ಬುಧವಾರ, ಡಿಸೆಂಬರ್ 8, 2021
23 °C
ರಸ್ತೆಯಲ್ಲೇ ನಿಲ್ಲುತ್ತಿದೆ ನೀರು; ಪಾದಚಾರಿ ಮಾರ್ಗದಲ್ಲೇ ಕಸದ ರಾಶಿ; ಕಿತ್ತುಹೋದ ಡಾಂಬರು ರಸ್ತೆಗೆ ತೇಪೆ

ಮಳೆಗೆ ಸ್ಮಾರ್ಟ್‌ ರಸ್ತೆಗಳ ಬಣ್ಣ ಬಯಲು!

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಸ್ತೆಯಲ್ಲಿ ಮಾರುದ್ದದವರೆಗೂ ನಿಂತಿರುವ ಮಳೆ ನೀರು. ಪಾದಚಾರಿ ಮಾರ್ಗದಲ್ಲೇ ಬಿದ್ದಿರುವ ಕಸದ ರಾಶಿ. ಅಲ್ಲಲ್ಲಿ ಕಿತ್ತುಹೋಗಿರುವ ಡಾಂಬರು ರಸ್ತೆಗೆ ಹಾಕಿರುವ ತೇಪೆ’...

‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ನಿರ್ಮಾಣವಾಗಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರೆ ಕಾಣುವ ದೃಶ್ಯಗಳಿವು.

ಉದ್ಯಾನನಗರಿಯ ರಸ್ತೆಗಳಿಗೆ ಹೊಸ ಮೆರುಗು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಒಟ್ಟು 36 ರಸ್ತೆಗಳನ್ನು (26 ಕಿ.ಮೀ) ಅಭಿವೃದ್ಧಿಪಡಿಸಲು ಮುಂದಾಗಿದೆ. ಇದಕ್ಕಾಗಿ ಅಂದಾಜು ₹481.65 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈವರೆಗೆ ₹191.1 ಕೋಟಿ ವೆಚ್ಚದಲ್ಲಿ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎರಡೇ ತಿಂಗಳಲ್ಲಿ ಅವುಗಳ ನಿಜ ಬಣ್ಣ ಬಯಲಾಗಿದೆ. 

ವುಡ್ಸ್‌ಸ್ಟ್ರೀಟ್‌ ರಸ್ತೆ ಪ್ರವೇಶಿ ಸುತ್ತಿದ್ದಂತೆ ರಸ್ತೆಯ ಬಲಬದಿಯಲ್ಲಿ ಮಾರುದ್ದದವರೆಗೂ ಮಳೆ ನೀರು ನಿಂತಿರುವುದು ಕಾಣಿಸುತ್ತದೆ. ವಾಹನ ನಿಲುಗಡೆಗೆಂದು ರಸ್ತೆ ಬದಿಯಲ್ಲಿ ಬಿಟ್ಟಿರುವ ಜಾಗದಲ್ಲಿ ತ್ಯಾಜ್ಯ ಹರಡಿಕೊಂಡಿದೆ. ಅಣತಿ ದೂರದಲ್ಲೇ ಪಾದಚಾರಿ ಮಾರ್ಗದ ಮೇಲೆ ಕಟ್ಟಡದ ಅವಶೇಷಗಳನ್ನು ಸುರಿಯಲಾಗಿದೆ. ಜಲ್ಲಿಕಲ್ಲುಗಳ ರಾಶಿಯೂ ಬಿದ್ದಿದೆ. ವಯಸ್ಕರು ಮತ್ತು ಮಕ್ಕಳು ಅದನ್ನು ದಾಟಿಕೊಂಡು ಹೋಗಲು ಪ್ರಯಾಸ ಪಡುವಂತಾಗಿದೆ. 

ರಸ್ತೆಗಳ ಸೌಂದರ್ಯ ವೃದ್ಧಿಸುವ ಸಲುವಾಗಿ ಪಾದಚಾರಿ ಮಾರ್ಗದ ಎರಡೂ ತುದಿಗಳಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಅವುಗಳಲ್ಲಿ ಬೆಳೆದಿರುವ ಕಳೆಗಳನ್ನು ಕೀಳುವ ಕೆಲಸವಂತೂ ಆಗಿಲ್ಲ. ಪಾದಚಾರಿ ಮಾರ್ಗದಲ್ಲಿ ಅಲ್ಲಲ್ಲಿ ಕಸದ ರಾಶಿಯೇ ಬಿದ್ದಿದೆ. ಅದರಿಂದ ದುರ್ನಾತವೂ ಹೊರಹೊಮ್ಮುತ್ತಿದೆ. ಆ ಹಾದಿಯಲ್ಲಿ ಸಾಗುವ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯ. ಟೇಟ್‌ಲೈನ್‌ ರಸ್ತೆಯಲ್ಲೂ ಇದೇ ಚಿತ್ರಣ ಕಂಡುಬರುತ್ತದೆ.

ಕಾನ್ವೆಂಟ್‌ ರಸ್ತೆಗೆ ಕಾಲಿಡುತ್ತಿದ್ದಂತೆ ಕಿತ್ತುಹೋದ ಡಾಂಬರು ರಸ್ತೆಯ ದರ್ಶನವಾಗುತ್ತದೆ. ಅದಕ್ಕೆ ತೇಪೆ ಕೂಡ ಹಾಕಲಾಗಿದೆ. ಅದು ಸ್ಮಾರ್ಟ್‌ ರಸ್ತೆಯ ಕಲ್ಪನೆಯನ್ನೇ ಅಣಕಿಸುವಂತಿದೆ. ಅದೇ ಮಾರ್ಗವಾಗಿ ಮುಂದೆ ಹೋದರೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದು ಕಾಣುತ್ತದೆ. ಸತತ ಮಳೆಯಿಂದಾಗಿ ಪಾದಚಾರಿ ಮಾರ್ಗಗಳಲ್ಲಿ ಕಾಲಿಡು ವುದೂ ಕಷ್ಟವಾಗಿದೆ. ಅಲ್ಲಲ್ಲಿ ಪಾಚಿ ಬೆಳೆದಿದ್ದು ಅವುಗಳ ಮೇಲೆ ಕಾಲಿಟ್ಟರೆ ಜಾರಿ ಬೀಳುವ ಅಪಾಯವೂ ಇದೆ. ಹೀಗಾಗಿ ಪಾದಚಾರಿಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡೇ ಓಡಾಡಬೇಕು!

ಕೆಲವೆಡೆ ಪಾದಚಾರಿಮಾರ್ಗದಲ್ಲಿ ಮರಗಳ ಸುತ್ತಲೂ ಕಟ್ಟೆಗಳನ್ನು ನಿರ್ಮಿಸಿರುವುದರಿಂದ ಪಾದಚಾರಿ ಮಾರ್ಗದ ಮಟ್ಟವು ಏರುಪೇರಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಮಟ್ಟ ಹಾಗೂ ಮರಗಳ ಸುತ್ತಲಿನ ಮಣ್ಣಿನ ಹೊದಿಕೆಯ ಮಟ್ಟ ಏಕರೂಪದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಅಧಿಕಾರಿಗಳು ಇದೇ ಮಾದರಿಯನ್ನು ಸ್ಮಾರ್ಟ್‌ ಸಿಟಿ ರಸ್ತೆಗಳಿಗೂ ಅನ್ವಯಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸುತ್ತಾರೆ.  

‘ಜೋರಾಗಿ ಮಳೆ ಬಂದರೆ ನೆಲ ಮಹಡಿಗೆ ನೀರು ನುಗ್ಗುತ್ತದೆ. ಒಮ್ಮೊಮ್ಮೆ ಮಳಿಗೆಯ ಒಳಗೂ ನೀರು ಬರುವುದುಂಟು. ಜಾಗತಿಕ ದರ್ಜೆಯ ರಸ್ತೆ ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಇಡೀ ರಸ್ತೆಯೇ ಕಿತ್ತುಹೋಯಿತು. ಈಗ ಮತ್ತೆ ಹೊಸ ಸ್ಪರ್ಶ ನೀಡುವುದಾಗಿ ಹೇಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಪೈಪ್‌ಗಳನ್ನು ಹರಡಿ ದ್ದಾರೆ. ಪಾದಚಾರಿ ಮಾರ್ಗವನ್ನೂ ಕಿತ್ತುಹಾಕಿದ್ದಾರೆ. ಇದರಿಂದ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ’ ಎಂದು ಕಮರ್ಷಿಯಲ್‌ ಸ್ಟ್ರೀಟ್‌ನ ವರ್ತಕ ಶಕೀಬ್‌ ಕಿಡಿಕಾರಿದರು.

‘ಹಬ್ಬದ ಋತುವಿನಲ್ಲಿ ಒಂದಷ್ಟು ವಹಿವಾಟು ನಡೆಯಬಹುದು. ಕೋವಿಡ್‌ ಸಮಯದಲ್ಲಿ ಉಂಟಾಗಿದ್ದ ನಷ್ಟದಿಂದ ಪಾರಾಗಬಹುದು ಎಂಬ ನಿರೀಕ್ಷೆ ಇತ್ತು. ರಸ್ತೆ ಅಗೆದಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಮಕ್ಕಳೊಂದಿಗೆ ಬರುವ ಗ್ರಾಹಕರು ರಸ್ತೆ ದಾಟಲೂ ಪರಿತಪಿಸುವಂತಾಗಿದೆ. ಆಗಾಗ ವಿದ್ಯುತ್‌ ಕೂಡ ಕೈಕೊಡುತ್ತದೆ. ನೀರಿನ ಸಮಸ್ಯೆಯೂ ಉದ್ಭವಿಸುತ್ತದೆ’ ಎಂದು ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು