ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಕ ಅನುಮಾನಾಸ್ಪದ ಸಾವು: ಕೊಲೆ ಆರೋಪ

Published 8 ಮಾರ್ಚ್ 2024, 20:30 IST
Last Updated 8 ಮಾರ್ಚ್ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಚೇತನ್‌ (21) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ‘ಇದೊಂದು ಕೊಲೆ’ ಎಂಬುದಾಗಿ ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಚೇತನ್ ಅವರು ಗುರುವಾರ (ಮಾರ್ಚ್ 7) ರಾತ್ರಿ ಚಾಕು ಇರಿತದಿಂದ ಗಾಯಗೊಂಡು ಆಟೊದಲ್ಲಿ ಬಿದ್ದಿದ್ದರು. ಅದನ್ನು ನೋಡಿದ್ದ ಪೋಷಕರು, ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕಾಲೇಜು ವಿದ್ಯಾರ್ಥಿ ಚೇತನ್, ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಅದೇ ಯುವತಿಯನ್ನು ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಯುವತಿ ಮನೆಯವರು ಮದುವೆಗೆ ಒಪ್ಪಿರಲಿಲ್ಲ’ ಎಂದು ತಿಳಿಸಿದರು.

ಯುವತಿ ಮನೆಗೆ ಹೋಗಿದ್ದರು: ‘ದಾವಣಗೆರೆಯ ಚೇತನ್ ಹಾಗೂ ಯುವತಿ, ಕಾಲೇಜಿನಲ್ಲಿ ಪರಿಚಯವಾಗಿದ್ದರು. ನಂತರ, ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಮನೆಯವರು ಮದುವೆಗೆ ಒಪ್ಪದಿದ್ದರಿಂದ ತಮ್ಮನ್ನು ಮರೆತು ಬೇರೆಯವರನ್ನು ಮದುವೆಯಾಗುವಂತೆ ಯುವತಿ ಹೇಳಿದ್ದರು. ನೊಂದಿದ್ದ ಯುವಕ, ಗುರುವಾರ ರಾತ್ರಿ ಯುವತಿ ಬಳಿ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಯುವತಿ ಮನೆಯವರು ಹಾಗೂ ಚೇತನ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಆಗಿತ್ತು. ಯುವತಿ ಮನೆಯವರು, ಚೇತನ್‌ ಪೋಷಕರಿಗೆ ಕರೆ ಮಾಡಿ ಗಲಾಟೆ ವಿಷಯ ತಿಳಿಸಿದ್ದರು. ಪೋಷಕರು ಮನೆ ಬಳಿ ಬರುವಷ್ಟರಲ್ಲಿ ಚೇತನ್ ಆಟೊದಲ್ಲಿ ಬಿದ್ದಿದ್ದರು. ಯುವತಿ ಕಡೆಯವರೇ ಚೇತನ್‌ ಅವರನ್ನು ಕೊಲೆ ಮಾಡಿರುವುದಾಗಿ ಪೋಷಕರು ದೂರು ನೀಡಿದ್ದಾರೆ. ‘ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಚೇತನ್, ಚಾಕುವಿನಿಂದ ಇರಿದುಕೊಂಡಿದ್ದಾರೆ’ ಎಂದು ಯುವತಿ ಕಡೆಯವರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ದ್ವಿಚಕ್ರ ವಾಹನ ಡಿಕ್ಕಿ: ವೃದ್ಧೆ ಸಾವು

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಅಪಘಾತ ಸಂಭವಿಸಿದ್ದು, ವೃದ್ಧೆ ಶಾಂತಮ್ಮ (65) ಎಂಬುವವರು ಮೃತಪಟ್ಟಿದ್ದಾರೆ.

‘ತಿಗಳರಪಾಳ್ಯದ ಶಾಂತಮ್ಮ ಅವರು ಮನೆ ಬಳಿ ನಡೆದುಕೊಂಡು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ಆರೋಪದಡಿ ದ್ವಿಚಕ್ರ ವಾಹನ ಸವಾರ ನಾರಾಯಣ್‌ನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸವಾರ ನಾರಾಯಣ್, ತನ್ನ ದ್ವಿಚಕ್ರ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದ. ಮಾರ್ಗಮಧ್ಯೆಯೇ ಪಾದಚಾರಿ ಶಾಂತಮ್ಮ ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ಶಾಂತಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಶಾಂತಮ್ಮ ಅವರ ಕುಟುಂಬದವರು ನೀಡಿರುವ ದೂರು ಆಧರಿಸಿ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಕಟ್ಟಡದಿಂದ ಬಿದ್ದು ಕಾರ್ಮಿಕ ದುರ್ಮರಣ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾರ್ಮಿಕ ಅಂಥೋನಿರಾಜ್ (52) ಅವರು ಮೃತಪಟ್ಟಿದ್ದು, ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಮಿಳುನಾಡಿನ ಅಂಥೊನಿರಾಜ್, ಕಟ್ಟಡ ನಿರ್ಮಾಣ ಕಾರ್ಮಿಕ. ಜೆ.ಪಿ.ನಗರ 7ನೇ ಹಂತದ ರಾಘವ ನಗರದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಕೆಲ ತಿಂಗಳಿನಿಂದ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಗುರುವಾರವೂ ಅಂಥೊನಿರಾಜ್ ಅವರು ಎರಡನೇ ಮಹಡಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆಯತಪ್ಪಿ ನೆಲಮಹಡಿಗೆ ಬಿದ್ದಿದ್ದರು. ತಲೆಗೆ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ.’

‘ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಿವೇಶನ ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರಿಗೂ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT