ಭಾನುವಾರ, ಮೇ 22, 2022
29 °C

ಜಿಲ್ಲೆಗೊಂದು ‘ಫುಡ್‌ ಪಾರ್ಕ್‌’ ಸ್ಥಾಪನೆಗೆ ಚಿಂತನೆ: ಕೃಷಿ ಸಚಿವ ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಿಲ್ಲೆಗೊಂದು ‘ಫುಡ್‌ ಪಾರ್ಕ್‌’ ನಿರ್ಮಿಸಬೇಕೆಂದು ಕೈಗಾರಿಕೋದ್ಯಮಿಗಳು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಚಿಂತನೆ ನಡೆಸಿದ್ದು, ಮುಖ್ಯಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಕೃಷಿಯನ್ನು ರೈತೋದ್ಯಮ ಮಾಡುವುದು ನಮ್ಮ ಕನಸು. ಇದು ಸಾಕಾರಗೊಳ್ಳಬೇಕಾದರೆ ಎಫ್‌ಕೆಸಿಸಿಐ ನಮ್ಮ ಜೊತೆ ಕೈಜೋಡಿಸಬೇಕು. ಯುವ ಸಮುದಾಯ ನಗರಗಳತ್ತ ವಲಸೆ ಹೋಗುತ್ತಿದೆ. ಹೀಗಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕೃಷಿಯನ್ನು ಲಾಭದಾಯಕಗೊಳಿಸುವ ಮೂಲಕ ಯುವಕರು ಕೃಷಿಯಿಂದ ವಿಮುಖರಾಗದಂತೆ ತಡೆಯಬೇಕಿದೆ’ ಎಂದರು.

‘ರೈತರಿಗೆ ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆ ತರಬೇತಿ ನೀಡಲು ಮುಂದಾಗಿದ್ದೇವೆ. ಮೈಸೂರಿನಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದಲ್ಲಿ ಪ್ರತಿ ವಾರ ಪ್ರತಿ ಜಿಲ್ಲೆಯಿಂದ 50 ಮಂದಿ ರೈತರು ಭಾಗವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾದರಿಯಲ್ಲಿ ಪ್ರತಿ ಗ್ರಾಮದಲ್ಲೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು ಸ್ಥಾಪನೆಯಾಗಬೇಕು. ಕೋವಿಡ್‌ ಸಮಯದಲ್ಲಿ ಅನೇಕ ಯುವಕರು ನಗರಗಳಿಂದ ಹಳ್ಳಿಗಳಿಗೆ ಹೋಗಿ ನೆಲೆಸಿದ್ದಾರೆ. ಅಂತಹವರು ಇಂತಹ ಸಂಘಗಳಲ್ಲಿ ಸಕ್ರಿಯರಾಗಬೇಕು. ಹಾಗಾದಲ್ಲಿ ರೈತರ ಆದಾಯ ದ್ವಿಗುಣಗೊಳಿಸಬಹುದು’ ಎಂದು ಹೇಳಿದರು.

‘ನವೆಂಬರ್‌ನಲ್ಲಿ ‘ರೈತರೊಂದಿಗೆ ಒಂದು ದಿನ’ ಎಂಬ ಕಾರ್ಯಕ್ರಮ ಶುರುಮಾಡಿದ್ದೆವು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಆಧುನಿಕ ಕೃಷಿ ಪದ್ಧತಿಗಳು, ಆಹಾರ ಸಂಸ್ಕರಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ನುಡಿದರು.

ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ.ಸುಂದರ್‌ ಹಾಗೂ ಇತರರು ಇದ್ದರು.

ಎಲ್ಲಿದೆರೀ ಕೋವಿಡ್‌...
ಸಂವಾದದ ವೇಳೆ ಸಚಿವರು ಕರವಸ್ತ್ರದಿಂದ ಪದೇ ಪದೇ ಮುಖ ಒರೆಸಿಕೊಳ್ಳುತ್ತಿದ್ದರು. ಕೊಠಡಿಯಲ್ಲಿದ್ದ ಎ.ಸಿ.ಕೆಲಸ ಮಾಡುತ್ತಿಲ್ಲ ಎಂಬುದನ್ನು ಮನಗಂಡ ಅವರು ಎ.ಸಿ. ಹಾಕಿಲ್ವಾ ಎಂದು ಕೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ನಾರಾಯಣ ಸ್ವಾಮಿ ‘ಕೋವಿಡ್‌ ಇದೆಯಲ್ಲ ಸರ್‌’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ ‘ಎಲ್ಲಿದೆರೀ ಕೋವಿಡ್‌. ಜೀರಿಗೆ, ಅರಿಶಿಣ ತಿನ್ನೋರಿಗೆ ಕೋವಿಡ್‌ ಬರಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು