ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕ್ಲಿನಿಕ್: ಶುಶ್ರೂಷಕರ ಹುದ್ದೆ ಖಾಲಿ!

ಕೆಲವೆಡೆ ಪ್ರಯೋಗಾಲಯ ತಂತ್ರಜ್ಞರ ಹುದ್ದೆಗೆ ನಡೆಯದ ನೇಮಕಾತಿ
Published 8 ಜುಲೈ 2023, 0:30 IST
Last Updated 8 ಜುಲೈ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ನಮ್ಮ ಕ್ಲಿನಿಕ್‌ಗಳಲ್ಲಿ’ ಕೆಲವೆಡೆ ಶುಶ್ರೂಷಕರು ಹಾಗೂ ಪ್ರಯೋಗಾಲಯದ ತಂತ್ರಜ್ಞರ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. ಇದರಿಂದಾಗಿ ಈ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ವ್ಯತ್ಯಯವಾಗುತ್ತಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 225 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 108 ಕ್ಲಿನಿಕ್‌ಗಳಿಗೆ ಮೊದಲ ಹಂತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ನಂತರ ಕಾರ್ಯಾರಂಭಿಸಿದ್ದವು. ಇವುಗಳಲ್ಲಿ ಬಿಬಿಎಂಪಿಯ ಪೂರ್ವ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಕ್ಲಿನಿಕ್‌ಗಳಲ್ಲಿ ಶುಶ್ರೂಷಕರ ಹುದ್ದೆ ಖಾಲಿಯಿವೆ. ಇದರಿಂದಾಗಿ ಈ ಕೇಂದ್ರಗಳಲ್ಲಿ ವೈದ್ಯರೇ ಶುಶ್ರೂಷಕರ ಕೆಲಸವನ್ನೂ ನಿಭಾಯಿಸಬೇಕಿದೆ. ಬೊಮ್ಮನಹಳ್ಳಿ ವಲಯದಲ್ಲಿನ ಹೆಚ್ಚಿನ ಕ್ಲಿನಿಕ್‌ಗಳಲ್ಲಿ ಪ್ರಯೋಗಾಲಯದ ತಂತ್ರಜ್ಞರ ಹುದ್ದೆಗೆ ನೇಮಕಾತಿ ನಡೆದಿಲ್ಲ. ಹೀಗಾಗಿ, ಶುಶ್ರೂಷಕರೇ ಪ್ರಯೋಗಾಲಯವನ್ನೂ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕ ಹುದ್ದೆಗೆ ಬಿಎಸ್‌ಸಿ, ನರ್ಸಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರನ್ನು ನೇಮಿಸಿಕೊಳ್ಳಲಾಗುತ್ತದೆ. ವೈದ್ಯರ ಗೈರು ಹಾಜರಿಯಲ್ಲಿ ಶುಶ್ರೂಷಕರೇ ಲಕ್ಷಣ ಆಧರಿಸಿ, ಔಷಧ ನೀಡುತ್ತಿದ್ದಾರೆ. ಗರ್ಭಿಣಿಯರಿಗೆ ಸೂಕ್ತ ಆರೈಕೆ ಮಾಡಿ, ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ. ಅವರಿಗೆ ₹ 15,750 ನಿಗದಿಪಡಿಸಲಾಗಿದೆ. ಇದರಿಂದಾಗಿ ಈ ಹುದ್ದೆಗೆ ಅರ್ಹರು ನಿರಾಸಕ್ತಿ ತಾಳಿದ್ದಾರೆ.

30ಕ್ಕೂ ಅಧಿಕ ಕ್ಲಿನಿಕ್‌ಗಳಲ್ಲಿ ಖಾಲಿ: ಬಿಬಿಎಂಪಿ ಮಾಹಿತಿ ಪ್ರಕಾರ 30ಕ್ಕೂ ಅಧಿಕ ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕರ ಹುದ್ದೆ ಖಾಲಿಯಿದೆ. ಬೊಮ್ಮನಹಳ್ಳಿ ವಲಯದಲ್ಲಿ ಜರಗನಹಳ್ಳಿ, ಹೊಂಗಸಂದ್ರ ಹಾಗೂ ಚುಂಚಘಟ್ಟದ ಕ್ಲಿನಿಕ್‌ಗಳಲ್ಲಿ ಶುಶ್ರೂಷಕರಿಲ್ಲ. ಪೂರ್ವ ವಲಯದಲ್ಲಿ ಸಿ.ವಿ. ರಾಮನ್‌ ನಗರ, ಹೆಬ್ಬಾಳ, ಮುನೇಶ್ವರ ನಗರ, ಕಾಚರಕನಹಳ್ಳಿ, ಮಾರುತಿ ಸೇವಾ ನಗರ, ಜೋಗುಪಾಳ್ಯ ಸೇರಿ ಹಲವೆಡೆ ಹುದ್ದೆ ಖಾಲಿಯಿದೆ. ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್‌, ದೊಡ್ಡನೆಕ್ಕುಂದಿ ಸೇರಿ ಕೆಲವಡೆ ಹಾಗೂ ಬೆಂಗಳೂರು ದಕ್ಷಿಣದ ಶ್ರೀನಿವಾಸ ನಗರ ಸೇರಿ ಕೆಲ ಕ್ಲಿನಿಕ್‌ಗಳಿಗೆ ಶುಶ್ರೂಷಕರು ನೇಮಕಗೊಂಡಿಲ್ಲ. 

‘ವೈದ್ಯರು ರಜೆ ಇದ್ದಾಗ ನಾವೇ ಕ್ಲಿನಿಕ್‌ಗಳನ್ನು ನಿರ್ವಹಿಸಬೇಕಾಗುತ್ತದೆ. ಸರ್ಕಾರ ನಿಗದಿ ಪಡಿಸಿರುವ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಅನಿವಾರ್ಯ ಕಾರಣಗಳಿಂದ ಈ ಉದ್ಯೋಗವನ್ನು ಆ‌ಯ್ಕೆ ಮಾಡಿಕೊಂಡಿದ್ದೇವೆ. ಕೆಲವರು ಉದ್ಯೋಗ ತ್ಯಜಿಸಿ, ಬೇರೆಡೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ವಲಯದ ನಮ್ಮ ಕ್ಲಿನಿಕ್‌ ಒಂದರ ಶುಶ್ರೂಷಕರೊಬ್ಬರು ತಿಳಿಸಿದರು.  

35ಕ್ಕೂ ಅಧಿಕ ಕೇಂದ್ರಗಳಲ್ಲಿ ಖಾಲಿ

ನಗರದಲ್ಲಿನ ನಮ್ಮ ಕ್ಲಿನಿಕ್‌ಗಳಲ್ಲಿ 35ಕ್ಕೂ ಅಧಿಕ ಕೇಂದ್ರಗಳಲ್ಲಿ ಪ್ರಯೋಗಾಲಯ ತಂತ್ರಜ್ಞರ ಹುದ್ದೆ ಖಾಲಿಯಿದೆ. ಬೆಂಗಳೂರು ದಕ್ಷಿಣ ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದ ಹೆಚ್ಚಿನ ಕ್ಲಿನಿಕ್‌ಗಳಲ್ಲಿ ಈ ಹುದ್ದೆಗೆ ನೇಮಕಾತಿ ನಡೆದಿಲ್ಲ. ಆರ್‌.ಆರ್. ನಗರದಲ್ಲಿನ ಕೆಲ ಕ್ಲಿನಿಕ್‌ಗಳಲ್ಲಿಯೂ ಈ ಹುದ್ದೆ ಖಾಲಿಯಿದೆ. ಇದರಿಂದಾಗಿ ಶುಶ್ರೂಷಕರೇ ರಕ್ತ ಸೇರಿ ವಿವಿಧ ಪರೀಕ್ಷೆ ಮಾಡುತ್ತಿದ್ದಾರೆ. ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ ಮಾಸಿಕ ₹ 14609 ನಿಗದಿಪಡಿಸಲಾಗಿದೆ. ಈ ಹುದ್ದೆಗೆ ಪ್ರಯೋಗಶಾಲೆ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು.

ನಗರದಲ್ಲಿನ ಎಲ್ಲಾ ನಮ್ಮ ಕ್ಲಿನಿಕ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಶುಶ್ರೂಷಕ ಹುದ್ದೆ ಖಾಲಿ ಇರುವ ಬಗ್ಗೆ ಪರಿಶೀಲಿಸಲಾಗುವುದು.
-ಡಾ.ಕೆ.ವಿ. ತ್ರಿಲೋಕಚಂದ್ರ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT