ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐ ತಂತ್ರಜ್ಞಾನದೊಂದಿಗೆ ಸ್ಪರ್ಧಿಸುವುದು ಕಷ್ಟ: ಪ್ರಕಾಶ್ ಬೆಳವಾಡಿ

‘ಸ್ಟೂಡೆಂಟ್‌ ಲಿಟ್‌ ಫೆಸ್ಟ್‌’ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ ಅಭಿಮತ
Published 11 ಜನವರಿ 2024, 21:15 IST
Last Updated 11 ಜನವರಿ 2024, 21:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಸಾಹಿತ್ಯ, ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಭವಿಷ್ಯದಲ್ಲಿ ಇದರೊಂದಿಗೆ ಸ್ಪರ್ಧಿಸುವುದು ಬಹಳ ಕಷ್ಟವಿದೆ‘ ಎಂದು ರಂಗಕರ್ಮಿ ಪ್ರಕಾಶ್ ಬೆಳವಾಡಿ ಕಳವಳ ವ್ಯಕ್ತಪಡಿಸಿದರು.

ಫ್ರೀ ಸ್ಪೇಸ್‌ ಫೋರಂ ಹಾಗೂ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಮಾಧ್ಯಮ ಸಹಯೋಗದಲ್ಲಿ ಆಯೋಜಿರುವ ‘ಸ್ಟೂಡೆಂಟ್‌ ಲಿಟ್‌ ಫೆಸ್ಟ್–2024’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಐ ತಂತ್ರಜ್ಞಾನ ಬಳಸಿಕೊಂಡು ಮಾನವರಿಗಿಂತಲೂ ಉತ್ತಮವಾಗಿ ಕಥೆ, ಕಾದಂಬರಿ, ಚಿತ್ರಕಥೆಯನ್ನು ರಚಿಸಬಹುದು. ಇದು ಭವಿಷ್ಯದ ಎಲ್ಲ ತಂತ್ರಜ್ಞಾನಗಳಿಗೆ ಅನ್ವಯವಾಗಲಿದೆ. ನಾವು ಅದರೊಂದಿಗೆ ಸ್ಪರ್ಧೆ ಮಾಡುವುದು ಬಹಳ ಕಷ್ಟವಿದೆ. ಮುಂದಿನ ದಿನಗಳಲ್ಲಿ ಯಾವ ಕೆಲಸಕ್ಕೂ ಭದ್ರತೆ ಇಲ್ಲದಂತಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ತಂತ್ರಜ್ಞಾನ ಮಾನವರಿಗೆ ಸವಾಲಾಗಲಿದೆ’ ಎಂದು ತಿಳಿಸಿದರು.

ಸಂಗೀತ ಸಂಯೋಜಕ ರಿಕ್ಕಿ ಕೇಜ್, ‘ವಿಶ್ವವು ಇಂದು ಹವಾಮಾನ ವೈಪರೀತ್ಯ, ಅರಣ್ಯನಾಶ, ವಾಯು ಮಾಲಿನ್ಯ, ಅನಿಯಮಿತ ಪ್ಲಾಸ್ಟಿಕ್‌ ಬಳಕೆಯಂತಹ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಇದರ ಜೊತೆಗೆ ಬಡತನ, ಹಸಿವು, ಅಪೌಷ್ಟಿಕತೆ, ಲಿಂಗ ತಾರತಮ್ಯ ಎಂಬ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇವುಗಳನ್ನು ಪರಿಹರಿಸಲು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ಯುವಕ ಸಂಘದ ಅಧ್ಯಕ್ಷ ಟಿ.ವಿ. ರಾಜು, ಸ್ಯಾನ್‌ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಂಸಿ ಜುಲೂರಿ, ಚಾಣಕ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಜೇಶ್ ಅರುಚಾಮಿ ಪಾಲ್ಗೊಂಡಿದ್ದರು.

‘ವಿದ್ಯಾರ್ಥಿ ಸಾಹಿತ್ಯ ಸಂಭ್ರಮ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು. –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
‘ವಿದ್ಯಾರ್ಥಿ ಸಾಹಿತ್ಯ ಸಂಭ್ರಮ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು. –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಚಿನ್ಮಯಿ
ಚಿನ್ಮಯಿ
ಹರೀಶ್
ಹರೀಶ್

ಸ್ಟೂಡೆಂಟ್‌ ಲಿಟ್‌ ಫೆಸ್ಟ್‌ನಲ್ಲಿ ಇಂದು

‘ಆನಂದ ಮತ್ತು ಸಾಹಿತ್ಯ’ ಎಂಬ ವಿಷಯದ ಕುರಿತು ಕವಿ ಶತಾವಧಾನಿ ಆರ್. ಗಣೇಶ ಮಾತನಾಡಲಿದ್ದಾರೆ. ‘ಸಮಂಜಸ ಇನ್ ಸ್ಕ್ರಿಪ್ಚರ್ಸ್‌’ ಎಂಬ ವಿಷಯದ ಕುರಿತು ಚಿತ್ರ ನಿರ್ದೇಶಕ ದುಷ್ಯಂತ್ ಶ್ರೀಧರ್ ಚರ್ಚಿಸಲಿದ್ದಾರೆ. ಲೇಖಕ ಚಂದ್ರಚೂರ್ ಗೋಷ್ ಪತ್ರಕರ್ತ ಅನೂಜ್ ಧರ್ ಚಾಣಕ್ಯ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಡೀನ್ ಚೇತನ್ ಸಿಂಘೈ ಲೇಖಕರಾದ ಸದ್ಯೋಜಾತ ಭಟ್ ಸಾಯಿಸ್ವರೂಪ ಕವಿ ಎಂ.ಆರ್. ದತ್ತಾತ್ರಿ ಅವರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಕಿರುತೆರೆ ನಿರ್ದೇಶಕ ಎಸ್.ಎನ್. ಸೇತುರಾಮ್ ಸಂಗೀತಗಾರ ಪ್ರವೀಣ್ ಗೋಡ್ಖಿಂಡಿ ಸಿನಿಮಾ ನಿರ್ದೇಶಕ ಯೋಗರಾಜ ಭಟ್ ಯುವಕದ ಸಂಘದ ಕಾರ್ಯದರ್ಶಿ ನಾಗರಾಜ್ ರೆಡ್ಡಿ ಅಶೋಕ ಎಚ್.ಎಸ್. ಭಾಗವಹಿಸಲಿದ್ದಾರೆ.

ವಿದ್ಯಾರ್ಥಿಗಳ ಅಭಿಪ್ರಾಯಗಳು

ದೇಶದ ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ಕಥೆ–ಕವನ ಹಾಗೂ ಕಾದಂಬರಿಗಳು ಯಾವ ರೀತಿ ಬರೆಯಬೇಕು ಎಂಬ ಕೌಶಲ ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗಿದೆ.

-ಚಿನ್ಮಯಿ ಚಾಣಕ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ.

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಈ ಸಮ್ಮೇಳನ ಸಹಕಾರಿಯಾಗಿದೆ. ಯುವ ಸಮುದಾಯವನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ.

-ಹರೀಶ್ ಎಂಬಿಎ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT