ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲಸದ ಮನೆಯಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದ: ಡೇಟಿಂಗ್ ಆ್ಯಪ್‌ ಮಹಿಳೆಯಿಂದ ಸಹಕಾರ

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಿತಳಾದ ಮಹಿಳೆಯಿಂದ ಕೃತ್ಯಕ್ಕೆ ಸಹಕಾರ
Published : 9 ಆಗಸ್ಟ್ 2024, 16:17 IST
Last Updated : 9 ಆಗಸ್ಟ್ 2024, 16:17 IST
ಫಾಲೋ ಮಾಡಿ
Comments

ಬೆಂಗಳೂರು: ತನ್ನ ತಾಯಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ವ್ಯಕ್ತಿ ಹಾಗೂ ಕೃತ್ಯದಲ್ಲಿ ಆತನಿಗೆ ಸಹಕರಿಸಿದ್ದ ಮಹಿಳೆಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾರಾಯಣಸ್ವಾಮಿ ಹಾಗೂ ನವೀನಾ ಎಂಬುವರನ್ನು ಬಂಧಿಸಿ, ₹ 20.74 ಲಕ್ಷ ಮೌಲ್ಯದ 333 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ಐ.ಟಿ. ಕಂಪನಿ ಉದ್ಯೋಗಿ ಲಕ್ಕಸಂದ್ರದ ನಿವಾಸಿ ಸೈಯದ್ ರೆಹಮಾನ್ ಅವರು ಕುಟುಂಬ ಸಮೇತ ದುಬೈನಲ್ಲಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಆರೋಪಿ ನಾರಾಯಣಸ್ವಾಮಿ ಅವರ ತಾಯಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಿದ್ದಾಪುರದಲ್ಲಿ ವಾಸವಾಗಿರುವ ತಾಯಿಗೆ ಹೆಚ್ಚು ಕೆಲಸವಿದ್ದ ಸಂದರ್ಭದಲ್ಲಿ ಮಾತ್ರ ಈತ​ ರೆಹಮಾನ್‌ ಮನೆಗೆ ಹೋಗುತ್ತಿದ್ದ. ಬಳಿಕ ತನ್ನ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾರಾಯಣಸ್ವಾಮಿಗೆ ಇಬ್ಬರು ಮಕ್ಕಳಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಪತ್ನಿಗೆ ಚೆನ್ನೈನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾನೆ. ಆರೋಪಿ ನವೀನಾ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ವರ್ಷದ ಹಿಂದೆ ‘ಡೇಟಿಂಗ್ ಆ್ಯಪ್‌’ನಲ್ಲಿ ನವೀನಾ ಮತ್ತು ನಾರಾಯಣಸ್ವಾಮಿ ಪರಿಚಿತರಾಗಿದ್ದರು. ಇಬ್ಬರೂ ಮದುವೆಯಾಗಿದ್ದಾರೆ. ಜೀವನ ನಿರ್ವಹಣೆಗೆ ಬೇಕಾದ ಹಣ ಸಂಪಾದಿಸಲು ಕಳ್ಳತನ ಮಾಡುವಂತೆ ನಾರಾಯಣಸ್ವಾಮಿಗೆ ನವೀನಾ ಸೂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈಗೆ ತೆರಳುವ ಮುನ್ನ ಮಾಲೀಕರು ಬೀಗದ ಕೀ ಅನ್ನು ತನ್ನ ಸಂಬಂಧಿಕರಿಗೆ ಕೊಟ್ಟಿದ್ದರು. ಮನೆ ಕೆಲಸದಾಕೆ ನಿತ್ಯ ಬಂದು ಮನೆ ಸ್ವಚ್ಛ ಮಾಡುತ್ತಿದ್ದರು. ಆಗ ತಾಯಿ ಜತೆ ಬಂದಿದ್ದ ನಾರಾಯಣಸ್ವಾಮಿ, ಮನೆ ಸ್ವಚ್ಛ ಮಾಡುವ ವೇಳೆ ಚಿನ್ನಾಭರಣ ಕಳವು ಮಾಡಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ಆಭರಣಗಳನ್ನು ಎರಡನೇ ಪತ್ನಿಗೆ ನೀಡಿರುವುದಾಗಿ ತಿಳಿಸಿದ್ದ. ಆಕೆ ಗಿರವಿ ಇಟ್ಟಿದ್ದ 135 ಗ್ರಾಂ. ತೂಕದ ಚಿನ್ನದ  ಸರವನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೇ  ನವೀನಾ ಸಂಬಂಧಿಕರು ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದ ಸುಮಾರು 198 ಗ್ರಾಂ. ತೂಕದ ಚಿನ್ನಾಭರಣವನ್ನು ವಶ‍‍ಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

ನವೀನಾ
ನವೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT