ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನಹಳ್ಳಿ: ಮೇಲ್ಸೇತುವೆಯಲ್ಲಿ ಮತ್ತೆ ಗುಂಡಿ

ತಜ್ಞರಿಂದ ಪರಿಶೀಲನೆ, ತಜ್ಞರ ವರದಿ ನಂತರ ಕ್ರಮ-– ಬಿಬಿಎಂಪಿ
Last Updated 20 ಸೆಪ್ಟೆಂಬರ್ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ರಸ್ತೆಯ ಮೇಲ್ಭಾಗದಲ್ಲಿ ಸುಮನಹಳ್ಳಿ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಹೊರವರ್ತುಲ ರಸ್ತೆ ಮೇಲ್ಸೇತುವೆಯ ಒಂದು ಭಾಗದಲ್ಲಿ ಸುಮಾರು ಐದು ಅಡಿಯಷ್ಟು ಸುತ್ತಳತೆಯಷ್ಟು ರಸ್ತೆ ಕುಸಿದುಬಿದ್ದಿದೆ. 2019ರಲ್ಲಿ ಕುಸಿದಿದ್ದ ಸ್ಥಳದಿಂದ ಸುಮಾರು
15 ಅಡಿ ಮುಂದೆ ಈ ಕುಸಿತವಾಗಿದೆ.

‘ಬಿಡಿಎ ಈ ಮೇ‌ಲ್ಸೇತುವೆಯನ್ನು ನಿರ್ಮಿಸಿದೆ. ಎರಡನೇ ಬಾರಿಗೆ ಈ ರೀತಿ ಕುಸಿದಿದೆ. ಹೀಗಾಗಿ ತಜ್ಞರಿಂದ ಪರಿಶೀಲನೆ ನಡೆಸಿ, ಯಾವ ರೀತಿ ದುರಸ್ತಿ ಕಾರ್ಯ ನಡೆಸಬೇಕು ಎಂಬುದನ್ನು ಬುಧವಾರ ತೀರ್ಮಾನಿಸುತ್ತೇವೆ. ಬಿಬಿಎಂಪಿ ವತಿಯಿಂದಲೇ ನಾವು ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಉಸ್ತುವಾರಿಯನ್ನೂ ಹೊಂದಿರುವ ಪ್ರಧಾನ ಎಂಜಿನಿಯರ್‌ ಸಿ.ಎಸ್‌. ಪ್ರಹ್ಲಾದ್ ತಿಳಿಸಿದರು.

‘ಕಳಪೆ ಕಾಂಕ್ರೀಟ್‌ ಬಳಸಿರುವುದರಿಂದಲೇ ಇಂತಹ ಸಮಸ್ಯೆ ಎದುರಾಗಿದೆ. ಈ ರಸ್ತೆಯ ಮುಂದಿನ ಭಾಗವನ್ನೂ ಪರಿಶೀಲಿಸಲಾಗುತ್ತದೆ. ತಜ್ಞರಿಂದ ವರದಿ ಪಡೆದು ಮುಂದುವರಿಯಲಾಗುತ್ತದೆ. ಮೇಲ್ಸೇತುವೆ ಮೇಲೆ ಕಾಮಗಾರಿ ನಡೆಸಬೇಕಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕಾಂಕ್ರೀಟ್‌ ಅನ್ನು ನಿಧಾನವಾಗಿ ತೆಗೆದು, ಹೊಸದಾಗಿ ಹಾಕಬೇಕಿದೆ. ಜೋರಾಗಿ ಡ್ರಿಲ್‌ ಮಾಡುವಂತಿಲ್ಲ. ಹೀಗಾಗಿ ಸುಮಾರು ಮೂರು ತಿಂಗಳಷ್ಟು ಸಮಯ ಬೇಕಾಗಬಹುದು’ ಎಂದು ಹೇಳಿದರು.

ಪ್ರೀಕಾಸ್ಟ್‌ ಪ್ರೀಸ್ಟ್ರೆಸ್ಡ್‌ ಕಾಂಕ್ರೀಟ್‌ (ಪಿಎಸ್‌ಸಿ) ಗಿರ್ಡರ್‌ ಮತ್ತು ಸ್ಲ್ಯಾಬ್‌ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿಯಡಿ ಈ ಮೇಲ್ಸೇತುವೆ ನಿರ್ಮಾಣವಾಗಿದ್ದು,
ಆರ್‌ಸಿಸಿ ಸ್ಲ್ಯಾಬ್‌ ಕಾಂಕ್ರೀಟ್‌ ಶಕ್ತಿ ಕುಂದಿದ್ದರಿಂದ ರಂದ್ರಗಳು ಕಂಡುಬಂದಿವೆ. ಇದೇ ರೀತಿ 2019ರಲ್ಲಿಯೂ ಕಂಡುಬಂದಿತ್ತು. ಈಗ ಮತ್ತೊಂದು ಭಾಗದಲ್ಲಿ ರಂದ್ರ ಉಂಟಾಗಿದೆ. ಸೆ.22ರಿಂದ ದುರಸ್ತಿ ಕಾಮಗಾರಿ ಪ್ರಾರಂಭಿಸಲು ಯೋಜಿಸಲಾಗಿದೆ. ಉಳಿದ ಭಾಗದ ಮೇಲ್ಸೇತುವೆ ಭದ್ರವಾಗಿದ್ದು, ಯಾವುದೇ ಆತಂಕ ಇಲ್ಲ ಎಂದು ಅವರು ತಿಳಿಸಿದರು.

ಮೇಲ್ಸೇತುವೆಯ ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಗುಂಡಿ ಬಿದ್ದಿದೆ. ಮೇಲ್ಸೇತುವೆಯ ಆರಂಭದಲ್ಲಿ ಸ್ವಲ್ಪ ದೂರದಲ್ಲಿ ಗುಂಡಿ ಬಿದ್ದಿರುವ ಸ್ಥಳದ ಸುತ್ತ ಬ್ಯಾರಿಕೇಡ್‌ ಹಾಕಲಾಗಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿದೆ.

ಬಿಡಿಎ 2004–06ರಲ್ಲಿ ನಿರ್ಮಿಸಿದ್ದ ಹೊರವರ್ತುಲ ರಸ್ತೆಯನ್ನು ಬಿಬಿಎಂಪಿಗೆ 2014–15ರಲ್ಲಿ ಹಸ್ತಾಂತರಿಸಲಾಗಿತ್ತು. 2019ರ ನವೆಂಬರ್‌ 2ರಂದು ಮೇಲುರಸ್ತೆ ಕುಸಿದು ಐದು ಅಡಿ ಸುತ್ತಳತೆಯ ಗುಂಡಿಯುಂಟಾಗಿ ಆತಂಕ ಸೃಷ್ಟಿಸಿತ್ತು. ಸುಮಾರು ಮೂರು ತಿಂಗಳು ವಾಹನ ಸಂಚಾರಕ್ಕೆ ಅವಕಾಶ ನೀಡದೆ ದುರಸ್ತಿ ಕಾರ್ಯವನ್ನು ಬಿಬಿಎಂಪಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ನಿರ್ವಹಿಸಿತ್ತು. ಸುಮನಹಳ್ಳಿ ಮೇಲ್ಸೇತುವೆಯನ್ನು ನಿರ್ಮಿಸಿದ್ದ ಈಸ್ಟ್‌ಕೋಸ್ಟ್‌ ಕಾಂಟ್ರ್ಯಾಕ್ಟರ್ಸ್‌ ಸಂಸ್ಥೆ ಈಗಾಗಲೇ ದಿವಾಳಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT