ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಜುನೇದ್‌ನ ಪ್ರೇಯಸಿಯ ವಾಸ ಸ್ಥಳ ಪತ್ತೆ

Published 25 ಜುಲೈ 2023, 4:46 IST
Last Updated 25 ಜುಲೈ 2023, 4:46 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ಸುಲ್ತಾನ್‌ ಪಾಳ್ಯದ ನಿವಾಸಿ ಜುನೇದ್‌ ಅಹಮ್ಮದ್‌ನ ಪ್ರೇಯಸಿ ಇರುವ ಸ್ಥಳವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. 

ತಾನು ತಲೆಮರೆಸಿಕೊಂಡಿದ್ದ ದೇಶದಿಂದಲೇ ಪ್ರೇಯಸಿಗೆ ಜುನೇದ್‌ ಕರೆ ಮಾಡುತ್ತಿದ್ದ ಅಂಶ ತನಿಖೆಯಿಂದ ತಿಳಿದುಬಂದಿದೆ. ಮೊಬೈಲ್‌ ಕರೆಗಳ ಪರಿಶೀಲನೆ ವೇಳೆ ತನಿಖಾಧಿಕಾರಿಗಳಿಗೆ ಈ ವಿಚಾರ ಗೊತ್ತಾಗಿದೆ.

ಆಕೆಯ ಮೂಲಕ ಜುನೇದ್‌ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಿ ಬಂಧನಕ್ಕೆ ತಯಾರಿ ನಡೆಸುತ್ತಿದ್ದಾರೆ. ಅಗತ್ಯಬಿದ್ದರೆ ಆಕೆಗೂ ನೋಟಿಸ್‌ ನೀಡಿ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ. 

ಕೊಲೆ, ದರೋಡೆ ಯತ್ನ ಪ್ರಕರಣದಲ್ಲಿ ಮತ್ತೊಮ್ಮೆ ಪೊಲೀಸರು ಬಂಧಿಸುವ ಸಾಧ್ಯತೆ ತಿಳಿದಿದ್ದ ಜುನೇದ್‌ ಅಹಮ್ಮದ್‌ ವಿದೇಶಕ್ಕೆ ಪರಾರಿಯಾಗಿದ್ದ. ಅಲ್ಲಿಂದಲೇ ಪ್ರೇಯಸಿಗೆ ಕರೆ ಮಾಡುತ್ತಿದ್ದ. ಜುಲೈ 19ರಂದು ತನ್ನ ಸಹಚರರಾದ ಸೈಯದ್‌ ಸುಹೇಲ್‌ ಖಾನ್‌, ಜಾಹೀದ್‌ ತಬ್ರೇಜ್‌, ಸೈಯದ್ ಮುದಾಸೀರ್‌ ಪಾಷಾ, ಮಹಮ್ಮದ್‌ ಫೈಜಲ್ ರಬ್ಬಾನಿ ಹಾಗೂ ಮಹಮ್ಮದ್ ಊಮರ್‌ನ ಬಂಧನದ ಮಾಹಿತಿ ತಿಳಿದ ಬಳಿಕ ಬೆಂಗಳೂರಿನಲ್ಲಿರುವ ಪ್ರೇಯಸಿಗೆ ಕರೆ ಮಾಡುವುದನ್ನು ಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.

ದುಬೈನಲ್ಲಿ ಕೆಲಸಕ್ಕೆ ತೆರಳಿರುವುದಾಗಿ ಜುನೇದ್‌ ಪ್ರೇಯಸಿಗೆ ಹೇಳಿದ್ದ. ತನ್ನ ಉಗ್ರ ಚಟುವಟಿಕೆಗಳು ಹಾಗೂ ದಾಖಲಾಗಿರುವ ದರೋಡೆ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಆಕೆಗೂ ಮಾಹಿತಿ ನೀಡಿರಲಿಲ್ಲ. ಆತನ ವರ್ತನೆಗಳು ಹೇಗಿದ್ದವು ಎಂಬುದನ್ನು ಪ್ರೇಯಸಿಯಿಂದ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜುನೇದ್‌ ದುಬೈನಲ್ಲಿ ನೆಲೆಸಿರುವುದು ದೃಢಪಟ್ಟಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ಸಹಕಾರದಲ್ಲಿ ಆತನನ್ನು ಬಂಧಿಸಿ ನಗರಕ್ಕೆ ಕರೆ ತರಲು ಪ್ರಯತ್ನಗಳು ನಡೆಯುತ್ತಿವೆ. ಆತನ ಬಂಧನದ ಬಳಿಕವಷ್ಟೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಟಿ.ನಾಸೀರ್‌ನನ್ನು ವಿಚಾರಣೆಗೋಸ್ಕರ ಕಸ್ಟಡಿಗೆ ಪಡೆಯಲು ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT