ಸೋಮವಾರ, ಜೂನ್ 21, 2021
23 °C
10 ಲಕ್ಷಕ್ಕಿಂತೆ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿ 37ನೇ ಸ್ಥಾನ

ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆ: ಮತ್ತೆ 20 ಸ್ಥಾನ ಕುಸಿದ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಚ್ಛ ನಗರಗಳನ್ನು ಗುರುತಿಸುವ ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆಯಲ್ಲಿ ಬಿಬಿಎಂಪಿ ಈ ಬಾರಿಯೂ 100ಕ್ಕಿಂತ ಒಳಗಿನ ಸ್ಥಾನ ಗಿಟ್ಟಿಸುವಲ್ಲಿ ವಿಫಲವಾಗಿದೆ. 4,242 ನಗರಗಳು ಭಾಗವಹಿಸಿದ್ದ ಈ ಸಮೀಕ್ಷೆಯಲ್ಲಿ ಬಿಬಿಎಂಪಿ 214ನೇ ಸ್ಥಾನ ಗಳಿಸಿದೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 47 ನಗರಗಳಲ್ಲಿ 37ನೇ ಸ್ಥಾನ ಪಡೆದಿದೆ.

ಕಳೆದ ಸಾಲಿಗೆ (2019) ಹೋಲಿಸಿದರೆ ಈ ಬಾರಿಯ ಸರ್ವೆಯಲ್ಲಿ ಬಿಬಿಎಂಪಿ 20 ಸ್ಥಾನ ಕುಸಿತ ಕಂಡಿದೆ. ಕಳೆದ ಸಾಲಿನಲ್ಲಿ 194ನೇ ಸ್ಥಾನ ಪಡೆದಿತ್ತು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನೀಡುವ ‘ಅತ್ಯುತ್ತಮ ಸುಸ್ಥಿರ ಮೆಗಾ ಸಿಟಿ’ ಪ್ರಶಸ್ತಿ ಈ ಬಾರಿ ಬಿಬಿಎಂಪಿ ಪಾಲಾಗಿದೆ. ಶ್ರೇಯಾಂಕ ಕುಸಿತದ ನಡುವೆಯೂ ಈ ಮನ್ನಣೆ ಸಿಕ್ಕಿದ್ದು ಪಾಲಿಕೆ ಸ್ವಲ್ಪ ಮಟ್ಟಿಗೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದೆ.

‘ಒಟ್ಟಾರೆ ಅಂಕಗಳ ವಿಶ್ಲೇಷಿಸಿ ಸಚಿವಾಲಯವು ಈ ಪ್ರಶಸ್ತಿಗೆ ಬಿಬಿಎಂಪಿಯನ್ನು ಆಯ್ಕೆ ಮಾಡಿದೆ. ನಿರ್ದಿಷ್ಟವಾಗಿ ಯಾವ ಸಾಧನೆಗೆ ಈ ಪ್ರಶಸ್ತಿ ಸಿಕ್ಕಿದೆ ಎಂಬುದು ನಮಗೂ ತಿಳಿದಿಲ್ಲ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2019ರ ಸ್ವಚ್ಛ ಸರ್ವೇಕ್ಷಣ್‌ ಸರ್ವೆಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್‌) ಶ್ರೇಯವನ್ನೂ ಪಡೆದಿರದ ಬಿಬಿಎಂಪಿ 2020ರ ಸರ್ವೆಯಲ್ಲಿ ‘ಒಡಿಎಫ್‌ ಪ್ಲಸ್‌’ ಹಾಗೂ ‘ಒಡಿಎಫ್‌ ಪ್ಲಸ್‌ ಪ್ಲಸ್‌’ ಶ್ರೇಯಗಳೆರಡನ್ನೂ ಪಡೆದಿದೆ. ತನ್ಮೂಲಕ ಈ ವಿಭಾಗದಲ್ಲಿ 500 ಅಂಕಗಳನ್ನು ಪಾಲಿಕೆ ಗಿಟ್ಟಿಸಿಕೊಂಡಿದೆ. ಇದು ಕೂಡಾ ಈ ಸಾಲಿನ ಸಾಧನೆಗಳಲ್ಲೊಂದು. ರಾಜ್ಯದ ಮೂರು ನಗರಗಳು ಮಾತ್ರ ‘ಒಡಿಎಫ್‌ ಪ್ಲಸ್‌ ಪ್ಲಸ್‌’ ಮನ್ನಣೆ ಗಳಿಸಿವೆ. 

ಏನಿದು ಒಡಿಎಫ್‌ ಪ್ಲಸ್ ಪ್ಲಸ್‌?
ಸ್ವಚ್ಛ ಭಾರತ ಅಭಿಯಾನದಲ್ಲಿ ಒಡಿಎಫ್‌ ಪ್ಲಸ್‌ ಪ್ಲಸ್‌ ಮನ್ನಣೆ ಪಡೆಯಲು ಯಾವುದೇ ಮಲ ಪದಾರ್ಥ ಅಥವಾ ಒಳಚರಂಡಿಯ ಕೊಳಚೆ ನೀರಿನ ಸುರಕ್ಷಿತ ನಿರ್ವಹಣೆ ಮತ್ತು ಸಂಸ್ಕರಣೆ, ಇವುಗಳನ್ನು ಸಂಸ್ಕರಿಸದ ಹೊರತು ಒಳಚರಂಡಿಗೆ/ ಜಲಮೂಲಗಳಿಗೆ/ ಬಯಲಿಗೆ ಹರಿಯಬಿಡದಿರುವ ವ್ಯವಸ್ಥೆಯನ್ನು ನಗರಾಡಳಿತ ಸಂಸ್ಥೆ ಹೊಂದಿರಬೇಕು.

ನಗರದ ಎಲ್ಲಾ ಶೌಚಾಲಯಗಳೂ ಒಳಚರಂಡಿ ವ್ಯವಸ್ಥೆ ಜೊತೆ ಬೆಸೆದಿರುವುದು ಅಥವಾ ಶೌಚವನ್ನು ಸ್ಥಳದಲ್ಲೇ ವೈಜ್ಞಾನಿಕವಾಗಿ ನಿರ್ವಹಿಸುವ ವ್ಯವಸ್ಥೆ ಹೊಂದುವುದು, ಅಧಿಕೃತ ನಿರ್ವಹಣಾ ಸಂಸ್ಥೆಗಳು ಸುಸ್ಥಿತಿಯಲ್ಲಿರುವ ಪರಿಕರಗಳನ್ನು ಬಳಸಿ ಮಲಪದಾರ್ಥಗಳ ಯಾಂತ್ರೀಕೃತ ನಿರ್ವಹಣೆ, ಒಳಚರಂಡಿ ಜಾಲವನ್ನು ಮತ್ತು ಮಲತ್ಯಾಜ್ಯ ಸಂಸ್ಕರಣಾ ಘಟಕಗಳ ಉತ್ತಮ ನಿರ್ವಹಣೆ ಆಧರಿಸಿ ಒಡಿಎಫ್‌ ಪ್ಲಸ್‌ ಪ್ಲಸ್‌ ಮನ್ನಣೆ ನೀಡಲಾಗುತ್ತದೆ.

ತಪಾಸಣೆ ವೇಳೆ ಸಮುದಾಯ ಶೌಚಾಲಯ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಶೇ 25ರಷ್ಟರ ನಿರ್ವಹಣೆ ತೃಪ್ತಿಕರವಾಗಿದ್ದರೂ ಈ ಮನ್ನಣೆ ಸಿಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು