ಬೆಂಗಳೂರು: ಇಬ್ಬರು ಮಕ್ಕಳಿಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದ ತಾಯಿ ಹಾಗೂ ಆಕೆಯ ಪ್ರಿಯಕರನಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.
ರಾಜರಾಜೇಶ್ವರಿನಗರ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ರೂಪಾ ಕೆ.ಎನ್. ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದಿಸಿದ್ದರು.
‘ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆ, ಇಬ್ಬರು ಮಕ್ಕಳ ಜೊತೆ ವಾಸವಿದ್ದರು. ಅವರ ಪತಿ ಅಪರಾಧ ಪ್ರಕರಣವೊಂದರಲ್ಲಿ ಹಾಸನ ಜೈಲಿನಲ್ಲಿದ್ದರು. ಪರ ಪುರುಷನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ, ಆತನ ಜೊತೆ ಸಹಜೀವನ ನಡೆಸುತ್ತಿದ್ದರು. ಈ ಸಂಗತಿ ಜೈಲಿನಲ್ಲಿದ್ದ ಪತಿಗೆ ಗೊತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ತಾಯಿ ಹಾಗೂ ಪ್ರಿಯಕರ ವಾಸವಿದ್ದ ಮನೆಯಲ್ಲೇ ಮಕ್ಕಳಿಬ್ಬರು ನೆಲೆಸಿದ್ದರು. ಹಾಸನದ ಜೈಲಿನಲ್ಲಿದ್ದ ತಂದೆಯನ್ನು ನೋಡಲು ಮಕ್ಕಳು ಆಗಾಗ ತಾಯಿ ಜೊತೆ ಹೋಗಿ ಬರುತ್ತಿದ್ದರು. ತಾಯಿ ಹಾಗೂ ಪ್ರಿಯಕರನ ನಡುವಿನ ಸಂಗತಿಯನ್ನು ಮಕ್ಕಳು ತಂದೆಗೆ ಹೇಳುತ್ತಿದ್ದರು. ಇದರಿಂದ ತಾಯಿಗೆ ಕೋಪ ಬಂದಿತ್ತು.’ ಎಂದು ಮೂಲಗಳು ತಿಳಿಸಿವೆ.
‘ಮಕ್ಕಳು ಮನೆಗೆ ವಾಪಸು ಬರುತ್ತಿದ್ದಂತೆ ಅವರ ಮೇಲೆ ತಾಯಿ ಹಾಗೂ ಪ್ರಿಯಕರ ಹಲ್ಲೆ ಮಾಡಿದ್ದರು. ಮನೆಯ ವಿಷಯಗಳನ್ನು ತಂದೆ ಬಳಿ ಹೇಳದಂತೆ ತಾಕೀತು ಮಾಡಿ, ಮಕ್ಕಳ ಮೈ ಸುಟ್ಟಿದ್ದರು. ಮಕ್ಕಳ ಮೇಲಿನ ಹಲ್ಲೆಯನ್ನು ಗಮನಿಸಿದ್ದ ನೆರೆಮನೆಯವರು ಠಾಣೆಗೆ ಮಾಹಿತಿ ನೀಡಿದ್ದರು.’
‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತಾಯಿ ಹಾಗೂ ಪ್ರಿಯಕರನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.