ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿಯಲ್ಲಿ ಸೋಲಾರ್‌ ಇ.ವಿ ಚಾರ್ಜಿಂಗ್‌ ಹಬ್‌

24 ಗಂಟೆಯೂ ಚಾರ್ಜ್‌ ಮಾಡಬಹುದಾದ ದೇಶದ ಮೊದಲ ಕೇಂದ್ರ
Published 22 ಆಗಸ್ಟ್ 2024, 23:30 IST
Last Updated 22 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಸ್ಕಾಂ ವತಿಯಿಂದ ದಿನದ 24 ಗಂಟೆಯೂ ಚಾರ್ಜ್‌ ಮಾಡಬಹುದಾದ ದೇಶದ ಮೊದಲ ಸೌರಶಕ್ತಿ ಆಧಾರಿತ ಬ್ಯಾಟರಿ ಸ್ಟೋರೇಜ್‌ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಸೆಂಟರ್‌ ದೇವನಹಳ್ಳಿಯಲ್ಲಿರುವ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿದ್ದು, ಸೆಪ್ಟೆಂಬರ್‌ ಅಂತ್ಯದ ಒಳಗೆ ಸೇವೆಗೆ ಲಭ್ಯವಾಗಲಿದೆ.

ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಾರ್ಜಿಂಗ್‌ ಹಬ್‌ನಲ್ಲಿ ಏಕ ಕಾಲದಲ್ಲಿ 23 ವಾಹನಗಳನ್ನು ಚಾರ್ಜ್‌ ಮಾಡಬಹುದು. ಅದರಲ್ಲಿ ಅರ್ಧ ಗಂಟೆಯಿಂದ ಒಂದು ಗಂಟೆಯ ಒಳಗೆ ಚಾರ್ಜ್‌ ಮಾಡಬಹುದಾದ 20 ವೇಗದ (ಫಾಸ್ಟ್‌) ಚಾರ್ಜಿಂಗ್‌ ಪಾಯಿಂಟ್‌ಗಳಿವೆ. ಮೂರು  ಸಾಮಾನ್ಯ ಚಾರ್ಜಿಂಗ್‌ ಪಾಯಿಂಟ್‌ಗಳೂ ಇವೆ.

ಜಿಐಜೆಡ್‌ ಮತ್ತು ನೂನಮ್ ಕಂಪನಿಗಳ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಈ ಹಬ್‌ನಲ್ಲಿ 50 ಕೆಡಬ್ಲ್ಯು, 30 ಕೆಡಬ್ಲ್ಯು ಸಾಮರ್ಥ್ಯ ಹೊಂದಿರುವ ವೇಗದ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಒದಗಿಸಲಾಗುತ್ತಿದೆ. 7.5 ಕೆಡಬ್ಲ್ಯು ಮತ್ತು 3.3 ಕೆಡಬ್ಲ್ಯು ಸಾಮರ್ಥ್ಯದ ಸಾಮಾನ್ಯ ಚಾರ್ಜಿಂಗ್‌ ಪಾಯಿಂಟ್‌ಗಳನ್ನೂ ಒದಗಿಸಲಾಗುತ್ತದೆ.

ಇಂಟಿಗ್ರೇಟೆಡ್‌ (ಸಂಯೋಜಿತ) ವ್ಯವಸ್ಥೆಯಡಿ ತಲಾ ಎರಡು 45 ಕೆ.ವಿ ಸಾಮರ್ಥ್ಯದ 2 ಲೈಫ್‌ ಬ್ಯಾಟರಿಗಳು ಹಗಲಿನಲ್ಲಿ ಸೌರಶಕ್ತಿಯನ್ನು ಸಂಗ್ರಹಿಸಿ ರಾತ್ರಿ ಬಳಕೆ ಮಾಡುವುದರಿಂದ ದಿನದ 24 ಗಂಟೆಯೂ ಜಾರ್ಜಿಂಗ್‌ ಸೌಲಭ್ಯ ನೀಡಲು ಸಾಧ್ಯವಾಗಲಿದೆ. ಜೊತೆಗೆ ಸೆಕೆಂಡ್‌ ಲೈಫ್‌ ಕಾರ್‌ ಬ್ಯಾಟರಿಗಳನ್ನು ಕೂಡ ಸೌರಶಕ್ತಿ ಸಂಗ್ರಹಕ್ಕೆ ಬಳಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ವಿದ್ಯುತ್‌ ಚಾಲಿತ ವಾಹನಗಳ (ಇ.ವಿ) ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ.ವಿ.ಗಳೇ ಜಾಸ್ತಿ ಬರುತ್ತಿವೆ. ವಿಮಾನ ನಿಲ್ದಾಣದ ಆವರಣದಲ್ಲಿ ಇ.ವಿ ಚಾರ್ಜಿಂಗ್‌ ಪಾಯಿಂಟ್‌ಗಳಿವೆಯಾದರೂ ಅವು ವಿಮಾನ ನಿಲ್ದಾಣದ ವಾಹನಗಳಿಗೆ ಮಾತ್ರ ಬಳಕೆಗೆ ಸಿಗುತ್ತಿವೆ. ಖಾಸಗಿ ಏಜೆನ್ಸಿಗಳು ತಮ್ಮ ವಾಹನಗಳಿಗೆ ಎರಡು ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಿವೆ. ಇದು ಕೂಡ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ.

ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ವಾಹನಗಳು ಬರುತ್ತಿವೆ. ಅವುಗಳಲ್ಲಿ ಇ.ವಿಗಳನ್ನು ಚಾರ್ಜ್‌ ಮಾಡಲು ಬೇರೆಡೆಗೆ ಹುಡುಕೊಂಡು ಹೋಗಬೇಕಿತ್ತು. ಈ ಸಮಸ್ಯೆ ತಪ್ಪಿಸಲು ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಿಂದ ಕೇವಲ 1.5 ಕಿ.ಮೀ. ದೂರದಲ್ಲಿರುವ ಬೆಸ್ಕಾಂನ 224 ಕೆ.ವಿ. ಪವರ್‌ ಸ್ಟೇಷನ್‌ ಜಾಗದಲ್ಲಿ ಸೋಲಾರ್‌ ಚಾರ್ಜಿಂಗ್ ಸೆಂಟರ್‌ ನಿರ್ಮಾಣಗೊಳ್ಳುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

2500 ಇ.ವಿ ಚಾರ್ಜಿಂಗ್‌ ಸೆಂಟರ್‌ ಶೀಘ್ರ ಸ್ಥಾಪನೆ

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂಧನ ಸಚಿವರು ರಾಜ್ಯದಾದ್ಯಂತ ಇ.ವಿ ಚಾರ್ಜಿಂಗ್ ಸೆಂಟರ್‌ಗಳನ್ನು ಆರಂಭಿಸಲು ಮುತುವರ್ಜಿ ವಹಿಸಿದ್ದಾರೆ. ದೇವನಹಳ್ಳಿಯಲ್ಲಿ ದೊಡ್ಡಮಟ್ಟದಲ್ಲಿ ಇ.ವಿ ಚಾರ್ಜಿಂಗ್‌ ಹಬ್‌ ನಿರ್ಮಾಣಗೊಳ್ಳುತ್ತಿದೆ. ಇನ್ನು ಒಂದು ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶದಲ್ಲಿಯೇ ಅತಿ ಹೆಚ್ಚು ಅಂದರೆ 4.80 ಲಕ್ಷ ವಿದ್ಯುತ್‌ಚಾಲಿತ ವಾಹನಗಳು ಕರ್ನಾಟಕದಲ್ಲಿಯೇ ಇವೆ. ಅದಕ್ಕೆ ಸರಿಯಾಗಿ 5765 ಇವಿ ಚಾರ್ಜಿಂಗ್‌ ಕೇಂದ್ರಗಳೂ ಇವೆ. ಅದರಲ್ಲಿ 4462 ಕೇಂದ್ರಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿಯಲ್ಲಿವೆ ಎಂದು ಮಾಹಿತಿ ನೀಡಿದರು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 2500 ಇವಿ ಚಾರ್ಚಿಂಗ್ ಕೇಂದ್ರಗಳನ್ನು ತೆರೆಯಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರ ನೀಡಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಳ್ಳುತ್ತಿರುವ ಇವಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಅಳವಡಿಸಲಾಗುತ್ತಿರುವ ಸೋಲಾರ್‌ ಪ್ಯಾನಲ್‌
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಳ್ಳುತ್ತಿರುವ ಇವಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಅಳವಡಿಸಲಾಗುತ್ತಿರುವ ಸೋಲಾರ್‌ ಪ್ಯಾನಲ್‌
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ  ಸೋಲಾರ್‌ ಇವಿ ಚಾರ್ಜಿಂಗ್‌ ಹಬ್‌ ನಿರ್ಮಾಣಗೊಂಡ ಬಳಿಕ ಈ ರೀತಿ ಕಾಣಬಹುದು ಎಂಬ ಗ್ರಾಫಿಕ್‌ ಚಿತ್ರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ  ಸೋಲಾರ್‌ ಇವಿ ಚಾರ್ಜಿಂಗ್‌ ಹಬ್‌ ನಿರ್ಮಾಣಗೊಂಡ ಬಳಿಕ ಈ ರೀತಿ ಕಾಣಬಹುದು ಎಂಬ ಗ್ರಾಫಿಕ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT