ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು ಜಿಲ್ಲೆಗೆ ವರ್ಗಾವಣೆಗೆ ಆಗ್ರಹಿಸಿ ಶಿಕ್ಷಕರ ಧರಣಿ

ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು
Last Updated 5 ಸೆಪ್ಟೆಂಬರ್ 2022, 22:40 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಮಾರು ವರ್ಷಗಳಿಂದ ಕುಟುಂಬ ಹಾಗೂ ಸಂಬಂಧಿಕರಿಂದ ದೂರವಿದ್ದುಕೊಂಡು ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ತವರು ಜಿಲ್ಲೆಗೆ ವರ್ಗಾವಣೆಯಾಗಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು ನಗರದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಬಂದಿರುವ ಶಿಕ್ಷಕರು, ಸ್ವಾತಂತ್ರ್ಯ ಉದ್ಯಾನದಲ್ಲಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ತವರು ಜಿಲ್ಲೆಗೆ ವರ್ಗಾವಣೆ ಕೊಡಿ. ಮಾನಸಿಕ ಕಿರಿಕಿರಿ ತಪ್ಪಿಸಿ’ ಸೇರಿ ಹಲವು ಘೋಷಣಾ ಫಲಕಗಳನ್ನು ಸೋಮವಾರ ಪ್ರದರ್ಶಿಸಿದರು. ಕೆಲ ಶಿಕ್ಷಕರು, ತಮ್ಮ ಮಕ್ಕಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆ ತಂದಿದ್ದು ಕಂಡುಬಂತು.

‘ರಾಜ್ಯದ 2,500ಕ್ಕೂ ಹೆಚ್ಚು ಶಿಕ್ಷಕರು, 10ರಿಂದ 20 ವರ್ಷಗಳಿಂದ ಸ್ವಂತ ಜಿಲ್ಲೆಯಿಂದ ಸುಮಾರು 500 ಕಿ.ಮೀ. ದೂರವಿದ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷ ಕಳೆದರೂ ವರ್ಗಾವಣೆ ಸಿಗದಿದ್ದರಿಂದ, ಮಾನಸಿಕವಾಗಿ ಶಿಕ್ಷಕರು ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

‘ತಂದೆ–ತಾಯಿ, ಅತ್ತೆ–ಮಾವ, ಪತಿ–ಪತ್ನಿ, ಮಕ್ಕಳು... ಹೀಗೆ ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲ ಶಿಕ್ಷಕರ ಕೌಟುಂಬಿಕ ಜೀವನವೇ ಹಾಳಾಗಿದ್ದು, ಒಂಟಿಯಾಗಿ ಜೀವಿಸುವ ಸ್ಥಿತಿ ಬಂದಿದೆ’ ಎಂದು ಹೇಳಿದರು.

‘ನಮ್ಮ ಸೇವಾವಧಿಯಲ್ಲೇ ತವರು ಜಿಲ್ಲೆಗೆ ವರ್ಗಾವಣೆ ಪಡೆಯಲು ಅವಕಾಶ ಕೋರಿ ಎರಡು ಬಾರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಶಿಕ್ಷಣ ಇಲಾಖೆ, ಇದುವರೆಗೂ ಸ್ಪಂದಿಸಿಲ್ಲ. ಹೀಗಾಗಿ, ಮೂರನೇ ಬಾರಿ ಧರಣಿ ಆರಂಭಿಸುತ್ತಿದ್ದೇವೆ. ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT