ಬುಧವಾರ, ಏಪ್ರಿಲ್ 8, 2020
19 °C

124 ವರ್ಷದ ಡಾ. ಪಂಡಿತ್ ಸುಧಾಕರ ಚತುರ್ವೇದಿ ವಿಧಿವಶ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರೂ, ವೇದ ವಿದ್ವಾಂಸರು, ಶತಾಯುಷಿಗಳೂ ಆದ ಸುಧಾಕರ ಚತುರ್ವೇದಿ (124) ಗುರುವಾರ ಮುಂಜಾನೆ 3 ಗಂಟೆಗೆ ನಿಧನರಾದರು.

ಏಪ್ರಿಲ್ 20, 1897ರಲ್ಲಿ ಜನಿಸಿದ್ದ ಸುಧಾಕರ ಅವರು ನಾಲ್ಕು ವೇದಗಳಿಗೂ ಭಾಷ್ಯ ಬರೆದು ‘ಚತುರ್ವೇದಿ’ ಎನಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಲಿದಾನ ಮಾಡಿದ ಸಾವಿರಾರು ಮಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಮೊಮ್ಮೊಕ್ಕಳ ಜೊತೆ ಜಯನಗರದಲ್ಲಿ ಸುಧಾಕರ ಅವರು ವಾಸವಿದ್ದರು. ರಾಜ್ಯ ವಿವಿಧೆಡೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆರ್ಯಮಿತ್ರ ಇವರ ದತ್ತು ಪುತ್ರ.

ಜಯನಗರದ ಕೃಷ್ಣಸೇವಾಶ್ರಮದ ಎದುರಿಗೆ ಇವರ ಮನೆಯಿದ್ದು, ಅಲ್ಲಿ ಮಧ್ಯಾಹ್ನ 3ರವರೆಗೆ ಸಾರ್ವಜನಿಕ ವೀಕ್ಷಣಗೆ ಅವಕಾಶ ಕಲ್ಪಿಸಲಾಗಿದೆ. 4 ಗಂಟೆಗೆ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಹುಟ್ಟಿ ಬೆಳೆದದ್ದು

ಸುಧಾಕರ ಅವರು ತಂದೆ ತುಮಕೂರು ಮೂಲದವರಾಗಿದ್ದರೂ, ಇವರು ಹುಟ್ಟಿಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. 1915ರಲ್ಲಿ ಹರಿದ್ವಾರ ಗುರುಕುಲಕ್ಕೆ ಸೇರಿ, ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಇಲ್ಲಿ ಅವರಿಗೆ ಗಾಂಧಿಜಿಯ ಪರಿಚಯವಾಗುತ್ತದೆ. ಸ್ವಾಂತತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಇವರು 12 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು.

ಇದನ್ನೂ ಓದಿ: ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್'

ಕನ್ನಡ, ಇಂಗ್ಲಿಷ್‌, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಸುಮಾರು 50 ಕೃತಿಗಳನ್ನು ಇವರು ರಚಿಸಿದ್ದಾರೆ. ಇವರ 4 ವೇದಗಳ ಬೃಹತ್‌ ಸಂಪುಟ  20 ಸಂಪುಟಗಳಲ್ಲಿ ಪ್ರಕಟಗೊಂಡಿದೆ.

ವೇದ ತರಂಗ ಮತ್ತು ವೇದ ಪ್ರಕಾಶ ಎಂಬ ಮಾಸ ಪತ್ರಿಕೆಗಳನ್ನು ಮುನ್ನಡೆಸಿದ್ದಾರೆ. ಕವಿ, ಉತ್ತಮ ಭಾಷಣಕಾರ ಎನಿಸಿಕೊಂಡಿದ್ದ ಸುಧಾಕರ ಅವರು ಉತ್ತಮ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದಾರೆ. ವೈಚಾರಿಕ ನೆಲೆಯಲ್ಲಿ ವೇದಗಳ ಅಧ್ಯಯನವನ್ನು ಇವರು ನಡೆಸಿದ್ದರು. ತಮ್ಮಲ್ಲಿನ ಪ್ರಗತಿಪರ ಚಿಂತನೆಗೆ ವೇದಗಳೇ ಪ್ರೇರಣೆ ಎಂದು ಅವರು ಹೇಳುತ್ತಿದ್ದರು.


ಸುಧಾಕರ ಚತುರ್ವೇದಿ (ಚಿತ್ರ: ಪ್ರಜಾವಾಣಿ ಸಂಗ್ರಹ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು