ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ: ವಿಚಾರಣೆ ಆರಂಭಿಸಿದ ಲೋಕಾಯುಕ್ತ

Published 9 ಜನವರಿ 2024, 20:23 IST
Last Updated 9 ಜನವರಿ 2024, 20:23 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪಗಳ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಲೋಕಾಯುಕ್ತರು, ನಗರದ ವಿವಿಧ ಸ್ಥಳಗಳಿಗೆ ಮಂಗಳವಾರ ದಿಢೀರ್‌ ಭೇಟಿನೀಡಿ ಪರಿಶೀಲನೆ ನಡೆಸಿದರು.

‘ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಘನ ತ್ಯಾಜ್ಯವನ್ನು ತಂದು ಸುರಿದು ಹೋಗುತ್ತಿರುವುದು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ವ್ಯಾಪಕ ದೂರುಗಳು ಬರುತ್ತಿವೆ. ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪಗಳ ಬಗ್ಗೆಯೂ ದೂರುಗಳು ಬಂದಿವೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಲಾಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ತಿಳಿಸಿದರು.

ನಗರದ ಉತ್ತರ ಭಾಗದ ಹೆಬ್ಬಾಳ, ಎಂ.ಎಸ್‌. ಪಾಳ್ಯ, ಯಲಹಂಕ ಮತ್ತು ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಸ್ಥಳಗಳಿಗೆ ಮಂಗಳವಾರ ಮಧ್ಯಾಹ್ನ ದಿಢೀರ್‌ ಭೇಟಿನೀಡಿದ ಲೋಕಾಯುಕ್ತರು, ಘನ ತ್ಯಾಜ್ಯ ವಿಲೇವಾರಿ ಕುರಿತು ಪರಿಶೀಲಿಸಿದರು. ಬಹುತೇಕ ಸ್ಥಳಗಳಲ್ಲಿ ರಸ್ತೆ ಬದಿ ಬಿದ್ದಿದ್ದ ಘನ ತ್ಯಾಜ್ಯದ ರಾಶಿಗಳನ್ನು ತಕ್ಷಣ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಪಾಲಿಕೆಯ ಜಂಟಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿ, ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಶೀಲಿಸಲಾಗಿದೆ. ಇಂದೋರ್‌ ಮಾದರಿಯಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹ ಡಬ್ಬಿಗಳನ್ನು ರಸ್ತೆಯ ಬದಿಗಳಲ್ಲಿ ಇರಿಸುವ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ’ ಎಂದು ಲೋಕಾಯುಕ್ತರು ತಿಳಿಸಿದರು.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು ಬೆಂಗಳೂರು ದಕ್ಷಿಣ ಭಾಗದ ಆಸ್ಟಿನ್‌ ಟೌನ್‌, ಆನೆಪಾಳ್ಯ, ನಿಮ್ಹಾನ್ಸ್‌ ಆಸ್ಪತ್ರೆ, ಸಂಜಯ ಗಾಂಧಿ ಆಸ್ಪತ್ರೆ ಆವರಣಕ್ಕೆ ಭೇಟಿನೀಡಿ ಪರಿಶೀಲಸಿಇದರು. ಬನಶಂಕರಿ ಆರನೇ ಹಂತದಲ್ಲಿರುವ ಲಿಂಗಧೀರನಹಳ್ಳಿಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿನೀಡಿ, ಅಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ಥಳೀಯರ ಅಹವಾಲು ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT