ಭಾನುವಾರ, ಅಕ್ಟೋಬರ್ 25, 2020
22 °C
ಕೋವಿಡ್ ಕಾರಣ ವೈದ್ಯರು ಚಿಕಿತ್ಸೆಗೆ ಹಿಂದೇಟು l ದೂರದಿಂದಲೇ ರೋಗಿಗಳ ತಪಾಸಣೆ l 1500 ಕ್ಲಿನಿಕ್‌ಗಳು ಸ್ಥಗಿತ

ಶಾಶ್ವತವಾಗಿ ಮುಚ್ಚುತ್ತಿವೆ ಕ್ಲಿನಿಕ್‌ಗಳು

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾರಣದಿಂದ ನಗರದ ವೈದ್ಯರು ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 8 ತಿಂಗಳಲ್ಲಿ 1,500ಕ್ಕೂ ಅಧಿಕ ಕ್ಲಿನಿಕ್‌ಗಳಿಗೆ ಬೀಗ ಬಿದ್ದಿವೆ.

ಕೋವಿಡ್‌ ಕಾಯಿಲೆ ಕಾಣಿಸಿಕೊಳ್ಳುವ ಮುನ್ನ ನಗರದಲ್ಲಿ 7 ಸಾವಿರಕ್ಕೂ ಅಧಿಕ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಲ್ಲಿ ಬಹುತೇಕರು 50 ವರ್ಷ ಮೇಲ್ಟಟ್ಟವರು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವವರಾಗಿದ್ದಾರೆ. ಸರ್ಕಾರವು ಲಾಕ್‌ಡೌನ್ ಘೋಷಿಸಿದ ಬಳಿಕ ಬಹುತೇಕ ಕ್ಲಿನಿಕ್‌ಗಳು ಕಾರ್ಯವನ್ನು ಸ್ಥಗಿತಗೊಳಿಸಿದ್ದವು. ಈ ವೇಳೆ ವೈದ್ಯರು ಟೆಲಿ ಮೆಡಿಸಿನ್ ವ್ಯವಸ್ಥೆಯಡಿ ರೋಗಿಗಳಿಗೆ ಸೇವೆ ನೀಡಿದ್ದರು. ಈಗ ಎಲ್ಲ ಕಾರ್ಯಚಟುವಟಿಕೆಗಳು ಪ್ರಾರಂಭವಾದರೂ ಕೋವಿಡ್‌ ‍ಪ್ರಕರಣಗಳು ಏರುಗತಿ ಪಡೆದಿರುವ ಪರಿಣಾಮ ಕೆಲ ಕ್ಲಿನಿಕ್‌ಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆಯಡಿ (ಕೆಪಿಎಂಇ) ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದರೂ ಕೆಲ ವೈದ್ಯರು ಕ್ಲಿನಿಕ್‌ಗಳಲ್ಲಿ ಸೇವೆ ಮುಂದುವರಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕೆಲ ವೈದ್ಯರು ಕೋವಿಡ್ ಪೀಡಿತರಾಗಿರುವುದು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 50ಕ್ಕೂ ಅಧಿಕ ವೈದ್ಯರು ಈ ಕಾಯಿಲೆಯಿಂದ ಮೃತಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ನಗರದಲ್ಲಿ ವರದಿಯಾಗಿರುವ ಕೋವಿಡ್ ಪ್ರಕರಣಗಳಲ್ಲಿ ಶೇ 97.6ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೇ ಬಹಿರಂಗವಾಗಿ ಗೋಚರಿಸಿಲ್ಲ. ಇದು ಕೂಡ ವೈದ್ಯರ ಕ್ಲಿನಿಕ್‌ ಸೇವೆಗೆ ತೊಡಕಾಗಿದೆ.

ಸ್ವಯಂ ಪ್ರೇರಿತರಾಗಿ ಸ್ಥಗಿತ: ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ನಿವೃತ್ತಿಯಾಗಿರುವ ಸರ್ಕಾರಿ ವೈದ್ಯರು ತಾವು ನಡೆಸುತ್ತಿರುವ ಕ್ಲಿನಿಕ್‌ಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತ ಮಾಡುತ್ತಿದ್ದಾರೆ. ಪರಿಣಾಮ ನಗರದ ವಿವಿಧೆಡೆ ಬಂದ್‌ ಆಗಿರುವ ಕ್ಲಿನಿಕ್‌ಗಳ ಕಟ್ಟಡದ ಮುಂದೆ ಬಾಡಿಗೆಯ ಫಲಕಗಳು ಕಾಣಿಸುತ್ತಿವೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಂಗಳೂರು ಶಾಖೆಯಡಿ ನಗರದ 6,300 ವೈದ್ಯರು ನೋಂದಾಯಿತರಾಗಿದ್ದಾರೆ. 

‘ದಿನದ ಎಲ್ಲ ಸಮಯ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಧರಿಸಿ ಸೇವೆ ನೀಡಲು ಸಾಧ್ಯವಿಲ್ಲ. ಸ್ಥಳಾವಕಾಶ ಕೂಡ ಕಡಿಮೆ ಇರುವುದರಿಂದ ರೋಗಿಗಳ ನಡುವೆ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಸೇರಿದಂತೆ ಸರ್ಕಾರದ ವಿವಿಧ ಮಾರ್ಗಸೂಚಿ ಪಾಲನೆ ಸವಾಲಾಗಿದೆ. ರೋಗಿ
ಸೋಂಕಿತನಾಗಿದ್ದಲ್ಲಿ ನಮ್ಮ ಜತೆಗೆ ಕುಟುಂಬದ ಸದಸ್ಯರು ಕೂಡ ಕೋವಿಡ್ ಪೀಡಿತರಾಗುವ ಅಪಾಯವಿದೆ. ರೋಗಿಗಳು ಕೂಡ ಅಷ್ಟಾಗಿ ಚಿಕಿತ್ಸೆಗೆ ಬರುತ್ತಿಲ್ಲ. ಇದರಿಂದ ಕಟ್ಟಡದ ಬಾಡಿಗೆ ಪಾವತಿಸುವುದೂ ಕಷ್ಟ’ ಎಂದು ಗಿರಿನಗರದ ಕ್ಲಿನಿಕ್‌ ಒಂದರ ವೈದ್ಯರೊಬ್ಬರು ತಿಳಿಸಿದರು. 

‘ವೈದ್ಯರಿಗೆ ರಕ್ಷಣೆಯಿಲ್ಲ’

‘ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಹುತೇಕರಿಗೆ ವಯಸ್ಸಾಗಿದೆ. ಅವರಿಗೂ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಇವೆ. ಇಂತಹವರು ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಕೂಡ ಮನುಷ್ಯರೇ ಆಗಿರುವುದರಿಂದ ಕೊರೊನಾ ಸೋಂಕಿನ ಭೀತಿ ಇರಲಿದೆ. ಇನ್ನುಳಿದ ವೈದ್ಯರು ಕ್ಲಿನಿಕ್‌ಗಳಲ್ಲಿ ಸೇವೆ ನೀಡುತ್ತಿದ್ದಾರೆ’ ಎಂದು ಐಎಂಎ ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ್ ತಿಳಿಸಿದರು.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ, ‘ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಈಗ ಕೋವಿಡ್‌ ಹಾಗೂ ಕೋವಿಡೇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಪರಿಣಾಮ ರೋಗಿಗಳಿಗೆ ಸಮಸ್ಯೆ ಆಗುತ್ತಿಲ್ಲ. ಕ್ಲಿನಿಕ್‌ಗಳಲ್ಲಿ ಸ್ಥಳಾವಕಾಶದ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗಲಿವೆ’ ಎಂದರು.

ತಪಾಸಣೆಗೆ ಹಿಂದೇಟು

ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸೂಕ್ತವಾಗಿ ತಪಾಸಣೆ ನಡೆಸದೆಯೇ ಔಷಧಗಳನ್ನು ನೀಡುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಜ್ವರ, ಕೆಮ್ಮ ಸೇರಿದಂತೆ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೆ ಕ್ಲಿನಿಕ್‌ಗೆ ತೆರಳುವ ಸಂಬಂಧ ದೂರವಾಣಿ ಮೂಲಕ ಸಮಯ ಕೇಳಿದಲ್ಲಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಲು ವೈದ್ಯರು ಸೂಚಿಸುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.

‘ಜ್ವರದ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಶ್ರೀನಿವಾಸನಗರದ ಕ್ಲಿನಿಕ್‌ಗೆ ತೆರಳಿದ್ದೆ. ಅಲ್ಲಿನ ವೈದ್ಯರು ಪ್ರವೇಶದ್ವಾರದಲ್ಲಿಯೇ ನಿಲ್ಲುವಂತೆ ಸೂಚಿಸಿ, ಸಮಸ್ಯೆ ಆಲಿಸಿದರು. ಯಾವುದೇ ತಪಾಸಣೆ ನಡೆಸದೆಯೇ ಔಷಧಗಳನ್ನು ಬರೆದುಕೊಟ್ಟರು’ ಎಂದು ವಿದ್ಯಾಪೀಠದ ನಿವಾಸಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು