ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗೆ ಕಠಿಣ ಕಾನೂನು: ಪ್ರಸ್ತಾವ

ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಸಚಿವ ಆನಂದ್‌ ಸಿಂಗ್‌
Last Updated 24 ಮಾರ್ಚ್ 2023, 20:44 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಸಂರಕ್ಷಣೆಗೆ ಇನ್ನಷ್ಟು ಕಠಿಣ ಕಾನೂನು ರೂಪಿಸಲು ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ವಿದ್ಯುತ್ ಚಾಲಿತ ವಾಹನಗಳಿಗೆ ಶುಕ್ರವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ರಾಸಾಯನಿಕಗಳನ್ನು ಹೊರಹಾಕುವ ಕಾರ್ಖಾನೆಗಳಿಗೆ ಮಂಡಳಿ ನೋಟಿಸ್‌ ನೀಡಿ, ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಕೆಲಸ ಆಗಬೇಕು. ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆ
ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದರು.

ಎರಡು ವರ್ಷಗಳಲ್ಲಿ ಮಂಡಳಿ ವತಿಯಿಂದ ಪರಿಸರ ಮಾಲಿನ್ಯ ತಡೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾಯುಮಾಲಿನ್ಯ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್‌ ಚಾಲಿತ ವಾಹನಗಳ ನೀತಿ ರೂಪಿಸಿವೆ. ಬಳಕೆಯಲ್ಲಿರುವ ಡೀಸೆಲ್‌ ಅಥವಾ ಪೆಟ್ರೋಲ್‌ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಮಂಡಳಿಯ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಲು ವಿದ್ಯುತ್ ಚಾಲಿತ ವಾಹನಗಳನ್ನು ನೀಡಲಾಗಿದೆ. ಇತರೆ ಇಲಾಖೆ ಹಾಗೂ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲೂ ಇಂತಹ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಉದ್ದಿಮೆದಾರರು ತಮ್ಮ ಸಮ್ಮತಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತಹ ಮಂಡಳಿಯ ನೂತನ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಲಾಯಿತು. ಉದ್ದಿಮೆದಾರರು ಹಾಗೂ ಸಾರ್ವಜನಿಕರು ತಮ್ಮ ನಗರದಲ್ಲಿನ ವಾಯುಗುಣಮಟ್ಟ ತಿಳಿಯಬಹುದು ಎಂದರು.

ಇದೇ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಅತ್ಯುತ್ತಮ ಪರಿಸರಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಗಾರಿಕೆಗಳಿಗೆ ಗ್ರೀನ್ ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ವಿನೂತನ ಕಾರ್ಯಕ್ರಮಕ್ಕೆ ಸಿಐಐ ಸಂಸ್ಥೆ ಜತೆ ಮಂಡಳಿ ಒಡಂಬಡಿಕೆ ಮಾಡಿಕೊಂಡಿತು.

ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್‌ ಮೋಹನ್‌ ರಾಜ್‌, ಮಂಡಳಿ ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಎಚ್.ಸಿ.ಗಿರೀಶ್‌, ಸಿಐಐ ಅಧಿಕಾರಿಗಳಾದ ವಿಜಯ್ ಕೃಷ್ಣನ್‌ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT