ಸೋಮವಾರ, ಸೆಪ್ಟೆಂಬರ್ 20, 2021
22 °C
ಶಿವನಹಳ್ಳಿ ಸರ್ವೆ ನಂಬರ್‌ 69ರಲ್ಲಿ ಅರಣ್ಯಕ್ಕಾಗಿ ಜಾಗ ನೀಡಲು ಕಂದಾಯ ಇಲಾಖೆ ಸಿದ್ಧತೆ

ಆನೆ ದಾರಿಗೆ ಸಾವಿರ ಎಕರೆ: ಇಂದಿನಿಂದ ಸರ್ವೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆ ಕಾರಿಡಾರ್‌ ವಿಸ್ತರಿಸಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಇತಿಶ್ರೀ ಹಾಡುವ ಸಲುವಾಗಿ ಕಂದಾಯ ಇಲಾಖೆ 1 ಸಾವಿರ ಎಕರೆಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಮುಂದಾಗಿದೆ.

ಆನೇಕಲ್‌ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‌ 69ರಲ್ಲಿ 1 ಸಾವಿರ ಎಕರೆಯನ್ನು ಆನೆ ಕಾರಿಡಾರ್ ಅಭಿವೃದ್ಧಿಗಾಗಿ ಬಿಟ್ಟುಕೊಡುವ ಬಗ್ಗೆ ಅರಣ್ಯ ಅಧಿಕಾರಿಗಳ ಜೊತೆ ಜಂಟಿ ಸರ್ವೆ ನಡೆಸುವಂತೆ ತಹಸೀಲ್ದಾರ್‌ ದಿನೇಶ್‌ ಅವರಿಗೆ ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಪತ್ರ ಬರೆದಿದ್ದಾರೆ.

‘ಬನ್ನೇರುಘಟ್ಟ ಆಸುಪಾಸಿನ ಗ್ರಾಮಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷ ಕೊನೆಗಾಣಿಸಬೇಕಾದರೆ ಆನೆ ಕಾರಿಡಾರ್‌ ಬಲುಮುಖ್ಯ. ಶಿವನ ಹಳ್ಳಿಯಲ್ಲಿ ಸರ್ಕಾರಿ ಗೋಮಾಳ ಇದೆ. ಆನೆ ಕಾರಿಡಾರ್‌ಗಾಗಿ ಇದನ್ನು ಬಿಟ್ಟುಕೊಡುವಂತೆ ಅರಣ್ಯ ಇಲಾಖೆಯವರು ಪ್ರಸ್ತಾವನೆ ಸಲ್ಲಿಸಿದ್ದರು. ಇಲ್ಲಿ ಎಷ್ಟು ಜಾಗ ಲಭ್ಯ ಇದೆ, ಒತ್ತುವರಿಗಳೇನಾದರೂ ಇವೆಯೇ, ಸರ್ಕಾರ ಯಾರಿಗಾದರೂ ಜಮೀನು ಮಂಜೂರು ಮಾಡಿದೆಯೇ ಎಂಬುದನ್ನು ಪರಿಶೀಲಿಸಿ ನಂತರವಷ್ಟೇ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳಬಹುದು. ಈ ಸಲುವಾಗಿ ಅರಣ್ಯ ಇಲಾಖೆ ಜೊತೆ ಸೇರಿ ಸರ್ವೆ ನಂಬರ್‌ 69ರ ಜಾಗದ ಸಮಗ್ರ ಸರ್ವೆ ನಡೆಸುವಂತೆ ಆನೇಕಲ್‌ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೇನೆ’ ಎಂದು ಜೆ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು

‘ಸರ್ವೆ ನಂಬರ್‌ 69ರಲ್ಲಿ 16 ಹಳ್ಳಿಗಳು ಬರುತ್ತವೆ. ಇಲ್ಲಿ 1970ರಲ್ಲಿ ಅನೇಕರಿಗೆ ಜಮೀನು ಮಂಜೂರಾಗಿದ್ದು, ಜನವಸತಿ ಎಷ್ಟಿದೆ ಎಂದು ನೋಡಬೇಕಿದೆ. ಈ ಚಿತ್ರಣ ಸಿಕ್ಕಿದರೆ ಅವರ ಪುನರ್ವಸತಿಗೂ ಕ್ರಮಕೈಗೊಳ್ಳಲು ಅನುಕೂಲವಾಗಲಿದೆ. ಅವರಿಗೆ ಪರ್ಯಾಯ ಜಮೀನು ಅಥವಾ ನಗದು ಪರಿಹಾರ ನೀಡುವ ಬಗ್ಗೆ ನಿರ್ಣಯ ತಳೆಯಲು ಇಂತಹ ಮಾಹಿತಿ ಅಗತ್ಯವಿದೆ’ ಎಂದು ಅವರು ವಿವರಿಸಿದರು.

‘ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡಿರುವ ದೂರುಗಳೂ ಇವೆ. ಒತ್ತುವರಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದೇನೆ. ಕೆಲವು ಜಮೀನುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿವೆ. ಅವುಗಳ ಬಗ್ಗೆಯೂ ಮಾಹಿತಿ ಕಲೆ ಹಾಕುವಂತೆ ಹೇಳಿದ್ದೇನೆ’ ಎಂದರು. 

‘1 ಸಾವಿರ ಎಕರೆಯಲ್ಲಿ ಬಹುತೇಕ ಕಡೆ ಕಾಡಿನ ವಾತಾವರಣವೇ ಇದೆ. ಹಾಗಾಗಿ ಸರ್ವೆಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಜೊತೆಗೆ ಕೋವಿಡ್‌ ನಿಯಂತ್ರಣ ಕಾರ್ಯದ ಬಗ್ಗೆಯೂ ಗಮನ ಹರಿಸಬೇಕಿದೆ. ನಾವು ಸೋಮವಾರದಿಂದಲೇ ಸಮಗ್ರ ಸರ್ವೆ ಕಾರ್ಯ ಆರಂಭಿಸಲಿದ್ದೇವೆ. ವರದಿ ಸಿದ್ಧಪಡಿಸಿ ಶೀಘ್ರವೇ ಸಲ್ಲಿಸಲಿದ್ದೇವೆ’ ಎಂದು ತಹಸೀಲ್ದಾರ್‌ ದಿನೇಶ್‌ ಮಾಹಿತಿ ನೀಡಿದರು.

ಆನೆಗಳ ಸಾವು
ರಾಗಿಹಳ್ಳಿ ಸಮೀಪ 2020ರ ಮಾರ್ಚ್‌ನಲ್ಲಿ ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿತ್ತು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆ ಮಾಡಿದರೂ ಅದು ಉಳಿಯಲಿಲ್ಲ. ಒಂದೇ ವರ್ಷದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಆಸುಪಾಸಿನ ಪ್ರದೇಶಗಳಲ್ಲಿ ಮೂರು ಆನೆಗಳು ಮಾನವ ಕೃತ್ಯದಿಂದಾಗಿ ಕೊನೆಯುಸಿರೆಳೆದಿವೆ.

ರಾಷ್ಟ್ರೀಯ ಉದ್ಯಾನ–ಅಗಲ ತೀರಾ ಕಿರಿದು
’ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಉತ್ತರದಿಂದ ದಕ್ಷಿಣದವರೆಗೆ 59 ಕಿ.ಮೀ ಉದ್ದಕ್ಕೆ ವ್ಯಾಪಿಸಿದೆ. ಆದರೆ, ಅಗಲ ಬಹಳ ಕಡಿಮೆ ಇದೆ. ಎಲ್ಲ ಕಡೆ ವಸತಿಗಳು ಬಂದಿವೆ. ಕೃಷಿ ಚಟುವಟಿಕೆ ಹೆಚ್ಚಿದೆ. ರಸ್ತೆಗಳು ನಿರ್ಮಾಣವಾಗಿವೆ. ಹಾಗಾಗಿ ಆನೆಗಳು ಅಡೆತಡೆ ಇಲ್ಲದೇ ಅಡ್ಡಾಡಲು ಅವಕಾಶ ಕಡಿಮೆ ಇದೆ. 1 ಸಾವಿರ ಎಕರೆಯನ್ನು ಆನೆ ಕಾರಿಡಾರ್‌ಗೆ ನೀಡುವುದು ಮಾನವ–ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸಲಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘1 ಸಾವಿರ ಎಕರೆ ಪ್ರದೇಶದಲ್ಲಿ ಕಾಡನ್ನಾಗಿ ಉಳಿಸಿಕೊಳ್ಳಬಹುದಾದ ಜಾಗ ಬಹಳಷ್ಟಿದೆ. ಒತ್ತುವರಿ ಸಮಸ್ಯೆಯಿಂದಾಗಿ ಈ ಕಾಡಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಈ ಜಾಗ ಡೀಮ್ಡ್‌ ಫಾರೆಸ್ಟ್‌ ಎಂದು ಅಧಿಕೃತವಾಗಿ ಗುರುತಿಸದ ಕಾರಣ ಒತ್ತುವರಿ ತಡೆಯಲು ಅರಣ್ಯ ಇಲಾಖೆಯವರಿಗೆ ಸಾಧ್ಯವಾಗುತ್ತಿಲ್ಲ. 1 ಸಾವಿರ ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಅದನ್ನು ಕಾಡಿನ ರೂಪದಲ್ಲೇ ಕಾಪಾಡಬಹುದು’ ಎಂದು ಅವರು ವಿವರಿಸಿದರು.

‘ಹಸ್ತಕ್ಷೇಪ ಹೆಚ್ಚಿದಷ್ಟೂ ಸಂಘರ್ಷ ಹೆಚ್ಚು’
‘ಆನೆಗಳು ಅಡ್ಡಾಡುವ ಹಾದಿಗೆ ನೂರಾರು ವರ್ಷಗಳ ನಂಟು ಇರುತ್ತದೆ. ನಿರ್ದಿಷ್ಟ ಋತುವಿನಲ್ಲಿ ಸಿಗುವ ಆಹಾರದ ಕಾರಣಕ್ಕೆ, ಸಂಗಾತಿಯ ಹುಡುಕಾಟ ಹೀಗೆ ನಾನಾ ಕಾರಣಗಳಿಗಾಗಿ ಆನೆಗಳು ಒಂದೆಡೆಯಿಂದ ಮತ್ತೊಂದೆಡೆ ಸಾಗುತ್ತವೆ’ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ವಿಜಯ್‌ ನಿಶಾಂತ್‌.

‘ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಗ್ರಾಮಗಳಲ್ಲಿ ರೆಸಾರ್ಟ್‌ಗಳು ಅಕ್ರಮವಾಗಿ ತಲೆ ಎತ್ತುತ್ತಿವೆ. ಇದು ಈ ಪರಿಸರದಲ್ಲಿ ಜನರ ಹಾಗೂ ವಾಹನಗಳ ಓಡಾಟ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆನೆಗಳ ಸಹಜ ಹಾದಿ ಛಿದ್ರಗೊಂಡು ಮಾನವ ಹಸ್ತಕ್ಷೇಪ ಹೆಚ್ಚಿದಷ್ಟೂ ಸಂಘರ್ಷ ಹೆಚ್ಚಲಿದೆ. ಇದನ್ನು ತಪ್ಪಿಸಬೇಕಿದೆ’ ಎಂದರು. 

 ***

ತುರ್ತಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಆನೆ ಕಾರಿಡಾರ್‌ಗೆ ಆದಷ್ಟು ಬೇಗ ಜಾಗ ಬಿಟ್ಟುಕೊಡಬೇಕು.
-ವಿಜಯ ನಿಶಾಂತ್‌, ವನ್ಯಜೀವಿ ಕಾರ್ಯಕರ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು