ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBMP: ಕಾರ್ಪೊರೇಟರ್‌ಗಳಿಲ್ಲದ ಮೂರುಮುಕ್ಕಾಲು ವರ್ಷ

Published 14 ಜೂನ್ 2024, 0:29 IST
Last Updated 14 ಜೂನ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ಕಸ, ಮೋರಿ, ರಸ್ತೆ, ಕೊಳಕು ನೀರಿನಂತಹ ಸಮಸ್ಯೆಗಳ ನಿವಾರಣೆಗೆ ನಾಗರಿಕರು ‘ತರಾಟೆಗೆ ತೆಗೆದುಕೊಳ್ಳುವ’ ಕಾರ್ಪೊರೇಟರ್‌ಗಳಿಲ್ಲದೆ ಮೂರುಮುಕ್ಕಾಲು ವರ್ಷ ಮುಗಿದಿದೆ. ಪಾಲಿಕೆ ರಚನೆಯಾದ ಮೇಲೆ ಮೊದಲ ಬಾರಿಗೆ ಇಷ್ಟು ದೀರ್ಘ ಅವಧಿಯಲ್ಲಿ ಪಾಲಿಕೆ ಕೌನ್ಸಿಲ್‌ ಅಸ್ತಿತ್ವದಲ್ಲಿಲ್ಲ.

1862 ಮುನಿಸಿಪಲ್‌ ಬೋರ್ಡ್‌ನಿಂದ ಸುಮಾರು 162 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರು ಪಾಲಿಕೆಗೆ, ಸ್ಥಳೀಯ ಪ್ರತಿನಿಧಿಗಳೇ ಜೀವಾಳ. ನಗರದ ಅಭಿವೃದ್ಧಿ ಕೆಲಸಗಳಿಗೆ ಕಾರ್ಪೊರೇಟರ್‌ಗಳ ಮೇಲುಸ್ತುವಾರಿಯನ್ನೇ ನಂಬಿಕೊಳ್ಳಲಾಗಿದೆ. ಆದರೆ, 2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಕೌನ್ಸಿಲ್‌ ಅವಧಿ ಮುಕ್ತಾಯವಾಗಿದೆ.

‘ವಿಕೇಂದ್ರೀಕೃತ ಸರ್ಕಾರವಾಗಿ ‘ಪ್ರತಿ ಗ್ರಾಮವೂ ಸ್ವರಾಜ್ಯ’ವಾಗಬೇಕು, ತನ್ನದೇ ವ್ಯವಹಾರಗಳನ್ನು ನೋಡಿಕೊಳ್ಳಬೇಕು’ ಎಂಬುದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ 1992ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ‘ಪಂಚಾಯತ್‌ರಾಜ್‌ ವ್ಯವಸ್ಥೆ’ಯನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದರು. ಆದರೆ, ಇಂತಹ ಆಶಯಕ್ಕೆ ರಾಜ್ಯ ಸರ್ಕಾರ ಆದ್ಯತೆ ಕೊಡುತ್ತಿಲ್ಲ. ಆದ್ದರಿಂದಲೇ ಸ್ಥಳೀಯ ಚುನಾವಣೆಗಳು ಮುಂದಕ್ಕೆ ಹೋಗುತ್ತಲೇ ಇವೆ. 

ಕಾರ್ಪೊರೇಟರ್‌ಗಳಿಲ್ಲದೇ, ಇಷ್ಟು ವರ್ಷಗಳು ಸಚಿವರು ಹಾಗೂ ಶಾಸಕರ ಕೇಂದ್ರೀಕೃತ ಅಧಿಕಾರ ಮುಂದುವರಿದಿರುವುದು ವಿಕೇಂದ್ರೀಕೃತ ಅಧಿಕಾರ ನೀಡುವ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದದ್ದು.

ಇಂತಹ ಕೇಂದ್ರೀಕೃತ ವ್ಯವಸ್ಥೆಯಿಂದ ನಾಗರಿಕರ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಸಿಗದೆ ಪರಿತಪಿಸುತ್ತಿದ್ದಾರೆ. ಸಚಿವರು ಮುಖ್ಯ ಆಯುಕ್ತರು,  ಅದೇನು ಸಹಾಯವಾಣಿ ಮಾಡಿದ್ದರೂ ಅದಕ್ಕೆ ಸ್ಥಳೀಯ ಅಧಿಕಾರಿಗಳು ಸ್ಪಂದಿಸಬೇಕಲ್ಲವೇ? 800 ಚದರ ಕಿ.ಮೀ. ವ್ಯಾಪ್ತಿಯ ನಗರವನ್ನು ಕೇಂದ್ರ ಕಚೇರಿಯಲ್ಲಿ ಕುಳಿತ ಮುಖ್ಯ ಆಯುಕ್ತರು ಅಥವಾ ಮೇಯರ್‌ ಸ್ಥಾನದಲ್ಲಿ ಕುಳಿತಿರುವ ಆಡಳಿತಗಾರರು ಜನರೊಂದಿಗೆ ಜನಪ್ರತಿನಿಧಿಗಳಂತೆ ಬೆರೆಯುತ್ತಾರೆಯೇ?

‘ಖಂಡಿತಾ ಇಲ್ಲ’ ಎಂಬುದು ನಾಗರಿಕರಿಂದ ವ್ಯಕ್ತವಾಗುವ ಮಾತು. ‘ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲೇ ಇರುವ ಕಾರ್ಪೊರೇಟರ್‌ಗಳು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಅವರ ಮನೆಗೆ ಹೋಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಜೋರೂ ಮಾಡಬಹುದು. ಆದರೆ, ಅಧಿಕಾರಿಗಳು ನಮ್ಮೊಂದಿಗೆ ಮಾತೂ ಆಡುವುದಿಲ್ಲ. ಮೂರು ವರ್ಷದಿಂದ ಸಾಮಾನ್ಯ ಸಮಸ್ಯೆಗಳನ್ನು ಹೇಳಿಕೊಂಡರೂ ಅಧಿಕಾರಿ ಸ್ಪಂದಿಸುತ್ತಿಲ್ಲ’ ಎಂಬು ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಕಾರ್ಪೊರೇಟರ್‌ಗಳಿದ್ದರೆ ಎಲ್ಲವೂ ಸರಿ ಇರುತ್ತದೆ ಎಂದೇನೂ ಇಲ್ಲ. ಶಾಸಕರು, ಅಧಿಕಾರಿಗಳಿಂತ ಅವರಿಂದಲೇ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಪರಿಹಾರ ಸಿಗುತ್ತದೆ.

ಸಾಕು... ಸಾಕಾಯಿತು...

‘ದಾಸರಹಳ್ಳಿಯ ಪ್ರದೇಶವೊಂದರಲ್ಲಿ ಕಳೆದ ಒಂದು ವಾರದಿಂದ ಕಸ ವಿಲೇವಾರಿ ಆಗಿರಲಿಲ್ಲ. ಆ ಭಾಗದಲ್ಲಿ ರಸ್ತೆ ಅಗೆದು ವಾರವಾಗಿದ್ದರೂ ದುರಸ್ತಿ ಮುಗಿದಿಲ್ಲ. ಹೀಗಾಗಿ ತ್ಯಾಜ್ಯ ಸಂಗ್ರಹಿಸುವವರು ಬರುತ್ತಿರಲಿಲ್ಲ. ಬಿಬಿಎಂಪಿಯ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕಸದ ವಾಸನೆ ನಿಯಂತ್ರಿಸಲು ಯಾರಿಗೆ ಹೇಳಬೇಕೋ ಗೊತ್ತಾಗಲಿಲ್ಲ. ಕೊನೆಗೆ ಯಾರ‍್ಯಾರನ್ನೋ ಹಿಡಿದು ಕಸ ವಿಲೇವಾರಿ ಮಾಡಿಸುವಲ್ಲಿ ಸಾಕುಸಾಕಾಯಿತು. ಅದೇ ಕಾರ್ಪೊರೇಟರ್‌ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಅವರೇ ಬೇಕು’ ಎಂದು ಬಡಾವಣೆಯೊಂದರ ನಿವಾಸಿಗಳು ಪ್ರಸಂಗವನ್ನು ವಿವರಿಸಿದರು.

ಪ್ರತಿ ತಿಂಗಳೂ ಸಭೆ!

ಬಿಬಿಎಂಪಿಯಲ್ಲಿ ಕೌನ್ಸಿಲ್‌ ಅಸ್ತಿತ್ವದಲ್ಲಿದ್ದರೆ ಪ್ರತಿ ತಿಂಗಳೂ ಸಭೆ ನಡೆಯುತ್ತದೆ. ನಾಗರಿಕರ ಸಮಸ್ಯೆಗಳನ್ನು ಕಾರ್ಪೊರೇಟರ್‌ಗಳು ಅಲ್ಲಿ ಮಾತನಾಡುತ್ತಾರೆ. ಅವರ ವಾರ್ಡ್‌ಗೆ ಬೇಕಾದ ಸೌಲಭ್ಯ ಮಾಡಬೇಕಾದ ಕಾಮಗಾರಿಗಳ ಬಗ್ಗೆ ಗಮನ ಸೆಳೆಯುತ್ತಾರೆ. ಕಾರ್ಯನಿರ್ವಹಿಸದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಸಂಪೂರ್ಣವಾಗಿ ಜನಪರವಾಗಿಯೇ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ ನಿತ್ಯವೂ ನಾಗರಿಕರು ಎದುರಿಸುವ ಕಸ ವಿಲೇವಾರಿ ರಸ್ತೆ ಗುಂಡಿ ಚರಂಡಿಯಲ್ಲಿ ಹೂಳು ಮರ–ಕೊಂಬೆಗಳ ತೆರವು ವಿದ್ಯುತ್‌ ಕಂಬ ತಂತಿಯ ಸಮಸ್ಯೆ ನೀರು ಸರಬರಾಜಿನ ಅಡೆತಡೆಗೆ ಕಾರ್ಪೊರೇಟರ್‌ ಕೂಡಲೇ ಸ್ಪಂದಿಸುತ್ತಾರೆ. ಅವರ ಅಕ್ಕಪಕ್ಕವಿರುವ ಹುಡುಗರೂ ಓಡಾಡಿ ಕೆಲಸವಾಗುವಂತೆ ನೋಡಿಕೊಳ್ಳುತ್ತಾರೆ.

ಪಾಲಿಕೆ ವಿಭಜನೆ ಬಗ್ಗೆ ಜನ ಏನಂತಾರೆ?

ಚುನಾವಣೆ ಅಭಿವೃದ್ಧಿಗೆ ಅನುಕೂಲ

ಬಿಬಿಎಂಪಿಯನ್ನು ವಿಭಜಿಸುವುದು ಬೇಡ. ಇದರಿಂದ ಬೆಂಗಳೂರು ಅನ್ಯ ಭಾಷಿಗರ ಆಡಳಿತಕ್ಕೆ ಒಳಪಡುವ ಸಂಭವ ಹೆಚ್ಚು. ಇದರ ಬದಲಾಗಿ ಆದಷ್ಟು ಬೇಗ ವಾರ್ಡ್‌ಗಳ ವಿಂಗಡಣೆಯನ್ನು ಬೇಗ ಮುಗಿಸಿ ಚುನಾವಣೆ ನಡೆದರೆ, ಬಿಬಿಎಂಪಿ ಸದಸ್ಯರಿಂದ ಬೆಂಗಳೂರು ಅಭಿವೃದ್ಧಿಗೆ ಅನುಕೂಲವಾಗುತ್ತದೆ.

– ಬಸವರಾಜು ಎಂ. ಎನ್., ರಾಜರಾಜೇಶ್ವರಿ ನಗರ

ಐದು ಬೇಡ, ನಾಲ್ಕು ಮಾಡಿ

ತಲಾ 80 ವಾರ್ಡುಗಳ ಐದು ಪಾಲಿಕೆ ಮಾಡುವ ಬದಲಿಗೆ ಈಗಿರುವ ವಿಸ್ತೀರ್ಣವನ್ನು, ವಿಧಾನಸೌಧವನ್ನು ಕೇಂದ್ರವಾಗಿಸಿ ಲಂಬ ಮತ್ತು ಅಡ್ಡಗೆರೆಗಳು ಮೂಲಕ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಎಂಬ ನಾಲ್ಕು ಪಾಲಿಕೆಗಳನ್ನಾಗಿ ಮಾಡಿದರೆ ಸಮತೋಲನದಿಂದ ಕೂಡಿರುತ್ತದೆ.

– ಬಿ. ರಮೇಶ್, ಸಪ್ತಗಿರಿ ಲೇಔಟ್

ರಾಜಕೀಯ ವಂಶಾವಳಿಗಳ ಹುಟ್ಟು

ಈಗ ಇರುವಂತಹ ವಾರ್ಡ್‌ಗಳನ್ನೇ ವಿಂಗಡಣೆ ಮಾಡಿದರೆ ತುಂಬಾ ಒಳ್ಳೆಯದು. ಐದು ಭಾಗಗಳಾಗಿ ವಿಂಗಡಣೆ ಮಾಡಿದರೆ ಭ್ರಷ್ಟಾಚಾರಗಳು ಜಾಸ್ತಿಯಾಗುತ್ತವೆ. ಬೆಂಗಳೂರು ಪೂರ್ತಿ ರಾಜಕೀಯಮಯವಾಗುತ್ತದೆ. ರಾಜಕೀಯ ವಂಶಾವಳಿಗಳನ್ನು ಹುಟ್ಟು ಹಾಕುವ ಪ್ರಯತ್ನದ ಭಾಗವಾಗಿದೆ.

– ಬಿ.ಪಿ. ಪ್ರಮೋದ್, ಭುವನೇಶ್ವರಿ ಬಡಾವಣೆ

ವಿಭಾಗದಿಂದ ಭ್ರಷ್ಟಾಚಾರ ಮುಕ್ತ

ತಲಾ 80 ವಾರ್ಡ್‌ಗಳ ಐದು ಪಾಲಿಕೆಗಳನ್ನಾಗಿ ಮಾಡುವುದರಿಂದ ಅಧಿಕಾರಿಗಳ ಕೆಲಸದ ಒತ್ತಡ ಕಡಿಮೆಯಾಗಿ ದಕ್ಷತೆಯಿಂದ ಕೆಲಸ ಮಾಡಲು ಮತ್ತು ಭ್ರಷ್ಟಾಚಾರ ಮುಕ್ತ ಬಿಬಿಎಂಪಿಯಾಗಿಸಬಹುದು. ತ್ಯಾಜ್ಯ ಮುಕ್ತ ಬೆಂಗಳೂರು, ಸರಾಗ ಸಂಚಾರದ ಬೆಂಗಳೂರು, ಸುಂದರ ನಗರ ಬೆಂಗಳೂರು ಎನ್ನಿಸಿಕೊಳ್ಳುವ ನಮ್ಮೆಲ್ಲರ ಕನಸು ನಿಜವಾಗಲಿ.

– ಪುಷ್ಪಾ ಶ್ರೀರಾಮರಾಜು, ಪ್ಯಾಲೇಸ್ ಗುಟ್ಟಳ್ಳಿ

ಅನೇಕ ಸಿಬ್ಬಂದಿಯಿಂದ ಸಮಸ್ಯೆ ಪರಿಹಾರ

ಮಹಾನಗರಕ್ಕೆ ಆಡಳಿತ ದೃಷ್ಟಿಯಿಂದ ಐದು ಪಾಲಿಕೆಗಳಾಗಿ ವಿಭಾಗ ಮಾಡುತ್ತಿರುವುದು ಒಳ್ಳೆಯದು. ಇದರಿಂದ ನಗರದ ಮೂಲ ಸೌಕರ್ಯಗಳನ್ನು ಸರಿಯಾದ ಸಮಯಕ್ಕೆ ಪೂರೈಸುವುದು, ಅಧಿಕಾರ ಹಂಚಿಕೆಯಿಂದ ಜನಸಾಮಾನ್ಯರ ಕುಂದು ಕೊರತೆ ಅರಿತು ಕ್ರಮ ತೆಗೆದುಕೊಳ್ಳಬಹುದು. ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಿಸುವುದರಿಂದ ಕಾಲಕಾಲಕ್ಕೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

– ಕರುಣಾವತಿ, ವಿದ್ಯಾರಣ್ಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT