ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕಿಗಳಿಗೆ ಸಿಂಪಲ್‌ ಕನ್ನಡ

Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐ.ಟಿ. ಮತ್ತು ಬಿ.ಟಿ) ಉದ್ಯಮದಲ್ಲಿ ಕನ್ನಡದ ಹರವು ಹಬ್ಬಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.ಐ.ಟಿ ಉದ್ಯಮದಲ್ಲಿರುವಅನ್ಯ ಭಾಷಿಕರಿಗೆ ಯುವ ಕನ್ನಡಿಗರ ತಂಡವೊಂದು ಹತ್ತು ವರ್ಷಗಳಿಂದ ‘ಸಿಂಪಲ್ಲಾಗಿ ಕನ್ನಡ’ ಕಲಿಸುವ ಕೈಂಕರ್ಯದಲ್ಲಿ ತೊಡಗಿದೆ.

ಬೆಂಗಳೂರಿನಲ್ಲಿ ಐ.ಟಿ ಉದ್ಯೋಗಿಯಾಗಿರುವ ಭದ್ರಾವತಿಯ ಮಧುಚಂದ್ರ ಎಚ್‌.ಬಿ. ತಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳ ಜತೆಗೂಡಿ ಅನ್ಯ ಭಾಷಿಕ ಟೆಕಿಗಳಿಗೆ ಕನ್ನಡ ಕಲಿಸುತ್ತಿದ್ದಾರೆ.

‘ಐ.ಟಿ ಮತ್ತು ಬಿ.ಟಿ ಕ್ಷೇತ್ರದಲ್ಲಿ ಪರ ರಾಜ್ಯದವರೇ ಜಾಸ್ತಿ. ಅದರಲ್ಲಿ ಉತ್ತರ ಭಾರತೀಯರ ಸಂಖ್ಯೆ ಹೆಚ್ಚು. ಎಲ್ಲರಿಗೂ ಸ್ಥಳೀಯ ಭಾಷೆ ಕಲಿಯಬೇಕು ಎನ್ನುವ ತವಕ ಇದೆ. ಅವರಿಗೆ ಸುಲಭ ಮತ್ತು ಸರಳವಾಗಿ ಕನ್ನಡ ಕಲಿಸಬೇಕು. ತೆಲುಗು, ತಮಿಳು ಮತ್ತು ಮಲಯಾಳಿ ಭಾಷಿಕರು ಬೇಗ ಕಲಿಯುತ್ತಾರೆ. ಉತ್ತರ ಭಾರತೀಯರಿಗೆ ಸ್ವಲ್ಪ ಕಷ್ಟ’ ಎನ್ನುವುದು ಮಧುಚಂದ್ರ ಅವರ ಅನುಭವದ ಮಾತು.

‘ಮೊದಲು ಸುಲಭವಾಗಿ ಕನ್ನಡ ಮಾತನಾಡುವುದನ್ನು ಮತ್ತು ಬೇರೆಯವರು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಕಲಿಸುತ್ತೇವೆ. ನಂತರ ಭೂತ, ವರ್ತಮಾನ ಮತ್ತು ಭವಿಷ್ಯತ್‌ ಕಾಲ, ಲಿಂಗಗಳು, ಏಕವಚನ, ಬಹುವಚನ ಬಳಕೆ ಕಲಿಸಿಕೊಡುತ್ತೇವೆ. ನಂತರ ಅಂಕಿಸಂಖ್ಯೆ ಮತ್ತು ಪದಗಳ ಉಪಯೋಗ ಹೇಳಿಕೊಡಲಾಗುತ್ತದೆ. ಅಂಗಡಿ, ಹೋಟೆಲ್‌ ಮತ್ತು ಆಟೊ ಚಾಲಕರ ಜತೆ ಕನ್ನಡದಲ್ಲಿಯೇ ವ್ಯವಹರಿಸುವಂತೆ ಉತ್ತೇಜಿಸುತ್ತೇವೆ’ ಎನ್ನುತ್ತಾರೆ.

‘ವಾರದಲ್ಲಿ ಮೂರು ತರಗತಿಯಂತೆ ಮೂರು ವಾರ ಕನ್ನಡ ತರಗತಿ ನಡೆಸುತ್ತೇವೆ. ಇಲ್ಲಿಯವರೆಗೆ (ಹತ್ತು ವರ್ಷದಲ್ಲಿ) ನಮ್ಮ ತಂಡ ಮೂರು ಸಾವಿರ ಅನ್ಯ ಭಾಷಿಕರಿಗೆ ಕನ್ನಡ ಕಲಿಸಿದ ಹೆಮ್ಮೆ ಇದೆ. ಕೆಲವರು ಮನೆಯಿಂದಲೂ ಆನ್‌ಲೈನ್‌ನಲ್ಲಿ (ಸ್ಕೈಪ್‌) ಕನ್ನಡ ಕಲಿಯುತ್ತಿದ್ದಾರೆ. ನಮ್ಮ ಈ ಕೆಲಸಕ್ಕೆ ಸಾಫ್ಟವೇರ್‌ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗ (ಎಚ್‌.ಆರ್‌) ಸಹಕಾರ ಬಹು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಕಚೇರಿ ಬಿಡುವಿನ ವೇಳೆ ಒಂದು ಅಥವಾ ಎರಡು ತಾಸು ತರಗತಿ ತೆಗೆದುಕೊಳ್ಳುತ್ತೇವೆ’ ಎಂದು ಅವರು ವಿವರಿಸಿದರು.

ಕನ್ನಡ ಕಲಿಕೆಗೆ ಡಾ.ರಾಜ್‌ ಸಿನಿಮಾ ಪ್ರೇರಣೆ

‘ಪರ ರಾಜ್ಯದವರಿಗೆ ಕನ್ನಡ ಸಿನಿಮಾ ತೋರಿಸುತ್ತೆವೆ. ಕನ್ನಡ ಸಿನಿಮಾ ನೋಡುವಂತೆ ಹೇಳುತ್ತೇವೆ. ಡಾ. ರಾಜ್‌ ಕುಮಾರ್‌ ಅವರ ಸಿನಿಮಾದಲ್ಲಿ ತೋರಿಸುತ್ತೇವೆ. ಅವರು ಬಳಸುವ ಸ್ವಚ್ಛ ಕನ್ನಡ ಅರ್ಥ ಮಾಡಿಕೊಳ್ಳಲು ಸುಲಭ. ಮಹಿಳಾ ಉದ್ಯೋಗಿಗಳು ಬೇಗ ಕನ್ನಡ ಕಲಿಯುತ್ತಾರೆ. ಶ್ರದ್ಧೆಯಿಂದ ನೋಟ್‌ ಮಾಡಿಟ್ಟುಕೊಳ್ಳುತ್ತಾರೆ’ ಎಂದು ಮಧುಚಂದ್ರ ತಮ್ಮ ಅನುಭವವನ್ನು ‘ಮೆಟ್ರೊ’ ಜತೆ ಹಂಚಿಕೊಂಡರು.

‘ಹೊರ ರಾಜ್ಯದವರು ಅದರಲ್ಲೂ ಟೆಕಿಗಳು ಕನ್ನಡ ವಿರೋಧಿಗಳು ಎನ್ನುವ ಭಾವನೆ ಇದೆ. ಒಂದಿಬ್ಬರ ವರ್ತನೆಯನ್ನು ಎಲ್ಲರಿಗೂ ಅನ್ವಯಿಸಲಾಗದು. ಅವರಿಗೆ ಕನ್ನಡ ಕಲಿಯಲು ಆಸಕ್ತಿ ಇಲ್ಲ ಎಂಬ ಮಾತು ಒಪ್ಪಲಾಗದು. ಕನ್ನಡಿಗರಾದ ನಾವು ಮೊದಲು ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು. ಅಂದಾಗ ಅವರು ಕಲಿಯಲು ಪ್ರಯತ್ನಿಸುತ್ತಾರೆ’ ಎನ್ನುತ್ತಾರೆ ಮಧುಚಂದ್ರ.

*ಮೊದಲು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದ ಐ.ಟಿ. ಮತ್ತು ಬಿ.ಟಿ ಕ್ಷೇತ್ರದಲ್ಲಿರುವ ಕನ್ನಡಿಗರು ಈಗ ಯಾವ ಹಿಂಜರಿಕೆ ಇಲ್ಲದೆ ಕನ್ನಡದಲ್ಲೇ ಮಾತನಾಡುವ ವಾತಾವರಣ ನಿರ್ಮಾಣವಾಗಿದೆ. ಪರ ರಾಜ್ಯದವರೊಂದಿಗೆ ಕನ್ನಡಿಗರು ಆದಷ್ಟೂ ಕನ್ನಡದಲ್ಲಿ ಮಾತನಾಡಬೇಕು. ಅವರು ತಪ್ಪು ಮಾತನಾಡಿದರೆ ಅಪಹಾಸ್ಯ ಮಾಡದೆ, ತಿದ್ದಿ ಹೇಳಬೇಕು. ಬಲವಂತವಾಗಿ ಕನ್ನಡ ಕಲಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಕಲಿಸಬೇಕು. ಉತ್ತೇಜನ ನೀಡಬೇಕು. ನಮ್ಮ ಭಾಷೆಯ ಹಿರಿಮೆ ಹೇಳಬೇಕು. ಖಂಡಿತ ಅವರು ತಾವಾಗಿಯೇ ಕನ್ನಡ ಕಲಿಯುತ್ತಾರೆ.

- ಮಧುಚಂದ್ರ., ಐ.ಟಿ. ಉದ್ಯೋಗಿ

ಸಂಪರ್ಕ: ಮೊ– 9980599700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT