ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಥಲಸ್ಸೇಮಿಯಾ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಬಾಲಕನಿಗೆ ಅಸ್ಥಿ ಮಜ್ಜೆ ಕಸಿ

Published : 27 ಸೆಪ್ಟೆಂಬರ್ 2024, 16:34 IST
Last Updated : 27 ಸೆಪ್ಟೆಂಬರ್ 2024, 16:34 IST
ಫಾಲೋ ಮಾಡಿ
Comments

ಬೆಂಗಳೂರು: ರಕ್ತ ಸಂಬಂಧಿ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆಸಲಾದ ಅಸ್ಥಿ ಮಜ್ಜೆ (ಬೋನ್‌ ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. 

ಸಂಸ್ಥೆಯ ಬೋನ್‌ ಮ್ಯಾರೊ ಘಟಕಕ್ಕೆ (ಬಿಎಂಟಿ) ಶುಕ್ರವಾರ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಕಸಿಗೆ ಒಳಗಾದ ಬಾಲಕನ ಆರೋಗ್ಯವನ್ನು ವಿಚಾರಿಸಿ, ವೈದ್ಯರ ಕಾರ್ಯವನ್ನು ಶ್ಲಾಘಿಸಿದರು.

‘ಥಲಸ್ಸೇಮಿಯಾ ಅಸ್ಥಿ ಮಜ್ಜೆ ಕಸಿಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆಸಲಾಗಿದೆ. ಇನ್ನೂ 25 ರೋಗಿಗಳು ಕಸಿಗೆ ನೋಂದಣಿಯಾಗಿದ್ದಾರೆ. ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಅಸ್ಥಿ ಮಜ್ಜೆ ಚಿಕಿತ್ಸಾ ವೆಚ್ಚವು ₹ 7 ಲಕ್ಷದಿಂದ ₹ 15 ಲಕ್ಷ ಇದೆ. ಈ ಚಿಕಿತ್ಸೆಯನ್ನು ಸಂಸ್ಥೆಯಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ನವೀನ್ ಭಟ್, ‘ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಸಾವಿರದಿಂದ 15 ಸಾವಿರ ಮಕ್ಕಳು ಥಲಸ್ಸೇಮಿಯಾ ರೋಗದೊಂದಿಗೆ ಜನಿಸುತ್ತಿದ್ದಾರೆ. ಈ ಸಮಸ್ಯೆ ಇರುವವರಿಗೆ ಸಂಸ್ಥೆಯ ಬೋನ್‌ ಮ್ಯಾರೊ ಘಟಕದಲ್ಲಿ ಅಸ್ಥಿ ಮಜ್ಜೆ ಕಸಿ ನಡೆಸಲಾಗುತ್ತಿದೆ’ ಎಂದು ಹೇಳಿದರು. 

ಸಂಸ್ಥೆಯ ವೈದ್ಯೆ ಡಾ.ವಸುಂಧರಾ ಕೈಲಾಸನಾಥ್, ‘ಕಸಿಗೆ ಒಳಗಾದ ಬಾಲಕ ಹುಟ್ಟಿನಿಂದಲೇ ಥಲಸ್ಸೇಮಿಯಾ ಸಮಸ್ಯೆ ಎದುರಿಸುತ್ತಿದ್ದ. ಪ್ರತಿ ತಿಂಗಳು ರಕ್ತ ಬದಲಾಯಿಸಬೇಕಾಗಿತ್ತು. ಆತನಿಗೆ ಸಹೋದರಿಯ ರಕ್ತದಿಂದ ಪಡೆದಿದ್ದ ಆಕರ ಕೋಶವನ್ನು ವರ್ಗಾಯಿಸಿ ಅಸ್ಥಿ ಮಜ್ಜೆ ಕಸಿ ನಡೆಸಲಾಗಿದೆ’ ಎಂದರು. 

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಹಾಗೂ ಸಂಸ್ಥೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT