ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಯುವ ಸಾಧಕರು 2020 ಪ್ರಶಸ್ತಿ ಪ್ರದಾನ| ಪರಿಶ್ರಮದ ದಾರಿ-ಪುರಸ್ಕಾರದ ಗರಿ

Last Updated 13 ಫೆಬ್ರುವರಿ 2020, 19:55 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬಹುಪಾಲು ಜನರು ವ್ಯವಸ್ಥೆಯನ್ನು ದೂಷಿಸುವುದರಲ್ಲೇ ಕಾಲಕಳೆಯುವಾಗ, ತಮ್ಮ ಹೊಸ ಆಲೋಚನೆಗಳ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸಿದವರು ಇವರು. ನಂಬಿದ ಕಾಯಕವನ್ನು ಸದ್ದಿಲ್ಲದಂತೆ ಮಾಡುತ್ತಲೇ ಒಂದು ತಲೆಮಾರಿಗೆ ಪ್ರೇರಕ ಶಕ್ತಿಯಾದವರು. ಹೊಸ ವರ್ಷದ ಹೊಸ್ತಿಲಲ್ಲಿ ‘ಯುವ ಸಾಧಕರು–2020’ ಪ್ರಶಸ್ತಿಗೆ ಇಂತಹ ಬಹುಮುಖಿ ಪ್ರತಿಭೆಗಳನ್ನು ಆಯ್ಕೆ ಮಾಡುವ ಮೂಲಕ ಸಮಾಜಕ್ಕೆ ಇವರು ನೀಡಿರುವ ಕೊಡುಗೆಗಳನ್ನು ‘ಪ್ರಜಾವಾಣಿ’ ಗುರುತಿಸಿ, ಪುರಸ್ಕರಿಸಿತು.

ಭಾಷೆ, ಕೃಷಿ, ಕ್ರೀಡೆ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ, ಸಂಶೋಧನೆ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಗ್ಗುರುತು ಮೂಡಿಸಿದವರೆಲ್ಲ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಕಲೆತಿದ್ದರು. ತಮ್ಮ ಕೆಲಸಗಳ ಬಗ್ಗೆ, ಹೊಸ ಆಲೋಚನೆಗಳ ಬಗ್ಗೆ, ಅದನ್ನು ಸಾಕಾರಗೊಳಿಸುವಾಗ ಎದುರಾದ ಅಡ್ಡಿ ಆತಂಕಗಳ ಬಗ್ಗೆ ಈ ಯುವ ಸಾಧಕರು ಇತರರೊಂದಿಗೂ ಚರ್ಚಿಸಿದರು. ಪರಸ್ಪರ ಶುಭಕೋರುವ ಮೂಲಕ ತಮ್ಮ ಸಾಧನೆಗೆ ಮನ್ನಣೆ ಸಿಕ್ಕ ಸಂಭ್ರಮ ಹಂಚಿಕೊಂಡರು. ‘ತಮ್ಮ ಕೆಲಸ ಸಾರ್ಥಕವಾಯಿತು’ ಎಂಬ ಭಾವ ಅವರೆಲ್ಲರ ಮೊಗದಲ್ಲೂ ಎದ್ದು ಕಾಣಿಸುತ್ತಿತ್ತು.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ‘ಪ್ರಜಾವಾಣಿ ಯುವ ಸಾಧಕರು 2020’ ಪ್ರಶಸ್ತಿಗೆ ಆಯ್ಕೆಯಾದವರಿಗೆ ಕನ್ನಡದ ಹಿರಿಯ ಚಿತ್ರ ನಟ ದೇವರಾಜ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ‘ಪುರಸ್ಕೃತರ ಸಾಧನೆಗಳು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ’ ಎಂದು ಹಾರೈಸಿದರು.

ಮಧ್ಯಪ್ರದೇಶದಿಂದ ಬಂದು ನಾಲ್ಕೇ ವರ್ಷಗಳಲ್ಲಿ ಸುಲಲಿತವಾಗಿ ಮಾತನಾಡುವಷ್ಟರ ಮಟ್ಟಿಗೆ ಕನ್ನಡವನ್ನು ಕಲಿತ ಐಪಿಎಸ್‌ ಅಧಿಕಾರಿ ಇಶಾಪಂತ್‌, ಕರುನಾಡು ಕಟ್ಟಿ ಕೊಟ್ಟ ಖುಷಿಯ ಕ್ಷಣಗಳನ್ನು ಹಂಚಿಕೊಂಡರು. ಇಲ್ಲಿನ ಸಂಸ್ಕೃತಿಯನ್ನು ಕನ್ನಡಿಗರ ಹೃದಯವೈಶಾಲ್ಯವನ್ನು ಕೊಂಡಾಡಿದರು.

ಯುವಜನರ ಸಾಧನೆಯನ್ನು ಗುರುತಿಸುವ ಕಾರ್ಯ ಹೇಗೆ ಹೊಸ ಪೀಳಿಗೆಯವರಲ್ಲಿ ಹುಮ್ಮಸ್ಸು ತುಂಬಬಲ್ಲುದು ಎಂಬುದನ್ನು ಪ್ರಶಸ್ತಿಯ ತೀರ್ಪುಗಾರರಾಗಿದ್ದ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ.ವೈ.ಸಿ.ಕಮಲಾ ವಿವರಿಸಿದರು.

ಪ್ರಶಸ್ತಿಗೆ ಶಿಫಾರಸುಗೊಂಡ 600ಕ್ಕೂ ಹೆಚ್ಚು ಮಂದಿಯಲ್ಲಿ 60 ಹೆಸರುಗಳ ಪಟ್ಟಿ ತಯಾರಿಸಿ, ಅವರಲ್ಲಿ 20 ಸಾಧಕರನ್ನು ಆರಿಸುವ ಕಾರ್ಯ ತುಂಬಾ ಕ್ಲಿಷ್ಟವಾಗಿತ್ತು ಎಂದರು.

‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು, ‘ಯುವಜನರ ಜೊತೆ ಉತ್ತಮ ಸಂಬಂಧ ಮುಂದುವರಿಸುವ ಉದ್ದೇಶದಿಂದಲೇ ‘ಯುವ ಸಾಧಕರು’ ಪ್ರಶಸ್ತಿ ಆರಂಭಿಸಿದ್ದೇವೆ. ಈ ಗೌರವಕ್ಕೆ ಪಾತ್ರರಾದವರ ಸಾಧನೆ ಇತರರಿಗೂ ಪ್ರೇರಣೆಯಾಗಲಿದೆ’ ಎಂದರು.

ಭೌತ ವಿಜ್ಞಾನಿ ಮಾನಸ್‌ ಕುಲಕರ್ಣಿ ಪರವಾಗಿ ಅವರ ಚಿಕ್ಕಪ್ಪ ಎಸ್‌.ಜಿ.ಕುಲಕರ್ಣಿ, ಬೌನ್ಸ್‌ ಸಂಸ್ಥೆಯ ವಿವೇಕಾನಂದ ಹಳ್ಳಿಕೆರೆ ಅವರ ಪರವಾಗಿ ಅಂಕಿತ್‌ ಆಚಾರ್ಯ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ನಾಗಶ್ರೀ ಜಿ.ಎಸ್‌. ಹಾಗೂ ರಾಘವೇಂದ್ರ ದೀವಗಿ ಹಾಗೂ ತೀರ್ಪುಗಾರರಾಗಿದ್ದ ಮುನ್ನೋಟ ಬಳಗದ ವಸಂತ ಶೆಟ್ಟಿ ಅವರು ಕಾರಣಾಂತರಗಳಿಂದ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ಯುವಗಾಯಕ ಚಿನ್ಮಯ್‌ ಅತ್ರೇಯಸ್‌ ಮಧುರ ಕಂಠದಿಂದ ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ...’ ಹಾಡು ಈ ಸಮಾರಂಭಕ್ಕೆ ಅನ್ವರ್ಥವಾಗುವಂತಿತ್ತು. ಮುಸ್ಸಂಜೆ ವೇಳೆ ನಡೆದ ಈ ಸಮಾರಂಭದ ತುಂಬೆಲ್ಲ ಯುವೋತ್ಸಾಹ ಮೇಳೈಸಿತ್ತು.

‘ಕನ್ನಡಿಗರು ಎಷ್ಟು ಅದ್ಭುತ’:‘ಭಾಷೆ ಸಂಸ್ಕೃತಿಯ ಹೆಬ್ಬಾಗಿಲು. ಜನ್ಮಭೂಮಿ ಮಧ್ಯಪ್ರದೇಶವಾದರೂ ಕರ್ನಾಟಕವನ್ನು ಕರ್ಮಭೂಮಿಯನ್ನಾಗಿ ಆರಿಸಿಕೊಳ್ಳುವ ಮೂಲಕ, ಕನ್ನಡ ಸಂಸ್ಕೃತಿ,

ಪರಂಪರೆಯನ್ನು ತಿಳಿದುಕೊಳ್ಳುವ ಸದವಕಾಶ ನನಗೆ ಒದಗಿ ಬಂದಿದೆ. ಇದೊಂದು ಎಷ್ಟು ಅದ್ಭುತ ರಾಜ್ಯ, ಇಲ್ಲಿನ ಜನರು ಎಷ್ಟು ಅದ್ಭುತ. ನನ್ನ ಮನೆ ಈಗ ಕರ್ನಾಟಕ. ನನಗೆ ಬೇರೆ ಮನೆ ಇಲ್ಲ’ ಎಂದು ಐಪಿಎಸ್‌ ಅಧಿಕಾರಿ ಇಶಾಪಂತ್‌ ಕೊಂಡಾಡಿದರು.

‘ನಾನು ಇಲ್ಲಿಗೆ ಬರುವ ಮುನ್ನ ಕನ್ನಡದ ಧ್ವನಿ ಹೇಗಿದೆ, ಲಿಪಿ ಹೇಗಿದೆ ಎಂದೇ ತಿಳಿದಿರಲಿಲ್ಲ. ಕನ್ನಡ ಕಲಿಯುವ ಅವಕಾಶ ಸಿಕ್ಕಿದ ನಾನೇ ಅದೃಷ್ಟವಂತೆ. ನಾನು ಬೇರೆ ಪ್ರದೇಶದಿಂದ ಇಲ್ಲಿಗೆ ಬಂದೆ ಎಂದು ಯಾವತ್ತೂ ಅನಿಸಿಯೇ ಇಲ್ಲ. ಏಕೆಂದರೆ ಇಲ್ಲಿನ ಜನ ಅಷ್ಟು ಪ್ರೀತಿ ತೋರಿಸಿದ್ದಾರೆ. ನನಗೆ ನೀವು ನೀಡಿರುವ ಪ್ರಶಸ್ತಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡಿದೆ’ ಎಂದರು.

‘ಸಾಧಿಸುವುದಕ್ಕೆ ಇನ್ನೂ ಬಹಳಷ್ಟಿದೆ’:‘ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರು ಮಾ

ಡಿರುವ ಸಾಧನೆ ಕೇಳಿದಾಗ ರೋಮಾಂಚನವಾಗುತ್ತಿದೆ. ಸಾಧಿಸುವುದಕ್ಕೆ ಇನ್ನೂ ಬಹಳಷ್ಟಿದೆ ಎಂಬ ಭಾವನೆ ನನ್ನಲ್ಲಿ ಮೂಡಿದೆ’ ಎಂದು 18 ಸಾವಿರಕ್ಕೂ ಹೆಚ್ಚು ಮಂದಿಗೆ ಕನ್ನಡ ಕಲಿಸಿರುವ ಅನುಪ್‌ ಮಯ್ಯ ಅಭಿಪ್ರಾಯಪಟ್ಟರು.

‘ಒಬ್ಬೊಬ್ಬರ ಸಾಧನೆಯೂ ರೋಮಾಂಚಕ’

‘ಸುಂದರ ಸಂಜೆಯ ಈ ಪುಟ್ಟ ಸಭೆಯ ತುಂಬಾ ಸಾಧಕರಿದ್ದಾರೆ. ಎಲ್ಲರೂ ಅದ್ಭುತ ಸಾಧನೆ ಮಾಡಿದವರು. ಇವರನ್ನೆಲ್ಲ ನೋಡುವಾಗ ರೋಮಾಂಚನ ಆಗುತ್ತದೆ’ ಎಂದು ಚಿತ್ರನಟ ದೇವರಾಜ್‌ ಹೇಳಿದರು.

‘ಪ್ರಜಾವಾಣಿ ಹೆಸರು ಶಾಲಾ ದಿನಗಳಿಂದಲೂ ನನಗೆ ಪರಿಚಿತ. ಇವತ್ತಿಗೂ ಅದೇ ಪ್ರತಿಷ್ಠೆಯನ್ನು ಪತ್ರಿಕೆ ಉಳಿಸಿಕೊಂಡಿದೆ. ಭಾಷೆಯಲ್ಲಿ, ಹೇಳುವ ವಿಚಾರಗಳಲ್ಲಿ, ತನ್ನತನ ಉಳಿಸಿಕೊಂಡು ಕನ್ನಡಿಗರ ಮನಸ್ಸು ಗೆದ್ದ ಪತ್ರಿಕೆ ಇದು’ ಎಂದು ಕೊಂಡಾಡಿದರು.

‘ಪ್ರಜಾವಾಣಿಗೆ ವಯಸ್ಸಾಗಿರಬಹುದು. ಆದರೆ, ಅದರ ಆಲೋಚನೆಗಳಿಗೆ ವಯಸ್ಸಾಗಿಲ್ಲ ಎಂಬುದನ್ನು ಯುವಪೀಳಿಗೆಯ ಸಾಧನೆ ಗುರುತಿಸಿ ಅವರ ಜೊತೆ ಸಂಬಂಧ ಇಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವೇ ಸಾಕ್ಷಿ. ಪ್ರಜಾವಾಣಿ ಹೀಗೆಯೇ ಮುಂದುವರಿಯುತ್ತದೆ ಎಂಬ ನಂಬಿಕೆಯನ್ನು ಈ ಕಾರ್ಯಕ್ರಮ ಮೂಡಿಸಿದೆ. ಈ ಕಾರ್ಯಕ್ರಮ ನನ್ನ ನೆನಪಿನಲ್ಲಿ ಸದಾ ಹಸಿರಾಗಿ ಉಳಿಯುತ್ತದೆ’ ಎಂದರು.

‘ಹೊಸತನ್ನು ಸಾಧಿಸುವ ತುಡಿತ ಫಲ ನೀಡಲಿದೆ’

‘ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲರಲ್ಲೂ ಹೊಸ ತುಡಿತವಿತ್ತು. ಏನಾದರೂ ವಿಶೇಷವಾದುದನ್ನು ಸಾಧಿಸಿ, ಸಮಾಜಕ್ಕೆ ಕಾಣಿಕೆ ನೀಡಬೇಕು ಎಂಬ ತುಡಿತವದು. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅತ್ಯುತ್ತಮ ಫಲ ನೀಡಲಿದೆ’ ಎಂದು ತೀರ್ಪುಗಾರ್ತಿ ಪ್ರೊ. ವೈ.ಸಿ.ಕಮಲಾ ಅಭಿಪ್ರಾಯಪಟ್ಟರು.

‘ವಿನೂತನವಾದುದ್ದನ್ನು ಮಾಡಿ ಗೆಲ್ಲಬಹುದು ಎಂಬುದನ್ನು ಈ ಸಾಧಕರು ತೋರಿಸಿಕೊಟ್ಟಿದ್ದಾರೆ. ಅವರೆಲ್ಲರ ಸಾಧನೆ ಮನ್ನಣೆಗೆ ಅರ್ಹವಾದುದು. ಕೆಲವು ಪ್ರಶಸ್ತಿಗಳಿಗೆ ಸಾಧಕರನ್ನು ಗುರುತಿಸುವಾಗ ಅವರಿಗೆ ಇಂತಿಷ್ಟು ವಯಸ್ಸಾಗಿರಲೇಬೇಕು ಎಂಬ ಮಾನದಂಡ ಅನುಸರಿಸಲಾಗುತ್ತದೆ. ನಿಜವಾದ ಸಾಧಕರನ್ನು ಬಿಟ್ಟುಬಿಡಲಾಗುತ್ತದೆ. ಈ ಕೊರತೆಯನ್ನು ಪ್ರಶಸ್ತಿ ನೀಗಿಸಿದೆ. ನಮ್ಮದು ಯುವಭಾರತ. ಒಟ್ಟು ಜನಸಂಖ್ಯೆಯಲ್ಲಿ ಶೇ 60ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಯುವಜನರ ಸಾಧನೆ ಗುರುತಿಸಿದ್ದು ವಿಶೇಷ’ ಎಂದರು.

‘ಪತ್ರಿಕೋದ್ಯಮದ ಮೂಲ ಆಶಯದ ಗಟ್ಟಿಬೇರನ್ನು ತನ್ನಲ್ಲಿರಿಸಿಕೊಂಡು ಹೊಸತಾಗಿ ಏನನ್ನು ಕೊಡಬಹುದು ಎಂಬ ನಿಟ್ಟಿನಲ್ಲಿ ಯೋಚಿಸುವ ಪತ್ರಿಕೆ ಇದು. ಇದು ಕೇವಲ ವೃತ್ತಪತ್ರಿಕೆ ಮಾತ್ರವಲ್ಲ. ಇದು ಒಂದು ಭಾವನೆ. ಈ ಪತ್ರಿಕೆ ಓದಿದಾಗ ಸಿಗುವ ಭಾವ ವಿಶಿಷ್ಟ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT