ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಗೆ ಬೀದಿ ದೀಪಗಳೇ ಸವಾಲು: ಸಮೀಕ್ಷೆ ವರದಿ

ಬಿ–ಪ್ಯಾಕ್‌ ‘ಬಿ–ಸೇಫ್‌ ಕ್ಷೇತ್ರ‘ ಸಮೀಕ್ಷೆಯ ವರದಿ ಬಿಡುಗಡೆ
Published 28 ಅಕ್ಟೋಬರ್ 2023, 16:29 IST
Last Updated 28 ಅಕ್ಟೋಬರ್ 2023, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದಿ ದೀಪಗಳು ರಾಜಧಾನಿಯಲ್ಲಿ ಮಹಿಳಾ ಸುರಕ್ಷತೆಗೆ ಸವಾಲಾಗಿವೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 54ರಷ್ಟು ಬೀದಿ ದೀಪಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೆಬ್ಬಾಳ ಕ್ಷೇತ್ರದಲ್ಲಿ ಈ ಪ್ರಮಾಣ ಶೇ 38ರಷ್ಟಿದೆ’ ಎಂದು ಬಿ–ಪ್ಯಾಕ್‌ನ ‘ಬಿ– ಸೇಫ್‌ ಕ್ಷೇತ್ರ’ ಸಮೀಕ್ಷಾ ವರದಿ ಹೇಳಿದೆ.

ಬಿ–ಪ್ಯಾಕ್‌ ಕೆನಡಾದ ಮಾಹಿತಿ ತಂತ್ರಜ್ಞಾನ ಕಂಪನಿ ಸಿಜಿಐ ಪ್ರಾಯೋಜಕತ್ವದಲ್ಲಿ ಈ ಸಮೀಕ್ಷೆ ನಡೆಸುತ್ತಿದೆ. ಎರಡನೇ ಕಂತಿನಲ್ಲಿ ದಾಸರಹಳ್ಳಿಯ 12 ವಾರ್ಡ್‌ಗಳು ಮತ್ತು ಹೆಬ್ಬಾಳದ ಎಂಟು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿದೆ.

ಅಂಗನವಾಡಿ ಕೇಂದ್ರಗಳು, ಬಸ್‌ ನಿಲ್ದಾಣಗಳು, ಉದ್ಯಾನಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪೊಲೀಸ್‌ ಠಾಣೆಗಳು, ಸಾರ್ವಜನಿಕ ಶೌಚಾಲಯಗಳು, ಬೀದಿಗಳು ಸೇರಿದಂತೆ 298 ಸಾರ್ವಜನಿಕ ಸ್ಥಳಗಳಲ್ಲಿ ಈ ಸಮೀಕ್ಷೆ ನಡೆದಿದೆ. ಮಹಿಳೆಯರ ಸುರಕ್ಷತೆಗೆ ಕ್ರಿಯಾಯೋಜನೆ ರೂಪಿಸಲು ಸಮೀಕ್ಷಾ ವರದಿ ನೆರವಾಗಲಿದೆ ಎಂದು ಬಿ– ಪ್ಯಾಕ್‌ ತಿಳಿಸಿದೆ.

ವರದಿಯಲ್ಲಿ ಏನಿದೆ?

ದಾಸರಹಳ್ಳಿ ಕ್ಷೇತ್ರದಲ್ಲಿ ಶೇ 58ರಷ್ಟು ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಸ್‌ ನಿಲ್ದಾಣಗಳು ಪ್ರಯಾಣಿಕ ಸ್ನೇಹಿ ಆಗಬೇಕು. ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಹಗಲು ಆರೈಕೆ ಕೇಂದ್ರಗಳನ್ನಾಗಿ ವಿಸ್ತರಿಸಬೇಕು. ಉದ್ಯಾನಗಳ ಆವರಣ ಮತ್ತು ಸುತ್ತಮುತ್ತಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹೆಚ್ಚಿಸಬೇಕು. ಭದ್ರತಾ ಸಿಬ್ಬಂದಿ ನೇಮಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ದಿನವಿಡೀ ತೆರೆಯಬೇಕು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ 38ರಷ್ಟು ಬೀದಿ ದೀಪಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಸ್‌ ನಿಲ್ದಾಣಗಳು ಮತ್ತು ಸುತ್ತಮುತ್ತ ಮೂಲಸೌಕರ್ಯ ಸುಧಾರಣೆ ಆಗಬೇಕು. ಉದ್ಯಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಭದ್ರತೆ ಹೆಚ್ಷಿಸಬೇಕು. ಉದ್ಯೋಗಸ್ಥ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಅಂಗನವಾಡಿಗಳಲ್ಲಿ ಸುಧಾರಣೆ ತರಬೇಕು. ಸಾರ್ವಜನಿಕ ಶೌಚಾಲಯಗಳನ್ನು ನಿರಂತರವಾಗಿ ತೆರೆದಿಟ್ಟು, ಸ್ಯಾನಿಟರಿ ಪ್ಯಾಡ್‌ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿವೃತ್ತ ಐಪಿಎಸ್‌ ಅಧಿಕಾರಿ ಜೀಜಾ ಹರಿ ಸಿಂಗ್‌ ವರದಿ ಬಿಡುಗಡೆ ಮಾಡಿದರು. ಸಿಜಿಐನ ಹಿರಿಯ ಉಪಾಧ್ಯಕ್ಷ ರಾಹುಲ್‌ ಘೋಡ್ಕೆ, ಬಿ– ಸೇಫ್‌ನ ಕಾರ್ಯಕ್ರಮ ಮುಖ್ಯಸ್ಥೆ ಚಿತ್ರಾ ತಲ್ವಾರ್‌ ಉಪಸ್ಥಿತರಿದ್ದರು. ವರದಿ ಕುರಿತು ಚರ್ಚಾಗೋಷ್ಠಿಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT