ಭಾನುವಾರ, ಜುಲೈ 3, 2022
24 °C

ಐಎಸ್‌ಡಿ ಕರೆಗಳ ಪರಿವರ್ತನೆ ಜಾಲ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನಧಿಕೃತ ಟೆಲಿಫೋನ್ ಎಕ್ಸ್‌ಚೇಂಜ್ ವ್ಯವಸ್ಥೆಯ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಜಾಲದಲ್ಲಿದ್ದ ಇಬ್ಬರು ಆರೋಪಿಗಳನ್ನು ಮಿಲಿಟರಿ
ಇಂಟಲಿಜೆನ್ಸ್‌ ಸಹಕಾರದೊಂದಿಗೆ ಸಿಸಿಬಿಯ ‘ಭಯೋತ್ಪಾದನೆ ನಿಗ್ರಹ ದಳ’ದ (ಎಟಿಸಿ) ಅಧಿಕಾರಿಗಳು ‌ಬಂಧಿಸಿದ್ದಾರೆ.

ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಬಂಧಿತರು. 

‘ಆರೋಪಿಗಳು ಒಂದೇ ಬಾರಿಗೆ 32 ಸಿಮ್‌ ಕಾರ್ಡ್‌ಗಳನ್ನು ಬಳಸುವ 30 ಸಿಮ್‌ ಬಾಕ್ಸ್‌ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಟಿಎಂ ಬಡಾವಣೆಯ ಆರು ಸ್ಥಳಗಳಲ್ಲಿ ಅಳವಡಿಸಿಕೊಂಡಿದ್ದರು, ಸುಮಾರು 900ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿ, ಅನಧಿಕೃತವಾಗಿ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದರು.

‘ಈ ಜಾಲಕ್ಕೆ ಹವಾಲಾದಾರನಾಗಿ (ಏಜೆಂಟ್) ಕೆಲಸ ಮಾಡುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಅವರು ಹೇಳಿದರು.

ಆರೋಪಿಗಳಿಗೆ ಹವಾಲಾ ಹಣ: ‘ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಯಾಗಿ ಪರಿವರ್ತಿಸುವುದು ಕಾನೂನು ಬಾಹಿರ. ಬೇರೆ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರು ಇಲ್ಲಿನವರೊಂದಿಗೆ ಮಾತನಾಡಲು ಐಎಸ್‌ಡಿ ಕರೆಗಳನ್ನು ಬಳಸಬೇಕು. ಈ ಕರೆಗಳ ದರ ಸ್ಥಳೀಯ ಕರೆಗಳಿಗಿಂತ ಹೆಚ್ಚು. ಕರೆಗಳನ್ನು ಪರಿವರ್ತಿಸುವುದರಿಂದ ಸ್ಥಳೀಯ ಕರೆಗಳ ದರದಲ್ಲೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಎರಡೂ ದೇಶಗಳಲ್ಲಿ ಒಂದೇ ತಂತ್ರಜ್ಞಾನ ಬಳಸಿದಾಗ ಮಾತ್ರ ಇದು ಸಾಧ್ಯ. ಈ ಉದ್ದೇಶದಿಂದ ಆರೋಪಿಗಳು ದುಬಾರಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದರು. ಇದಕ್ಕಾಗಿ ಇವರಿಗೆ ಹವಾಲಾ ಮೂಲಗಳಿಂದ ಹಣ ಬರುತ್ತಿತ್ತು’ ಎಂದೂ ಪೊಲೀಸರು ವಿವರಿಸಿದರು.

ತಿಂಗಳಿಗೆ ₹15 ಲಕ್ಷ ವಹಿವಾಟು !

‘ದುಬೈನ ವ್ಯಕ್ತಿಯೊಬ್ಬನಿಂದ ಈ ತಂತ್ರಜ್ಞಾನದ ತರಬೇತಿ ಪಡೆದಿದ್ದ ಆರೋಪಿಗಳು, ಪ್ರತಿ ತಿಂಗಳು ₹15 ಲಕ್ಷದವರೆಗೆ ಹಣ ಸಂಪಾದಿಸುತ್ತಿದ್ದರು. ಒಂದು ವರ್ಷದಿಂದ ನಡೆಯುತ್ತಿರುವ ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಅವರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಈ ತಂತ್ರಜ್ಞಾನದಿಂದ ಕರೆಗಳ ತೆರಿಗೆ ವಂಚನೆ ಮಾತ್ರವಲ್ಲದೆ, ಮಹತ್ವದ ಮಾಹಿತಿ ಸಂಗ್ರಹಣೆಯೂ ಸಾಧ್ಯ. ರಾಷ್ಟ್ರದ ಭದ್ರತೆಗೂ ಈ ತಂತ್ರಜ್ಞಾನ ಮಾರಕ’ ಎಂದರು.

‘ಗ್ರಾಮೀಣ ಭಾಗದ ಜನರು ಸಿಮ್‌ ಖರೀದಿಸುವಾಗ ಅವರ ದಾಖಲೆಗಳು ಹಾಗೂ ಬೆರಳಚ್ಚುಗಳನ್ನು ಆರೋಪಿಗಳು ನಕಲಿ ಮಾಡಿ, ಈ ಕೃತ್ಯಕ್ಕಾಗಿ ಸಿಮ್‌ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು’ ಎಂದು ಕಮಲ್ ಪಂತ್‌ ಹೇಳಿದರು.

‘ಇಲ್ಲಿನ ಜಾಲಹಳ್ಳಿ ಹಾಗೂ ತಮಿಳುನಾಡಿನ ಹಳ್ಳಿಗಳಲ್ಲಿ ಸಿಮ್ ಖರೀದಿ ವೇಳೆ ಜನರಿಂದ ಎರಡು ಮೂರು ಬಾರಿ ಬೆರಳಚ್ಚು ಪಡೆದು, ಆ ಮಾಹಿತಿಗಳಿಂದ ಸಿಮ್‌ ಖರೀದಿಸಿ, ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು