ಸೋಮವಾರ, ಜೂಲೈ 13, 2020
23 °C
ಅಕ್ರಮವೆಸಗಿದ ಆರೋಪ

ಆಸ್ತಿ ನೋಂದಣಿ | 3 ಹಿರಿಯ ಉಪ ನೋಂದಣಾಧಿಕಾರಿಗಳ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ತಿ ನೋಂದಣಿಯಲ್ಲಿ ಅಕ್ರಮವೆಸಗಿದ ಆರೋಪದ ಮೇಲೆ ಹಿರಿಯ ಉಪ ನೋಂದಣಾಧಿಕಾರಿಗಳಾದ ಲಲಿತಾ ಅಮೃತೇಶ್‌, ರಾಮ‌ಪ್ರಸಾದ್‌ ಮತ್ತು ಮಧುಕುಮಾರ್‌ ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಅಮಾನತು ಮಾಡಲಾಗಿದೆ.

ಮಾದನಾಯಕನಹಳ್ಳಿ, ಜಾಲ ಮತ್ತು ದಾಸನಪುರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಮವಾಗಿ ಕೆಲಸ ಮಾಡುತ್ತಿರುವ ಮೂವರ ವಿರುದ್ಧ ರಾಜಾಜಿನಗರ ಮತ್ತು ಗಾಂಧಿನಗರದ ಜಿಲ್ಲಾ  ನೋಂದಣಾಧಿಕಾರಿಗಳು ಏಪ್ರಿಲ್‌ 24ರಿಂದ ಮೇ 18ರವರೆಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಅಮಾನತು ಮಾಡಲಾಗಿದೆ ಎಂದು ಮುದ್ರಾಂಕಗಳ ಆಯುಕ್ತ ಮತ್ತು ನೋಂದಣಿ ಮಹಾಪರಿವೀಕ್ಷಕ ಕೆ.ಪಿ. ಮೋಹನರಾಜ್‌ ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವತ್ತುಗಳ ನೋಂದಣಿ ಮಾಡುವಾಗ ಗಣಕೀಕೃತ ನಮೂನೆ 9, 11 ಎ ಹಾಗೂ 11 ಬಿ ಪಡೆಯದೆ ನೋಂದಣಿ ಮಾಡಿದ್ದಾರೆ ಎಂದು ವಿಚಾರಣಾ ವರದಿಯಲ್ಲಿ ಆರೋಪಿಸಲಾಗಿದೆ.

ಮಾದನಾಯಕನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ಅವಧಿಯಲ್ಲಿ 365 ದಾಖಲೆಗಳು ನೋಂದಣಿಯಾಗಿದ್ದು, 260 ಕ್ರಯ ಪತ್ರಗಳಾಗಿವೆ. 256 ಕ್ರಯ ಪತ್ರಗಳನ್ನು ಆರ್‌ಡಿಪಿರ್‌ನ  ‘ಇ’ ಖಾತೆ ಇಲ್ಲದೆ ನೋಂದಣಿ ಮಾಡಲಾಗಿದೆ. ಅಲ್ಲದೆ, 252 ನಿವೇಶನಗಳನ್ನು ಸರ್ಟಿಫಿಕೇಟ್‌ ಆಫ್‌ ಸೇಲ್‌ ಎಂದು ಆಯ್ಕೆ ಮಾಡಿಕೊಂಡು ನೋಂದಣಿ ಮಾಡಿದ್ದಾರೆ.

ದಾಸನಪುರ ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ 448 ಆಸ್ತಿ ನೋಂದಣಿಯಾಗಿದ್ದು, 321 ಕ್ರಯ ಪತ್ರಗಳು. ಇದರಲ್ಲಿ 279 ಕ್ರಯಪತ್ರಗಳಿಗೆ ಆರ್‌ಡಿಪಿಆರ್‌ ‘ಇ’ ಖಾತೆ ಪಡೆಯದೆ ನೋಂದಣಿ ಮಾಡಲಾಗಿದೆ. 14 ಸ್ವತ್ತುಗಳು ನಿವೇಶನವಾಗಿದ್ದರೂ ಕೃಷಿ ಜಮೀನು ಎಂದು ನೋಂದಣಿ ಮಾಡಲಾಗಿದೆ. ಉಳಿದವುಗಳಿಗೆ ಸರ್ಟಿಫಿಕೇಟ್‌ ಆಫ್‌ ಸೇಲ್‌ ಎಂದು ಕಾವೇರಿ ತಂತ್ರಾಂಶದಲ್ಲಿ ಆಯ್ಕೆ ಮಾಡಿಕೊಂಡು ನೋಂದಾಯಿಸಲಾಗಿದೆ. 

ಜಾಲ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಒಟ್ಟು 110 ಆಸ್ತಿಗಳು ನೋಂದಣಿಯಾಗಿದ್ದು, ಇದರಲ್ಲಿ 57 ಕ್ರಯ ಪತ್ರಗಳಾಗಿವೆ. ಈ ಪೈಕಿ 15 ಕ್ರಯ ಪತ್ರಗಳನ್ನು ಆರ್‌ಡಿಪಿಆರ್‌ ಇ ಖಾತೆ ಇಲ್ಲದೆ ನೋಂದಣಿ ಮಾಡಲಾಗಿದೆ. ಕಾವೇರಿ ತಂತ್ರಾಂಶದ ಮೂಲಕ ಮಾಹಿತಿ ಪಡೆಯದೆ ಗ್ರಾಮ ಪಂಚಾಯತಿ ಖಾತೆಯಿಂದ ದಾಖಲೆ ತೆಗೆದು ನೋಂದಣಿ ಮಾಡಲಾಗಿದೆ. ಆ ಮೂಲಕ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು