ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ–ಮನಗಳಲ್ಲಿ ‘ಜೈ ಶ್ರೀರಾಮ’ ಜಪ

ದೇವಾಲಯಗಳಲ್ಲಿ ವಿಶೇಷ ಪೂಜೆ l ಪುಳಕಿತರಾದ ಭಕ್ತರು
Last Updated 5 ಆಗಸ್ಟ್ 2020, 22:59 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನರವೇರಿದ್ದು, ಈ ವೇಳೆಯಲ್ಲಿ ನಗರದಲ್ಲಿ ಸಡಗರ ಕಂಡುಬಂತು. ದೇವಾಲಯಗಳು ವಿಶೇಷ ದೀಪಾಲಂಕಾರದಿಂದ ಕಂಗೊಳಿಸಿದವು. ಮನೆ–ಮನಗಳಲ್ಲಿ ‘ಶ್ರೀರಾಮ’ ನಾಮ ಜಪ ನಡೆಯಿತು. ಭೂಮಿ ಪೂಜೆ ನೆರವೇರುತ್ತಿದ್ದಂತೆ ಭಕ್ತರು ಸಿಹಿ ಹಂಚಿ ಖುಷಿಪಟ್ಟರು.

ಕೊರೊನಾ ಸೋಂಕು ವ್ಯಾಪಕವಾಗಿದ್ದರೂ, ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮನೆಗಳ ಮುಂದೆ ಹಾಕಲಾಗಿದ್ದ ಬಣ್ಣ ಬಣ್ಣದ ರಂಗೋಲಿಗಳು ಈ ಸಡಗರಕ್ಕೆ ಸಾಕ್ಷಿಯಂತಿದ್ದವು. ಮನೆಗಳಲ್ಲಿ ದೀಪ ಹಚ್ಚಿ ರಾಮ ದೇವರಿಗೆ ನಮಿಸಿದರು. ಕೋವಿಡ್ ವ್ಯಾಪಕವಾಗಿರುವ ಕಾರಣ ಮನೆಯಲ್ಲಿಯೇ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದರು.

ವಿಲ್ಸನ್‌ ಗಾರ್ಡನ್‌ನಲ್ಲಿರುವ ಶ್ರೀರಾಮ ದೇವಸ್ಥಾನ,ಇಂದಿರಾನಗರದ ಧೂಪನಹಳ್ಳಿಯ ಶ್ರೀ ಕೋದಂಡರಾಮ ದೇವಸ್ಥಾನ,ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ರಾಮಮಂದಿರ, ಬಸವನಗುಡಿಯ ಮಾಡೆಲ್‌ ಹೌಸ್‌ ಸ್ಟ್ರೀಟ್‌ನಲ್ಲಿರುವ ಶ್ರೀರಾಮ ದೇವಸ್ಥಾನ, ಜೆ.ಪಿ.ನಗರ 33ನೇ ಮುಖ್ಯ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನ,ಜಯನಗರ 9ನೇ ಬ್ಲಾಕ್‌ನ ಆಂಜನೇಯ ಸೇರಿದಂತೆ ವಿವಿಧ ರಾಮ ಹಾಗೂ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಜಪ ಸಾಮಾನ್ಯವಾಗಿತ್ತು. ಬೀದಿಗಳಲ್ಲಿ ಶ್ರೀರಾಮ ವೇಷಧಾರಿಗಳು ಕಂಡುಬಂದರು.

ಇಸ್ಕಾನ್, ಬನಶಂಕರಿ, ಗವಿಗಂಗಾಧರೇಶ್ವರ, ದೊಡ್ಡ ಗಣೇಶ, ಸೋಮೇಶ್ವರ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ವಿವಿಧ ದೇವಸ್ದಾನಗಳಲ್ಲಿ ಇಲಾಖೆಯ ಸೂಚನೆಯಂತೆ ಏಕಕಾಲದಲ್ಲಿ ಪೂಜೆ ನೆರವೇರಿಸಲಾಯಿತು. ಕೋವಿಡ್ ಕಾರಣದಿಂದ ಭಕ್ತರಿಗೆ ಪರಸ್ಪರ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ಸೇವೆಗಳಿಗೂ ಅವಕಾಶ ಇರಲಿಲ್ಲ.

ವೀಕ್ಷಣೆಗೆ ವ್ಯವಸ್ಥೆ: ಭೂಮಿ ಪೂಜೆಯ ವೀಕ್ಷಣೆಗೆ ನಗರದ ವಿವಿಧೆಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಬ್ಯಾಂಕ್‌ ಕಾಲೋನಿ ಸಮೀಪದ ಸಾಲಿಗ್ರಾಮ ಪಾರ್ಟಿ ಹಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭೂಮಿ ಪೂಜೆಯನ್ನು ವೀಕ್ಷಿಸಿದರು.
ಯುವಕರು ವಾಹನಗಳಿಗೆ ಕೇಸರಿ ಧ್ವಜಗಳನ್ನು ಅಳವಡಿಸಿ, ಜಯಘೋಷದೊಂದಿಗೆ ಸಂಭ್ರಮಿಸಿದರು.

ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶ್ರೀರಾಮನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಸತಿ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ಬಿಬಿಎಂಪಿ ಸದಸ್ಯರಾದ ಕೆ. ಉಮೇಶ್ ಶೆಟ್ಟಿ, ಶಾಂತಕುಮಾರಿ ಭಾಗವಹಿಸಿದ್ದರು.

ಡಿಸಿಎಂ ನೇತೃತ್ವದಲ್ಲಿ ವಿಶೇಷ ಪೂಜೆ

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೇತೃತ್ವದದಲ್ಲಿಮಲ್ಲೇಶ್ವರದ ರಾಮಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು.ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

‘ರಾಮನ ಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು. ಅದು ಈಗ ನನಸಾಗಿರುವುದು ನಿಜಕ್ಕೂ ಸಂತಸದ ವಿಚಾರ.500 ವರ್ಷಗಳಿಂದ ನಡೆಯುತ್ತಿದ್ದ ಸಾತ್ವಿಕ ಸಂಘರ್ಷ ಮತ್ತು 134 ವರ್ಷಗಳ ಕಾನೂನು ಹೋರಾಟದ ಬಳಿಕ ಮಂದಿರ‌ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ. ಈ ಕ್ಷಣಕ್ಕಾಗಿ ಸಂಕಲ್ಪ, ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲ ಶ್ರದ್ಧಾಳುಗಳಿಗೂ ನಮನಗಳು’ ಎಂದು ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ಗ್ರಾಹಕರಿಗೆ ಹೋಳಿಗೆ, ಲಡ್ಡು ವಿತರಣೆ

ನೃಪತುಂಗ ರಸ್ತೆಯಲ್ಲಿರುವ ‘ನಿಸರ್ಗ ಗ್ರ್ಯಾಂಡ್’‌ ಹೋಟೆಲ್‌ನಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ 450 ಗ್ರಾಹಕರಿಗೆ ಊಟದ ಜತೆಗೆ ಹೋಳಿಗೆ ಹಾಗೂ ಲಡ್ಡುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಹೋಟೆಲ್‌ ಒಳಗಡೆ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

‘ಹಲವು ವರ್ಷಗಳ ಕನಸು ನನಸಾಗಿದೆ. ಈ ಸಂಭ್ರಮಕ್ಕಾಗಿ 500 ಗ್ರಾಹಕರಿಗೆ ಹೋಳಿಗೆ ಹಾಗೂ ಲಡ್ಡುಗಳನ್ನು ವಿತರಿಸಿದ್ದೇವೆ’ ಎಂದು ಹೋಟೆಲ್ ಮಾಲೀಕ ಎಸ್‌.ಪಿ. ಕೃಷ್ಣರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT