ಪುಸ್ತಕಗಳಿಗಿಂತ ದೊಡ್ಡ ಶಿಕ್ಷಕರಿಲ್ಲ:ರಮೇಶ್ ಅರವಿಂದ್

ಬೆಂಗಳೂರು: ‘ನಮ್ಮ ಮೇಲೆ ಪ್ರಭಾವ ಬೀರುವ ಮೇಷ್ಟ್ರುಗಳು ಕೆಲವೇ ವರ್ಷಗಳಲ್ಲಿ ನಮ್ಮಿಂದ ದೂರವಾಗುತ್ತಾರೆ. ಅದೇ ಪುಸ್ತಕವೆಂಬ ಮೇಷ್ಟ್ರು ಸದಾ ನಮ್ಮೊಂದಿಗೆ ಇರುತ್ತವೆ. ಪುಸ್ತಕಕ್ಕಿಂತ ದೊಡ್ಡ ಶಿಕ್ಷಕರು ಬೇರೆಯಿಲ್ಲ’ ಎಂದು ಚಲನಚಿತ್ರ ನಟ ರಮೇಶ್ ಅರವಿಂದ್ ಹೇಳಿದರು.
ಎಚ್‌ಎಸ್ಆರ್ ಬಡಾವಣೆಯಲ್ಲಿ ನಿರ್ಮಾಣವಾದ ಸಪ್ನ ಬುಕ್ ಹೌಸ್‌ನ 21ನೇ ಮಳಿಗೆಯನ್ನು ಬುಧವಾರ ಉದ್ಘಾಟಿಸಿದ ಅವರು, ‘ಸರಿಯಾದ ಪುಸ್ತಕವನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಯೋಚನೆ, ಮನಸ್ಸು ಬದಲಾಗುತ್ತದೆ. ಸೂಕ್ಷ್ಮವಾಗಿ ಯೋಚನೆ ಮಾಡಬಲ್ಲ ಲೇಖಕ ಹಾಗೂ ಅಷ್ಟೇ ಸೂಕ್ಷ್ಮ ಮನಸ್ಸಿನ ಓದುಗನ ಸಂಯೋಜನೆ ಅದ್ಭುತವನ್ನು ಸೃಷ್ಟಿಸುತ್ತದೆ’ ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಪುಸ್ತಕಗಳಿಗೆ ಜಗತ್ತನ್ನು ಬದಲಾಯಿಸುವ ಶಕ್ತಿಯಿದೆ. ಆದ್ದರಿಂದ ಪುಸ್ತಕವನ್ನು ಭಾವನಾತ್ಮಕವಾಗಿ ನೋಡುವ ಜತೆಗೆ ವೃತ್ತಿಯಾಗಿಯೂ ಬೆಳೆಸಬೇಕು. ಒಂದು ಬಡಾವಣೆ, ಪ್ರದೇಶದ ಶ್ರೀಮಂತಿಕೆಯನ್ನು ಅಲ್ಲಿರುವ ಪುಸ್ತಕ ಭಂಡಾರಗಳ ಸಂಖ್ಯೆಯಿಂದ ಅಳೆಯಬೇಕು. ಪ್ರತಿ ಬಡಾವಣೆಗೂ ಪುಸ್ತಕ ಮಳಿಗೆ ಬರಬೇಕು’ ಎಂದು ಹೇಳಿದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ‘ಇಡೀ ರಾಜ್ಯದಲ್ಲಿ 23 ಸಾವಿರ ಮದ್ಯದಂಗಡಿಗಳಿವೆ. ಆದರೆ, ಕೇವಲ 61 ಪುಸ್ತಕ ಮಳಿಗೆಗಳಿವೆ. ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ಕೋಲಾರದಲ್ಲಿ ಒಂದೇ ಒಂದು ಪುಸ್ತಕ ಮಳಿಗೆ ಇಲ್ಲ. ಉತ್ತರ ಕನ್ನಡದಲ್ಲಿ ಒಂದೇ ಒಂದು ಪುಸ್ತಕದ ಮಳಿಗೆಯಿದೆ. ಬೆಂಗಳೂರಿನ ರಸ್ತೆ ರಿಪೇರಿಗೆ ವರ್ಷಕ್ಕೆ ₹ 800 ಕೋಟಿ ಖರ್ಚು ಮಾಡುವ ರಾಜ್ಯ ಸರ್ಕಾರ, ಪುಸ್ತಕ ಖರೀದಿಗೆ ₹ 15 ಕೋಟಿ ಅನುದಾನ ನೀಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.