ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಮ್ಮಸಂದ್ರ | ‘ಸೆಂಟ್ರಲ್ ಜೈಲ್ ಬಡಾವಣೆ’ಗೆ ಮೂಲ ಸೌಕರ್ಯಗಳಿಲ್ಲ

Published : 19 ಸೆಪ್ಟೆಂಬರ್ 2024, 16:21 IST
Last Updated : 19 ಸೆಪ್ಟೆಂಬರ್ 2024, 16:21 IST
ಫಾಲೋ ಮಾಡಿ
Comments

ಬೊಮ್ಮಸಂದ್ರ: ಸಿಂಗಸಂದ್ರ ವಾರ್ಡ್‌ನಲ್ಲಿರುವ ‘ಸೆಂಟ್ರಲ್ ಜೈಲ್ ಬಡಾವಣೆ’ಯಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ಇಲ್ಲಿನ ನಿವಾಸಿಗಳು ಸಂಕಷ್ಟ ಎದರಿಸುತ್ತಿದ್ದಾರೆ.

ಸರ್ಜಾಪುರ ರಸ್ತೆಗೆ ಹೊಂದಿಕೊಂಡಿರುವ ‘ಸೆಂಟ್ರಲ್ ಜೈಲ್ ಬಡಾವಣೆ’ಯಲ್ಲಿ ವಿದ್ಯುತ್, ರಸ್ತೆ, ಒಳಚರಂಡಿ, ಬೀದಿ ದೀಪ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ದಶಕಗಳಿಂದ ನಾಗರಿಕರು ದೂರುತ್ತಿದ್ದರೂ, ಬಿಬಿಎಂಪಿ ಇತ್ತ ಗಮನಹರಿಸಿಲ್ಲ.

ಮಳೆಯಿಂದಾಗಿ ಡಾಂಬರು ಕಾಣದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಒಳಚರಂಡಿ ವ್ಯವಸ್ಥೆಯೂ ಇಲ್ಲದಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಅಧಿಕೃತ ವಿದ್ಯುತ್ ಸಂಪರ್ಕವೂ ಇಲ್ಲ. ಬೀದಿ ದೀಪಗಳೂ ಇಲ್ಲದೇ ರಾತ್ರಿ ವೇಳೆ ಸಂಚರಿಸುವುದು ದುಸ್ತರವಾಗಿದೆ.

‘ಮೂಲ ಸೌಕರ್ಯ ಕಲ್ಪಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ನೀಡಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿನ ಮೂಲ ಸೌಕರ್ಯಕ್ಕೆ ಅನುದಾನ ಮಂಜೂರಾದರೂ, ಅದನ್ನು ಬೇರೆಡೆ ಬಳಸಿಕೊಳ್ಳಲಾಗಿದೆ’ ಎಂದು ಇಲ್ಲಿನ ನಿವಾಸಿಗಳು ದೂರಿದರು.

ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ನಂತರ, ಭೂಮಿ ಕಳೆದುಕೊಂಡವರಿಗೆ ಪರ್ಯಾಯವಾಗಿ ಜಾಗ ನೀಡಬೇಕೆಂದು ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಭೂಮಿ ಕಳೆದುಕೊಂಡವರಿಗೆ ಬದಲಿ ನಿವೇಶನ ನೀಡಬೇಕೆಂದು ನ್ಯಾಯಾಲಯವು 1997ರ ಡಿಸೆಂಬರ್ 15ರಂದು ಆದೇಶಿಸಿತ್ತು. ಅದರನ್ವಯ 2005ರಲ್ಲಿ ಕೂಡ್ಲು ಗ್ರಾಮದ ಸರ್ವೆ ನಂ.148ರ ಐದು ಎಕರೆ ಸರ್ಕಾರಿ ಜಾಗದಲ್ಲಿ 150 ಕುಟುಂಬಗಳಿಗೆ ತಲಾ 600 ಚದರ ಅಡಿ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ ಆಗಿನಿಂದಲೂ ಈ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿಲ್ಲ.

‘ದೀರ್ಘಕಾಲದಿಂದ ಹೋರಾಟ ಮಾಡಿ, ನ್ಯಾಯಾಲಯದ ಮೂಲಕ ನ್ಯಾಯ ಪಡೆದರೂ, ಅಧಿಕಾರಿಗಳು ಈ ಬಡಾವಣೆಗೆ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ, ಹಲವು ಬಾರಿ ಮನವಿ ಪತ್ರ ನೀಡಿದಾಗಿಯೂ ಪ್ರಯೋಜನವಾಗಲಿಲ್ಲ’ ಎನ್ನುತ್ತಾರೆ ಬಡಾವಣೆಯ ನಿವಾಸಿ ಮುನಿಯಪ್ಪ.

ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್ ಪ್ರತಿಕ್ರಿಯಿಸಿ, ‘ಸ್ಥಳ ಪರಿಶೀಲನೆ ಮಾಡಿ, ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT