ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ವರ್ತುಲ ಮಾರ್ಗಕ್ಕೆ ಟೆಂಡರ್‌

ಕೆ.ಆರ್. ಪುರ–ಸಿಲ್ಕ್‌ಬೋರ್ಡ್‌ ಮೆಟ್ರೊ l 2 ಪ್ಯಾಕೇಜ್‌ಗಳಲ್ಲಿ 17 ಕಿ.ಮೀ. ಮಾರ್ಗ ನಿರ್ಮಾಣ
Last Updated 20 ಡಿಸೆಂಬರ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ–ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ ಜಂಕ್ಷನ್‌ ನಡುವೆ 17 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಶುಕ್ರವಾರ ಟೆಂಡರ್‌ ಆಹ್ವಾನಿಸಿದೆ.

ಬಹುದಿನಗಳಿಂದ ಈ ಮಾರ್ಗ ನಿರ್ಮಾಣ ವಿಚಾರ ನನೆಗುದಿಗೆ ಬಿದ್ದಿತ್ತು. ಎರಡು ಪ್ಯಾಕೇಜ್‌ಗಳಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಆಹ್ವಾನ ನೀಡಲಾಗಿದ್ದು, ಅರ್ಜಿ ಸಲ್ಲಿಕೆಗೆ 2020ರ ಫೆ.6ರವರೆಗೆ ಕಾಲಾವಕಾಶ ನೀಡಲಾಗಿದೆ.ಅಂದೇ ಬಿಡ್ ತೆರೆಯಲಾಗುವುದು. ಸಿವಿಲ್ ಕಾಮಗಾರಿ ಟೆಂಡರ್ ಪಡೆದ ದಿನದಿಂದ 27 ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಸುವ ಷರತ್ತು ವಿಧಿಸಲಾಗಿದೆ.

ಉದ್ದೇಶಿತ ಯೋಜನೆಗೆ ಯೋಜನೆಗೆ ವಿನೂತನ ಮಾದರಿಯಲ್ಲಿ ಸಂಪನ್ಮೂಲ ಕ್ರೋಡೀಕರಿಸಲು ಚಿಂತನೆ ನಡೆಸಿದ್ದು, ಬೇಕಾಗುವ ಅಗತ್ಯ ಸಂಪನ್ಮೂಲವನ್ನು ಕೆ.ಆರ್. ಪುರ-ಸಿಲ್ಕ್‌ಬೋರ್ಡ್ ಜಂಕ್ಷನ್ ಮಾರ್ಗದುದ್ದಕ್ಕೂ ತಲೆಯೆತ್ತುವ ಹೊಸ ಬಡಾವಣೆಗಳ ಮೇಲೆ ಮೆಟ್ರೊ ಸೆಸ್ ಹೇರಿಕೆ, ಪ್ರೀಮಿಯಂ ಫ್ಲೋರ್ ಸ್ಪೇಸ್ ಇಂಡೆಕ್ಸ್‌ (ಪಿಎಂಎಫ್‌ಎಸ್‌ಐ), ಐಟಿ ಪಾರ್ಕ್‌ಗಳಿಗೆ ನೇರ ಮೆಟ್ರೊ ಸಂಪರ್ಕ, ಜಾಹೀರಾತು ಮತ್ತು ಲೀಸ್‌ಗೆ ಅನುವು ಮಾಡಿಕೊಡುವುದು ಈ ಎಲ್ಲ ಮೂಲಗಳಿಂದಲೂ ಕ್ರೋಡೀಕರಿಸಲು ನಿಗಮ ಚಿಂತನೆ ನಡೆಸಿದೆ.

ಈ ಮಾರ್ಗದಿಂದ ಎಷ್ಟು ಅನುಕೂಲ?:ಯೋಜನೆ ಪೂರ್ಣಗೊಂಡ ನಂತರದ ಮೊದಲ ವರ್ಷದಲ್ಲೇ ನಿತ್ಯ ಈ ಮಾರ್ಗದಲ್ಲಿ 3.1 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

ಈ ಮಾರ್ಗಕ್ಕಾಗಿ 15,179 ಚದರ ಮೀಟರ್ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 5,911 ಚದರ ಮೀಟರ್ ಸರ್ಕಾರಿ ಭೂಮಿ ಸೇರಿದೆ.ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಈ ಕಾರಿಡಾರ್‌ನಲ್ಲಿ ನಗರದ ಶೇ 32ರಷ್ಟು ವಾಣಿಜ್ಯ ಸಂಸ್ಥೆಗಳ ಕಚೇರಿಗಳಿದ್ದು, ಸುಮಾರು 8 ಲಕ್ಷ ಜನ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಗಂಟೆಗೆ 18,750 ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಪ್ಯಾಕೇಜ್‌–1:ಸೆಂಟ್ರಲ್ ಸಿಲ್ಕ್‌ಬೋರ್ಡ್‌, ಎಚ್‌ಎಸ್‌ಆರ್ ಲೇಔಟ್, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ

ಮಾರ್ಗದ ಉದ್ದ: 9.85 ಕಿ.ಮೀ.

ಅಂದಾಜು ವೆಚ್ಚ: ₹731.18 ಕೋಟಿ

ಪ್ಯಾಕೇಜ್‌–2: ಕೋಡಿಬಸವನಹಳ್ಳಿ, ಮಾರತ್ತಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಸರಸ್ವತಿ ನಗರ, ಕೆ.ಆರ್. ಪುರ.

ಮಾರ್ಗದ ಉದ್ದ: 9.77ಕಿ.ಮೀ.

ಅಂದಾಜು ವೆಚ್ಚ: ₹594.25 ಕೋಟಿ

ರದ್ದಾಗಿತ್ತು ಟೆಂಡರ್‌ ಪ್ರಕ್ರಿಯೆ

ಈ ಮೊದಲು ಮೂರು ಪ್ಯಾಕೇಜ್‌ಗಳಲ್ಲಿ ಹೊರವರ್ತುಲ ಮಾರ್ಗದ ಟೆಂಡರ್ ಕರೆಯಲು ಉದ್ದೇಶಿಸಲಾಗಿತ್ತು. ಈ ಪೈಕಿ ಒಂದು ಪ್ಯಾಕೇಜ್‌ನ ಹಣಕಾಸು ಬಿಡ್ ಕೂಡ ತೆರೆಯಲಾಗಿತ್ತು. ಆದರೆ, ಅದರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಐಎಲ್ ಆ್ಯಂಡ್‌ ಎಫ್‌ಎಸ್ ಭಾಗಿಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಗಿತ್ತು.

ಮೊದಲ ಪ್ಯಾಕೇಜ್‌ (ಸಿಲ್ಕ್‌ಬೋರ್ಡ್‌-ಬೆಳ್ಳಂದೂರು)ನಲ್ಲಿ ನಿಗಮ ನಿಗದಿಪಡಿಸಿದ್ದಕ್ಕಿಂತ ಶೇ -1ರಷ್ಟು ದರವನ್ನು ಐಎಲ್ ಆ್ಯಂಡ್‌ ಎಫ್‌ಎಸ್ ನಮೂದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT