ಶನಿವಾರ, ಜೂಲೈ 11, 2020
29 °C

ವಲಸೆ ಕಾರ್ಮಿಕರ ವಿಷಯದಲ್ಲಿ ಅಮಾನವೀಯ ವರ್ತನೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಲಾಕ್ ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಗಂಟೆಗೊಂದು, ಗಳಿಗೆಗೊಂದು ಆದೇಶ ಹೊರಡಿಸುತ್ತಿರುವುದರಿಂದ ಗೊಂದಲ ಉಂಟಾಗಿ, ಅರಾಜಕತೆ ಸೃಷ್ಟಿಯಾಗಿದೆ’ ಎಂದೂ ದೂರಿದರು.

‘ರಾಜ್ಯಕ್ಕೆ ಬರುವ ಹಾಗೂ ಹೊರ ಹೋಗುವ ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕು. ಆದರೆ, ಪ್ರಯಾಣ ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಪಾಲು ಕೇಳುತ್ತಿದೆ. ರೈಲ್ವೆ ಇಲಾಖೆ ಕೇಂದ್ರದ ಅಧೀನದಲ್ಲಿದೆ. ಹೀಗಾಗಿ, ಆ ಸರ್ಕಾರವೇ ವೆಚ್ಚ ಭರಿಸಬೇಕು’ ಎಂದರು.

‘ರಾಜ್ಯದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಿಎಸ್‍ಆರ್ ನಿಧಿಯ ಮೂಲಕ ಪಿಎಂ ಕೇರ್ಸ್‌ ನಿಧಿಗೆ ₹ 1,500 ಕೋಟಿ ದೇಣಿಗೆ ನೀಡಿದ್ದಾರೆ. ಆ ಹಣದಲ್ಲಿ ಕಾರ್ಮಿಕರಿಗೆ ವೆಚ್ಚ ಮಾಡಲು ಕಷ್ಟವೇನು’ ಎಂದು ಪ್ರಶ್ನಿಸಿದರು.

‘ಊರುಗಳಿಗೆ ಹೋಗಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್‍ನಿಂದ ಅರಮನೆ ಮೈದಾನಕ್ಕೆ ಅಲ್ಲಿಂದ ಪೀಣ್ಯಕ್ಕೆ ಅಲೆದಾಟ ನಡೆಸಲಾಗುತ್ತಿದೆ. ಅನ್ನ, ನೀರು ಇಲ್ಲದೆ, ಮಲಗಲು ಜಾಗವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ. ಕಾರ್ಮಿಕರ ಪ್ರಯಾಣಕ್ಕೆ ತಗಲಬಹುದಾದ ₹ 3 ಕೋಟಿ ಭರಿಸುವ ಶಕ್ತಿ ಸರ್ಕಾರಕ್ಕಿಲ್ಲವೇ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ‌ವರೆಗೆ ಬಂದಿರುವ ದೇಣಿಗೆ ಎಷ್ಟು ಎಂಬ ಬಗ್ಗೆಯೂ ಮಾಹಿತಿ ಇಲ್ಲ’ ಎಂದು ಅವರು ಹೇಳಿದರು.

‘ಸ್ವಂತ ಊರುಗಳಿಗೆ ಹೋಗುವ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗದ ಕಾರ್ಡ್‍ಗಳನ್ನು ಒದಗಿಸಿ ಕೆಲಸ ಕೊಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ಎಂಬ ನಿಯಮ ಸಡಿಲಿಸಬೇಕು‘ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು