ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು ಯೋಜನೆ ಚುರುಕುಗೊಳಿಸಿ

ನೈರುತ್ಯ ವಿಭಾಗದ ರೈಲ್ವೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಂಸದರ ಒತ್ತಾಯ
Last Updated 14 ಅಕ್ಟೋಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಯನ್ನು ಚುರುಕುಗೊಳಿಸುವಂತೆ ಸಂಸದರು ನೈರುತ್ಯ ರೈಲ್ವೆ ವಲಯವನ್ನು ಒತ್ತಾಯಿಸಿದರು.

ಸಂಸದರ ಜೊತೆ ನೈರುತ್ಯ ರೈಲ್ವೆ ವಿಭಾಗದ ರೈಲ್ವೆ ಅಧಿಕಾರಿಗಳ ಜೊತೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಬಹುತೇಕ ಸಂಸದರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಕೋರಿದರು. ಈ ಯೋಜನೆಯ ಸವಿಸ್ತೃತ ಯೊಜನಾ ವರದಿ (ಡಿಪಿಆರ್‌) ಮಂಜೂರಾತಿ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಯಶವಂತಪುರ ಮತ್ತು ವೈಟ್‌ಫೀಲ್ಡ್‌ ನಡುವೆ ರೈಲುಗಳ ಸಂಖ್ಯೆ ಹೆಚ್ಚಿಸುವಂತೆ ಸಂಸದ ಪಿ.ಸಿ.ಮೋಹನ ಒತ್ತಾಯಿಸಿದರು.

‘ಈ ಮಾರ್ಗದಲ್ಲಿ ಬೆಳಿಗ್ಗೆ 6ರಿಮದ 12 ಗಂಟೆ ನಡುವೆ ಒಟ್ಟು 23 ರೈಲುಗಳು ಸಂಚರಿಸುತ್ತಿವೆ. ಈ ಅವಧಿಯಲ್ಲಿ ವೈಟ್‌ಫೀಲ್ಡ್‌ನಿಂದ ಯಶವಂತಪುರ/ ಕೆಎಸ್‌ಆರ್‌ ನಿಲ್ದಾಣದ ನಡುವೆ 10 ರೈಲುಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಸದ್ಯಕ್ಕೆ ಇನ್ನಷ್ಟು ರೈಲು ಸೇವೆ ಆರಂಭಿಸುವುದು ಕಷ್ಟ. ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲುಗಳ ಸಂಖ್ಯೆ ಹೆಚ್ಚಿಸಬಹುದು’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಬೆಂಗಳೂರು– ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ನಡುವೆ ಮೆಮು ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ‘2019ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ ನಡುವೆ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುವ ಪ್ರಮಾಣ ಶೇ 59ರಿಂದ ಶೇ 85ಕ್ಕೆ ಹೆಚ್ಚಳವಾಗಿದೆ. 20 ಶಾಶ್ವತ ವೇಗ ನಿಬಂಧಕಗಳನ್ನು ತೆರವುಗೊಳಿಸಲಾಗಿದೆ’ ಎಂದರು.

‘ವೈಟ್‌ಫೀಲ್ಡ್‌ ರೈಲು ನಿಲ್ದಾಣದಕ್ಕೆ ಕಾಡುಗೋಡಿ ಬಸ್‌ನಿಲ್ದಾಣದ ಕಡೆಯಿಂದ ಎರಡನೇ ಪ್ರವೇಶ ಕಲ್ಪಿಸುವ ಸಲುವಾಗಿ ಸ್ಕೈವಾಕ್‌ ಸಮೇತ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ಹೊಸ ಬೋಗಿಗಳು ಬಂದ ಬಳಿಕ ಮಾರಿಕುಪ್ಪಂ– ಬೆಂಗಳೂರು ನಡುವೆ ಮೆಮು ಪ್ಯಾಸೆಂಜರ್‌ ರೈಲಿಗೆ ಮೂರು ಬೋಗಿಗಳ ಸೇರ್ಪಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ವೈಟ್‌ಫೀಲ್ಡ್‌ ಕೆಎಸ್‌ಆರ್‌ ನಡುವೆ ಸಂಜೆ 4ರಿಂದ ರಾತ್ರಿ 8ರ ನಡುವೆ ನಾಲ್ಕು ಮೆಮು ಸೇರಿದಂತೆ ಈ ನಿಲ್ದಾಣಗಳ ನಡುವೆ 22 ರೈಲುಗಳು ಓಡಾಡುತ್ತಿವೆ. ಈ ಮಾರ್ಗದ ಜೋಡಿಹಳಿ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆ 5ರಿಂದ ರಾತ್ರಿ7ರ ನಡುವೆ ಎರಡು ಮೆಮು ರೈಲು ಆರಂಭಿಸಲು ಕ್ರಮ ಕಯಗೊಳ್ಳುವುದಾಗಿ ಭರವಸೆ ನೀಡಿದರು.

ಸಂಸದೆ ಸುಮಲತಾ ಅವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ಹೆಜ್ಜಾಲ– ಚಾಮರಾಜನಗರ ನಡುವೆ 142 ಕಿ.ಮೀ ಉದ್ದದ ಹೊಸ ಮಾರ್ಗ ನಿರ್ಮಿಸುವ 1,383 ಕೋಟಿ ವೆಚ್ಚದ ಕಾಮಗಾರಿಗೆ 2013ರಲ್ಲಿ ಮಂಜೂರಾತಿ ಸಿಕ್ಕಿದೆ. ಈ ಯೋಜನೆಗೆ 1623.9 ಎಕರೆ ಜಮೀನು ಅಗತ್ಯವಿದೆ. ಆದರೆ ಭೂಸ್ವಾಧೀನ ಆರಂಭವಾಗಿಲ್ಲ’ ಎಂದು ಮಾಹಿತಿ ನೀಡಿದರು.

ಸಂಸದ ಜಿ.ಎಸ್‌.ಬಸವರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ಬೆಂಗಳೂರು– ತುಮಕೂರು ನಡುವೆ ಮಾರ್ಗದ ಅಭಿವೃದ್ಧಿಗೆ ₹ 169 ಕೋಟಿ ಮಂಜೂರಾಗಿದ್ದು, ಇದರಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ತುಮಕೂರು ರಾಯದುರ್ಗ ಮಾರ್ಗಕ್ಕೆ ಒಟ್ಟು 1,357 ಎಕರೆ ಭೂಮಿ ಬೇಕಾಗಿದ್ದು, ಕೇವಲ 448 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ’ ಎಂದರು.

‘ತುಮಕೂರು ದಾವಣಗೆರೆ ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ಶೇ 6ರಷ್ಟು ಭೂಸ್ವಾಧೀನ ಮಾತ್ರ ಪೂರ್ಣಗೊಂಡಿದೆ. ಶೇ 90ರಷ್ಟು ಭೂಸ್ವಾಧೀನ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಚಿಕ್ಕಬಾಣಾವರ– ತುಮಕೂರು ವಿದ್ಯುದೀಕರಣ ಟೆಂಡರ್‌ ತೆರೆಯಲಾಗಿದೆ’ ಎಂದರು.

ಸಂಸದ ತೇಜಸ್ವಿ ಸೂರ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ನಗರದ ಏಳು ರೈಲ್ವೆ ಕೆಳ ಸೇತುವೆಗಳಲ್ಲಿ ರೈಲು ಚಲಿಸುವಾಗ ಶೌಚಾಲಯದ ನೀರು ರಸ್ತೆಯಲ್ಲಿ ಚಲಿಸುವವರ ಮೇಲೆ ಬೀಳುವುದನ್ನು ತಡೆಯಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಇನ್ನೂ ಎಂಟು ಕೆಳಸೇತುವೆಗಳಲ್ಲಿ ಶೀಘ್ರವೇ ಕ್ರಮಕೈಗೊಳ್ಳಲಿದ್ದೇವೆ’ ಎಂದರು.

ಸಂಸದ ಮುನಿಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ವೈಟ್‌ಫೀಲ್ಡ್‌–ಕೋಲಾರ ಹೊಸ ಮಾರ್ಗಕ್ಕೆ 2012ರಲ್ಲಿ 349 ಕೋಟಿ ಮಂಜೂರಾಗಿತ್ತು. ಭೂಸ್ವಾಧೀನ ಇನ್ನೂ ಆರಂಭವಾಗಿಲ್ಲ. ಭೂಸ್ವಾಧೀನಕ್ಕೆ ತಗಲುವ ₹ 831.6 ಕೋಟಿ ವೆಚ್ಚವನ್ನುರಾಜ್ಯ ಸರ್ಕಾರ ಭರಿಸಬೇಕು’ ಎಂದರು.

ಕೋಲಾರ ಜಂಕ್ಷನ್‌ನಿಂದ ವೈಟ್‌ಫೀಲ್ಡ್‌ಗೆ ರೈಲು ಸಂಪರ್ಕದ ಬಗ್ಗೆ ಪರಿಗಣಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಕೋಲಾರದಲ್ಲಿ ಬೋಗಿ ತಯಾರಿಕಾ ಕಾರ್ಖಾನೆಗೆ ₹ 1,461 ಕೋಟಿ ಮಂಜೂರಾಗಿದೆ. ರೈಟ್ಸ್‌ ಸಂಸ್ಥೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುತ್ತಿದೆ ಎಂದರು.

ಉಪನಗರ ರೈಲನ್ನು ಬಂಗಾರಪೇಟೆ, ಗೌರಿಬಿದನೂರು, ಚಿಕ್ಕಬಳ್ಳಾಪುರ ಕುಣಿಗಲ್‌ ತುಮಕೂರಿಗೆ ವಿಸ್ತರಿಸುವಂತೆ ಸಂಸದ ಬಿ.ಎನ್‌.ಬಚ್ಚೇಗೌಡ ಒತ್ತಾಯಿಸಿದರು.

ಉಪನಗರ ರೈಲು ಯೋಜನೆ ಅನುಷ್ಠಾನದ ಹೊಣೆಯನ್ನು ಕೆ–ರೈಡ್‌ಗೆ ವಹಿಸಲಾಗಿದೆ. ಈಗಾಗಲೇ ಮಂಜೂರಾದ ಮಾರ್ಗಗಳಲ್ಲಿ ಮೊದಲು ಸೇವೆ ಆರಂಭಿಸಲಾಗುವುದು. ನಂತರ ಸೇವೆಯನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವೈಟ್‌ಪೀಲ್ಡ್‌ ಸಮೀಪದ ಕೊರ್ಲುರು ರೈಲ್ವೇ ಮೇಲ್ಸೇತುವೆ ಕಾಮಗಾರಿ ಚುರುಕುಗೊಳಿಸುವ ಸಂಬಂಧ ಎನ್‌ಎಚ್‌ಎಐ ಜೊತೆ ಚರ್ಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಯಲಹಂಕ– ಚಿಕ್ಕಬಳ್ಳಾಪುರ–ಕೋಲಾರ ಬಂಗರಪೇಟೆ ಬಳಿ 14 ರೈಲ್ವೆ ಕೆಲಸೇತುವೆ ನೀರು ನಿಲ್ಲುವ ಸಮಸ್ಯೆ ಇದೆ. 6ರಲ್ಲಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ 8 ಕೆಳಸೇತುವೆ ಕಾಮಗಾರಿ ಶೀಘ್ರವೇ ಆರಂಭಿಸಲಾಗುವುದು. ಎಲ್ಲ ಕೆಳಸೇತುವೆ ತಾತ್ಕಾಲಿಕವಾಗಿ ನೀರು ಪಂಪ್‌ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

‘ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿಡಿ’
ಬೆಂಗಳೂರು– ಮೈಸೂರು ನಡುವೆ ಸಂಚರಿಸುವ ಕೆಲವು ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಅವುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿಡಬೇಕು ಎಂದು ಸಂಸದೆ ಸುಮಲತಾ ಒತ್ತಾಯಿಸಿದರು.

ಮಾರಿಪಕುಪ್ಪಂನಿಂದ ಬೆಂಗಳೂರಿಗೆ ಬೆಳಿಗ್ಗೆ 6.30ರ ರೈಲಿನ ಬೋಗಿ ಹೆಚ್ಚಿಸಿ ಎರಡು ಬೋಗಿ ಮಹಿಳೆಯರಿಗೆ ಮೀಸಲಿಡಬೇಕು. ಮಾರಿಕುಪ್ಪಂನಿಂದ 8.30ಕ್ಕೆ ಹೊರಡುವ ರೈಲಿನಲ್ಲೂ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಕಾಯ್ದಿರಿಸಬೇಕು ಎಂದು ಸಂಸದ ಮುನಿಸ್ವಾಮಿ ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

‘ತಿಂಗಳೊಳಗೆ ವೆಬ್‌ಸೈಟ್ ಕನ್ನಡಮಯ’
ರೈಲ್ವೆ ಇಲಾಖೆಯ ವೆಬ್‌ಸೈಟ್‌ ಇನ್ನು ಒಂದು ತಿಂಗಳ ಒಳಗೆ ಕನ್ನಡಮಯವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

‘ರೈಲ್ವೆ ಇಲಾಖೆಯಲ್ಲಿ 'ಡಿ' ದರ್ಜೆಯ ಹುದ್ದೆಗಳ ನೇಮಕಾತಿಯ ಸಂದರ್ಭದಲ್ಲಿ ಕನ್ನಡಿಗರಿಗೆ ಆಗುತ್ತಿರುವ ತೊಂದರೆಗಳ ಕುರಿತು ನೈರುತ್ಯ ವಲಯದ ಪ್ರಧಾನ ವ್ಯವಸ್ಥಾಪಕರೊಂದಿಗೆ ಚರ್ಚಿಸಿದ್ದೇನೆ. ನೇಮಕಾತಿಯ ಮಾಹಿತಿ ಮತ್ತು ಜಾಹೀರಾತುಗಳು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಇರುವುದರಿಂದ ಸ್ಥಳೀಯ ಕನ್ನಡಿಗರಿಗೆ ಆಗುತ್ತಿರುವ ತೊಂದರೆ ಬಗ್ಗೆ ಅವರ ಗಮನ ಸೆಳೆದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT