ಶುಕ್ರವಾರ, ಫೆಬ್ರವರಿ 28, 2020
19 °C

ಅಧೀನ– ಕೆಳ ನ್ಯಾಯಾಲಯ ಎಂದು ಬಳಸಬೇಡಿ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೇಲ್ಮನವಿ ನ್ಯಾಯಾಲಯವು (Appellate Court) ವಿಚಾರಣಾ ನ್ಯಾಯಾಲಯವನ್ನು (Trial Court) ‘ಕೆಳ ಅಥವಾ ಅಧೀನ ನ್ಯಾಯಾಲಯ’ ಎಂದು ತನ್ನ ಆದೇಶ ಅಥವಾ ತೀಪಿ೯ನಲ್ಲಿ ಉಲ್ಲೇಖಿಸುವ೦ತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಅವರ ನಿರ್ದೇಶನದ ಮೇರೆಗೆ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಗಳಿಗೆ ಆದೇಶಿಸಿದ್ದಾರೆ.

ರಾಜ್ಯದಲ್ಲಿ ಹೈಕೋರ್ಟ್ ನಿಯ೦ತ್ರಣಕ್ಕೆ ಒಳಪಟ್ಟ ನ್ಯಾಯಾ೦ಗ ವ್ಯವಸ್ಥೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ನ್ಯಾಯಾಲಯಗಳಿವೆ. ಸಿವಿಲ್ ಜಡ್ಜ್‌ ಕಿರಿಯ ವಿಭಾಗ, ಹಿರಿಯ ವಿಭಾಗ ಮತ್ತು ಜಿಲ್ಲಾ ನ್ಯಾಯಾಧೀಶರು. ಇವುಗಳ ಪೈಕಿ ಸಿವಿಲ್ ಜಡ್ಜ್ ಹಿರಿಯ ವಿಭಾಗ ಮತ್ತು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಗಳು ಮೇಲ್ಮನವಿ ನ್ಯಾಯಾಲಯಗಳಾಗಿವೆ (Appellate Courts).

ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಲಯವನ್ನು ಸಿವಿಲ್ ಜಡ್ಜ್ ನ್ಯಾಯಾಲಯವೆ೦ದೂ ಸಿವಿಲ್ ಜಡ್ಜ್ ಹಿರಿಯ ವಿಭಾಗದ ನ್ಯಾಯಾಲಯವನ್ನು ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯವೆಂದು ಕರೆಯುವಂತೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

‘ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಕೆಳ ಅಥವಾ ಅಧೀನ ನ್ಯಾಯಾಲಯ ಪದ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಯಾವುದೇ ನ್ಯಾಯಾಲಯವೂ ಕೆಳ ನ್ಯಾಯಾಲಯ ಅಥವಾ ಅಧೀನ ನ್ಯಾಯಾಲಯವಾಗಲು ಸಾಧ್ಯವಿಲ್ಲ. ಆದ್ದರಿಂದ ಈ ಶಬ್ದಗಳನ್ನು ಜಿಲ್ಲಾ ಮಟ್ಟದ ಆಡಳಿತಾತ್ಮಕ ವ್ಯವಹಾರಗಳಲ್ಲಿ ಅಥವಾ ನ್ಯಾಯಾಲಯಗಳ ತೀರ್ಪಿನಲ್ಲಿ ಬಳಸುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

ನ್ಯಾಯಮೂರ್ತಿ ಕೆ.ಜಗನ್ನಾಥ ಶೆಟ್ಟಿ ನೇತೃತ್ವದ ನ್ಯಾಯಾಂಗ ಅಧಿಕಾರಿಗಳ ವೇತನ ಆಯೋಗದ ವರದಿಯಲ್ಲಿಯೂ, ನ್ಯಾಯಾಂಗ ಸೇವೆಯಲ್ಲಿ ಅಧೀನ ಪದ ಬಳಕೆ ಸೂಕ್ತವಲ್ಲ ಎಂದು ಹೇಳಲಾಗಿದೆ. ಹಾಗಾಗಿ ಇನ್ನು ಮುಂದೆ ಅಧೀನ ಅಥವಾ ಕೆಳ ನ್ಯಾಯಾಲಯಗಳ ಬದಲಿಗೆ ‘ವಿಚಾರಣಾ’ ನ್ಯಾಯಾಲಯ’ ಪದ ಬಳಕೆ ಮಾಡಬೇಕೆಂದು ನಿರ್ದೇಶಿಸಿದ್ದಾರೆ.

ರಾಜ್ಯದಲ್ಲಿ 1997ರವರೆಗೆ ಮುನ್ಸಿಫ್, ಸಿವಿಲ್ ಜಡ್ಜ್ ಮತ್ತು ಡಿಸ್ಟ್ರಿಕ್ಟ್ ಜಡ್ಜ್ ಎಂದು ಮೂರು ಹಂತಗಳಲ್ಲಿ ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮುನ್ಸಿಫ್ ನ್ಯಾಯಾಧೀಶರನ್ನು ‘ಸಿವಿಲ್ ಜಡ್ಜ್’ ಎಂದು ಮತ್ತು ಸಿವಿಲ್ ಜಡ್ಜ್‌ಗಳನ್ನು ‘ಹಿರಿಯ ಸಿವಿಲ್ ಜಡ್ಜ್‌’ಗಳೆಂದೂ ಕರೆಯಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು