಸ್ಟ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ಜನರ ಸಮಗ್ರ ಆರೋಗ್ಯ ವೃದ್ಧಿಗೆ ವಾರ್ಡ್‌ ಮಟ್ಟದಲ್ಲಿ ಪ್ರಾರಂಭಿಸಲಾದ ‘ನಮ್ಮ ಕ್ಲಿನಿಕ್‌’ಗಳಲ್ಲಿ ವೈದ್ಯರ ಕೊರತೆ ಮುಂದುವರಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 39 ‘ನಮ್ಮ ಕ್ಲಿನಿಕ್‌’ಗಳಲ್ಲಿ ಹಲವು ತಿಂಗಳುಗಳಿಂದ ವೈದ್ಯಾಧಿಕಾರಿಗಳೇ ಇಲ್ಲ.

ಸದ್ಯ ನಗರದಲ್ಲಿ 243 ‘ನಮ್ಮ ಕ್ಲಿನಿಕ್‌’ಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್‌ಗಳಿಗೆ ತಲಾ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಹಾಗೂ ಡಿ ದರ್ಜೆ ಸಿಬ್ಬಂದಿ ಹುದ್ದೆ ಮಂಜೂರು ಮಾಡಲಾಗಿದೆ. ಕಡಿಮೆ ವೇತನ, ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಸೇರಿ ವಿವಿಧ ಕಾರಣಗಳಿಂದ ಇಲ್ಲಿ ಕಾರ್ಯನಿರ್ವಹಿಸಲು ವೈದ್ಯರು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಕ್ಲಿನಿಕ್‌ಗಳು ಪ್ರಾರಂಭವಾಗಿ ಎರಡು ವರ್ಷಗಳಾದರೂ ವೈದ್ಯರ ಕೊರತೆಯ ಸಮಸ್ಯೆ ನಿವಾರಣೆಯಾಗಿಲ್ಲ. 39 ಕ್ಲಿನಿಕ್‌ಗಳಲ್ಲಿ ವೈದ್ಯಾಧಿಕಾರಿಗಳಿಲ್ಲ ಎಂಬುದು ಆರೋಗ್ಯ ಇಲಾಖೆಯ ದಾಖಲೆಗಳಲ್ಲೇ ಇದೆ.

2022ರ ಫೆಬ್ರವರಿ ತಿಂಗಳಲ್ಲಿ ಮೊದಲ ಹಂತದಲ್ಲಿ 108 ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿವೆ. ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಈ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜ್ವರದಂತಹ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವುದರ ಜೊತೆಗೆ ರಕ್ತ ಸೇರಿ ವಿವಿಧ ಪರೀಕ್ಷೆಗಳನ್ನೂ ಇಲ್ಲಿ ನಡೆಸಲಾಗುತ್ತದೆ. ಆದರೆ, ಈ ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ನಿರಾಸಕ್ತಿ ತೋರುತ್ತಿರುವುದರಿಂದ ಗುಣಮಟ್ಟದ ವೈದ್ಯಕೀಯ ಸೇವೆಗೆ ತೊಡಕಾಗಿದೆ.

ದಕ್ಷಿಣ, ಪೂರ್ವ ವಲಯದಲ್ಲಿ ಸಮಸ್ಯೆ

ನಮ್ಮ ಕ್ಲಿನಿಕ್‌ಗಳಲ್ಲಿನ ವೈದ್ಯಾಧಿಕಾರಿ ಹುದ್ದೆಗಳಿಗೆ ಎಂಬಿಬಿಎಸ್ ಪದವೀಧರರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ತಿಂಗಳಿಗೆ ₹ 47,250 ವೇತನ ನಿಗದಿಪಡಿಸಲಾಗಿದೆ. ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕರಾದವರಲ್ಲಿ ಕೆಲವರು ಉನ್ನತ ವ್ಯಾಸಂಗ, ಬೇರೆಡೆಗೆ ವೃತ್ತಿ ಆಯ್ಕೆ ಸೇರಿ ವಿವಿಧ ಕಾರಣದಿಂದ ಅರ್ಧದಲ್ಲೆ ಹುದ್ದೆ ತ್ಯಜಿಸುತ್ತಿದ್ದಾರೆ. ಇದರಿಂದಾಗಿಯೂ ಹುದ್ದೆಗಳು ಖಾಲಿ ಉಳಿಯುತ್ತಿವೆ. ಮಂಜೂರಾಗಿರುವ ವೈದ್ಯಾಧಿಕಾರಿ ಹುದ್ದೆಗಳಲ್ಲಿ ಬಿಬಿಎಂಪಿ ಪೂರ್ವ ವಲಯ (12 ಹುದ್ದೆಗಳು) ಹಾಗೂ ದಕ್ಷಿಣ ವಲಯದಲ್ಲಿ (10 ಹುದ್ದೆಗಳು) ಅಧಿಕ ಹುದ್ದೆಗಳು ಖಾಲಿ ಉಳಿದಿವೆ.

‘ವೈದ್ಯರ ಅನುಪಸ್ಥಿತಿಯಿಂದ ಕಾರ್ಯನಿರ್ವಹಣೆ ಕಷ್ಟವಾಗಿದೆ. ಈ ಕ್ಲಿನಿಕ್‌ಗಳ ಪರಿಕಲ್ಪನೆ ಉತ್ತಮವಾಗಿದ್ದರೂ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ವೃದ್ಧರು ಮಾತ್ರ ವಿವಿಧ ಮಾತ್ರೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದು, ಅವರಿಗೆ ಲಭ್ಯವಿರುವ ಮಾತ್ರೆಗಳನ್ನು ಒದಗಿಸುತ್ತಿದ್ದೇವೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ನಮ್ಮ ಕ್ಲಿನಿಕ್‌ ಒಂದರ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶುಶ್ರೂಷಕರೊಬ್ಬರು ತಿಳಿಸಿದರು.

ಶುಶ್ರೂಷಕರು, ತಂತ್ರಜ್ಞರ ಕೊರತೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್‌ಗಳು ಶುಶ್ರೂಷಕರು ಹಾಗೂ ಪ್ರಯೋಗಾಲಯ ತಂತ್ರಜ್ಞರ ಕೊರತೆಯನ್ನೂ ಎದುರಿಸುತ್ತಿದೆ. ಎಂಟು ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕ ಹುದ್ದೆಗಳು ಖಾಲಿಯಿವೆ. 12 ನಮ್ಮ ಕ್ಲಿನಿಕ್‌ಗಳು ಪ್ರಯೋಗಾಲಯ ತಂತ್ರಜ್ಞರ ಕೊರತೆ ಎದುರಿಸುತ್ತಿವೆ. ಶುಶ್ರೂಷಕ ಹುದ್ದೆಗೆ ಬಿಎಸ್‌ಸಿ ನರ್ಸಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ ತಿಂಗಳಿಗೆ ₹ 15750 ವೇತನ ನಿಗದಿಪಡಿಸಲಾಗಿದೆ. ಇದರಿಂದಾಗಿ ಶುಶ್ರೂಷಕರು ಇಲ್ಲಿ ಕಾರ್ಯನಿರ್ವಹಿಸಲು ನಿರಾಸಕ್ತಿ ತೋರಿದ್ದಾರೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ನಮ್ಮ ಕ್ಲಿನಿಕ್‌ಗಳಲ್ಲಿ ಲಭ್ಯವಿದೆ.  ಗರ್ಭಿಣಿಯರ ಆರೈಕೆ ನವಜಾತ ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ಹೊರ ರೋಗಿ ಸೇವೆ ಬಾಯಿ ಆರೋಗ್ಯ ಸೇರಿ ವಿವಿಧ ಚಿಕಿತ್ಸಾ ಸೇವೆಗಳು ಲಭ್ಯವಿದೆ. 

ಎಂಬಿಬಿಎಸ್ ಪದವೀಧರರು ಉನ್ನತ ವ್ಯಾಸಂಗ ಸೇರಿ ವಿವಿಧ ಕಾರಣದಿಂದ ಸೇವೆಯಿಂದ ಬಿಡುಗಡೆ ಹೊಂದಿದಾಗ ಹುದ್ದೆ ಖಾಲಿಯಾಗುತ್ತದೆ. ನಮ್ಮ ಕ್ಲಿನಿಕ್‌ ಖಾಲಿ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಲಾಗುತ್ತಿದೆ.
ಕಿಶೋರ್‌ ವಿಕಾಸ್‌ ಸುರಾಳ್ಕರ್‌, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT