ಶಿಕ್ಷಕರಿಗೆ ಸಂಬಳ ಇಲ್ಲದೆ ಪರದಾಟ

ಬುಧವಾರ, ಜೂಲೈ 17, 2019
25 °C
ಕೆ.ಆರ್.ಪುರಂ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಗೋಳು

ಶಿಕ್ಷಕರಿಗೆ ಸಂಬಳ ಇಲ್ಲದೆ ಪರದಾಟ

Published:
Updated:

ಬೆಂಗಳೂರು: ಬೆಂಗಳೂರು ನಗರ ದಕ್ಷಿಣ ಜಿಲ್ಲೆ ಕೆ.ಆರ್.ಪುರ ಬಿಇಒ ಕಚೇರಿ (ವಲಯ 4) ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಎರಡು ತಿಂಗಳಿಂದ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ.

ಬಿಇಒ ಕಚೇರಿ ಸಿಬ್ಬಂದಿಯ ಎಡವಟ್ಟಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಶಿಕ್ಷಕರು ದೂರುತ್ತಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದ ಬಿಇಒ ಸಲೀಂ ಪಾಷಾ, ಅನುದಾನ ಹಂಚಿಕೆ ಲೆಕ್ಕಾಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಅದನ್ನು ಸರಿಪಡಿಸಲಾಗುತ್ತಿದೆ. ವಾರದೊಳಗೆ ಸಂಬಳ ಬರಲಿದೆ. ಸ್ವತಃ ಬಿಇಒ ಕಚೇರಿ ಸಿಬ್ಬಂದಿಗೂ ಸಂಬಳ ಆಗಿಲ್ಲ ಎಂಬುದನ್ನು ಗಮನಿಸಬೇಕು ಎಂದರು.

ಆರೋಪ ಏನು: ಶಿಕ್ಷಕರ ವೇತನ ಬಾಬ್ತಿಗಾಗಿ ಸರ್ಕಾರ ಜಿಲ್ಲಾ ಪಂಚಾಯಿತಿ ಮೂಲಕ ತಾಲ್ಲೂಕು ಪಂಚಾಯಿತಿಗಳಿಗೆ ವೇತನ ಅನುದಾನ ಬಿಡುಗಡೆ ಮಾಡುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ವೇತನದ ಬಿಲ್ಲುಗಳನ್ನು ಸಕಾಲಕ್ಕೆ ಖಜಾನೆಗೆ ಸಲ್ಲಿಸುವುದು ಬಿಇಒ ಕಚೇರಿ ಜವಾಬ್ದಾರಿ. ಆದರೆ ಕೆ.ಆರ್.ಪುರ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಶಿಕ್ಷಕರ ವೇತನ ಬಟವಾಡೆ ಸಕಾಲಕ್ಕೆ ಆದ ಉದಾ
ಹರಣೆಗಳಿಲ್ಲ ಎಂಬುದು ಶಿಕ್ಷಕರ ದೂರು.

‘ಬಿಇಒ ಕಚೇರಿಯಲ್ಲಿನ ವಿಳಂಬ ನೀತಿ, ವೇತನ ಬಿಲ್ ಸಿದ್ಧಪಡಿಸಿ ಖಜಾನೆಗೆ ಸಲ್ಲಿಸುವಲ್ಲಿ ಸಂಬಂಧಿಸಿದ ಸಿಬ್ಬಂದಿಯ ಹೊಣೆಗೇಡಿತನ ಬಯಲಾಗುತ್ತದೆ. ಶಿಕ್ಷಕರ ವೇತನವೂ ಸೇರಿದಂತೆ ಆಡಳಿತ ವೆಚ್ಚಕ್ಕೆ ಬೇಕಾಗಿರುವ ಅನುದಾನದ ಮೊತ್ತದ ಬಗ್ಗೆ ಮುಂಚಿತವಾಗೇ ಜಿಲ್ಲಾ ಪಂಚಾಯಿತಿಗೆ ಸಂಬಂಧಪಟ್ಟ ಬಿಇಒ ಕಚೇರಿಗಳು ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಬೇಡಿಕೆಗೆ ಅನುಸಾರ ಅನುದಾನ ಬಿಡುಗಡೆ ಮಾಡುತ್ತದೆ. ಸಕಾಲಕ್ಕೆ ಅಗತ್ಯ ಮೊತ್ತದ ಅಂದಾಜು ಸಲ್ಲಿಕೆ ಆಗದಿದ್ದರೆ ಮಾಮೂಲಿನಂತೆ ಅನುದಾನ ಬಿಡುಗಡೆ ಆಗುತ್ತದೆ. ಆದರೆ ಕೊರತೆಯಾಗುವ ಮೊತ್ತವನ್ನು ಸರಿ ಹೊಂದಿಸುವಲ್ಲಿ ಸಿಬ್ಬಂದಿ ಎಡವುದರಿಂದ ಸಕಾಲಕ್ಕೆ ಶಿಕ್ಷಕರಿಗೆ ವೇತನ ಬಿಡುಗಡೆ ಆಗದೇ ಪಡಿಪಾಟಲು ಪಡುವಂತಾಗಿದೆ’ ಎಂದು ಶಿಕ್ಷಕರು ದೂರಿದ್ದಾರೆ.

‘ಬಿಇಒ ವ್ಯಾಪ್ತಿಯಲ್ಲಿ 400 ಮಂದಿ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಬಿಟ್ಟರೆ ಉಳಿದೆಲ್ಲರಿಗೂ ಮೇ ಮತ್ತು ಜೂನ್‌ ತಿಂಗಳ ಸಂಬಳ ಬಂದಿದೆ. ಅನುದಾನ ಹಂಚಿಕೆ ಮಾಡುವಾಗ ಕೆಲವೊಮ್ಮೆ ತಪ್ಪು ಲೆಕ್ಕಾಚಾರ ಆಗಿಬಿಡುತ್ತದೆ. ಇದೇ ಮೊದಲ ಬಾರಿಗೆ ಇಂತಹ ತಪ್ಪು ಆಗಿದೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಶೀಘ್ರ ಸಮಸ್ಯೆ ಬಗೆಹರಿಯಲಿದೆ, ಯಾರೂ ಗಾಬರಿಗೊಳ್ಳಬಾರದು’ ಎಂದು ಬಿಇಒ ಅವರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !