ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕಿಮ್ಮರ್’ ಬಳಸಿ ಖಾತೆಗೆ ಕನ್ನ

ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಂದ ದೂರು
Last Updated 16 ಜೂನ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಎಟಿಎಂ ಘಟಕವೊಂದರಲ್ಲಿ ಸ್ಕಿಮ್ಮರ್ ಉಪಕರಣ ಹಾಗೂ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಖದೀಮರು, ಗ್ರಾಹಕರ ಮಾಹಿತಿಯನ್ನು ಕದ್ದು ಅವರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿದ್ದಾರೆ.

ಆ ಸಂಬಂಧ ಭುವನೇಶ್ವರಿನಗರ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಮಧುಪಾಲ ಅವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಇದೇ 10 ಹಾಗೂ 11ರಂದು ಎಟಿಎಂ ಘಟಕಗಳಿಗೆ ಬಂದು ಹೋಗಿದ್ದಾರೆ ಎನ್ನಲಾದ ಖದೀಮರು, ಗ್ರಾಹಕರ ಪಿನ್ ಸಮೇತ ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದ್ದೊಯ್ದಿದ್ದಾರೆ. ಅದನ್ನು ಬಳಸಿಕೊಂಡು ನಕಲಿ ಕಾರ್ಡ್‌ಗಳನ್ನು ತಯಾರಿಸಿ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಬೇರೆ ಬೇರೆ ಎಟಿಎಂ ಘಟಕಗಳಲ್ಲಿ ಡ್ರಾ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕೆನರಾ ಬ್ಯಾಂಕ್‌ನ ಕೆಲ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳದಿದ್ದರೂ ಅವರ ಖಾತೆಯಿಂದ ಹಣ ಕಡಿತವಾಗಿತ್ತು. ಗಾಬರಿಗೊಂಡಿದ್ದ ಗ್ರಾಹಕರು, ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ನೀಡಿದ್ದರು. ಆ ಬಗ್ಗೆ ಪರಿಶೀಲನೆ ನಡೆಸಿದಾಗ,ಸ್ಕಿಮ್ಮರ್ ಉಪಕರಣ ಬಳಸಿ ಹಣ ಕದ್ದಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

‘ಖದೀಮರ ಕೃತ್ಯದಿಂದ ಹಣ ಕಳೆದುಕೊಂಡ ಗ್ರಾಹಕರ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಿಲ್ಲ. ಜೊತೆಗೆ, ಯಾವ್ಯಾವ ಎಟಿಎಂ ಘಟಕಗಳಲ್ಲಿ ಉಪಕರಣ ಅಳವಡಿಸಿದ್ದರು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ಈ ಹಿಂದೆಯೂ ಹಲವು ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಉಪಕರಣ ಬಳಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗಿತ್ತು. ಆ ಸಂಬಂಧ ಹಲವರನ್ನು ಬಂಧಿಸಿ ಜೈಲಿಗೂ ಕಳುಹಿಸಲಾಗಿತ್ತು. ಈಗ ಪುನಃ ಸ್ಕಿಮ್ಮರ್ ಉಪಕರಣ‍ಪ್ರಕರಣ ವರದಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT