ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಜನತಾ ಕೋ–ಆಪರೇಟಿವ್ ಬ್ಯಾಂಕ್‌ಗೆ ₹12.83 ಕೋಟಿ ಲಾಭ

Published 18 ಮೇ 2024, 15:59 IST
Last Updated 18 ಮೇ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ದಿ ಜನತಾ ಕೋ–ಆಪರೇಟಿವ್ ಬ್ಯಾಂಕ್ 2023–24ನೇ ಆರ್ಥಿಕ ವರ್ಷದಲ್ಲಿ ₹ 12.83 ಕೋಟಿ ಲಾಭಗಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಿ.ಎಲ್. ಮರಿಗೌಡ, ‘ಕೋವಿಡ್ ಹಾಗೂ ಇತರ ಕಾರಣಗಳಿಂದ ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ₹ 8.34 ಕೋಟಿ ಕ್ರೋಡೀಕೃತ ನಷ್ಟ ಅನುಭವಿಸಿತ್ತು. ಈಗ ಲಾಭಕ್ಕೆ ಹೊರಳುವ ಮೂಲಕ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಆರ್ಥಿಕ ಪ್ರಗತಿಯು ಶೇ 253ರಷ್ಟಾಗಿದೆ. 2022–23ರಲ್ಲಿ ಶೇ 6.49ರಷ್ಟಿದ್ದ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣ, 2023–24ನೇ ಸಾಲಿನ ಅಂತ್ಯಕ್ಕೆ ಶೇ 1.71ಕ್ಕೆ ಇಳಿಕೆಯಾಗಿದೆ. ಇದರಿಂದ ಬ್ಯಾಂಕಿನ ಆರ್ಥಿಕ ಸ್ಥಿತಿ ಸದೃಢಗೊಳ್ಳಲಿದೆ’ ಎಂದು ತಿಳಿಸಿದರು. 

‘ಅನಗತ್ಯ ಬಡ್ಡಿ ಹೊರೆಯನ್ನು ಕಡಿತಗೊಳಿಸುವುದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಸೇರಿ ವಿವಿಧ ಕ್ರಮಗಳ ಮೂಲಕ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿದೆ. ಬ್ಯಾಂಕ್ 24,089 ಸದಸ್ಯರನ್ನು ಹೊಂದಿದ್ದು, ₹ 33 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. 3,597 ಸದಸ್ಯರು ಸಾಲ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಹೇಳಿದರು. 

‘ಬ್ಯಾಂಕ್ ಕಳೆದ ಮಾರ್ಚ್ ಅಂತ್ಯಕ್ಕೆ ₹445.43 ಕೋಟಿ ಸಾಲ ವಿತರಿಸಿದ್ದು, ಆದ್ಯತಾ ವಲಯಕ್ಕೆ ₹157.35 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ವಲಯಕ್ಕೆ ₹ 130.72 ಕೋಟಿ, ಹಿಂದುಳಿದ ವರ್ಗಗಳಿಗೆ ₹16.72 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಒಟ್ಟಾರೆ ₹742.55 ಕೋಟಿಗಳ ಠೇವಣಿ ಸಂಗ್ರಹಿಸಿದ್ದು, ಗರಿಷ್ಠ ಶೇ 7.10 ಬಡ್ಡಿ (ಹಿರಿಯ ನಾಗರಿಕರಿಗೆ ಶೇ 7.60) ನೀಡಲಾಗುತ್ತಿದೆ. ಸಾಲಗಳ ಮೇಲೆ ಕನಿಷ್ಠ ಶೇ 8 ಬಡ್ಡಿ ವಿಧಿಸುತ್ತಿದ್ದು, ಸಾಲದ ಉದ್ದೇಶಗಳಿಗೆ ಅನುಗುಣವಾಗಿ ಸಾಲದ ಬಡ್ಡಿದರವು ಬದಲಾಗುತ್ತದೆ. 2020ರಲ್ಲಿ ₹89.39 ಕೋಟಿಯಿದ್ದ ಬ್ಯಾಂಕ್‌ನ ಸ್ವಂತ ಬಂಡವಾಳ, ಈಗ ₹147.68 ಕೋಟಿಗೆ ಏರಿಕೆಯಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT